ಡಾ.ರಾಜ್ ಕುಮಾರ್ ರಾಜಕೀಯಕ್ಕೆ ಬರುತ್ತೇನೆ ಎಂದು ಒಂದು ಮಾತು ಹೇಳಿದ್ದರೆ ಸಾಕಿತ್ತು.. ಆಗಿನ ಕಾಲದಲ್ಲಿ ರಾಜಕೀಯ ಪಕ್ಷಗಳು ನಾ ಮುಂದು.. ತಾಮುಂದು.. ಎಂದು ರಾಜ್ ಕಾಲಡಿಯಲ್ಲಿರುತ್ತಿದ್ದವು. ಆದರೆ.. ಡಾ.ರಾಜ್ ಕುಮಾರ್ ಅವರು ರಾಜಕೀಯದ ಸಹವಾಸ ಬೇಡ ಎಂದು ಓಡಿ ಹೋಗಿದ್ದವರು.
ಹಾಗಂತ ಡಾ.ರಾಜ್ ದಡ್ಡರೇನಲ್ಲ. ಆದರೆ ಅದು ಅರ್ಥವಾಗಲ್ಲ. ರಾಜಕೀಯಕ್ಕೆ ಹೋದರೆ.. ನಾವು ನಾವಾಗಿ ಇರಲು ಸಾಧ್ಯವಿಲ್ಲ ಎನ್ನುತ್ತಿದ್ದ ಡಾ.ರಾಜ್, ಕನ್ನಡದ ವಿಷಯದಲ್ಲಿ ರಾಜಿಯಾಗುತ್ತಿರಲಿಲ್ಲ. ಬಂಗಾರಪ್ಪ ಬೀಗರಾಗಿದ್ದರೂ.. ರಾಜಕೀಯ ಅಂತರ ಕಾಯ್ದುಕೊಂಡಿದ್ದ ಡಾ.ರಾಜ್, ಎಲ್ಲ ಪಕ್ಷಗಳ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದರು. ಅಂತಹ ರಾಜ್ ಯಾವತ್ತೂ ಬಂಗಾರಪ್ಪನವರ ಪರವೂ ಪ್ರಚಾರ ಮಾಡಲಿಲ್ಲ. ಬಂಗಾರಪ್ಪನವರು ಕಾಂಗ್ರೆಸ್ʻನಲ್ಲಿದ್ದವರು. ನಂತರ ಕೆಸಿಪಿ, ಕ್ರಾಂತಿರಂಗ ಕಟ್ಟಿದವರು. ಅದಾದ ಮೇಲೆ ಬಿಜೆಪಿ, ಸಮಾಜವಾದಿ ಪಕ್ಷಗಳಲ್ಲೂ ಇದ್ದವರು. ಜೆಡಿಎಸ್ ಜೊತೆ ಒಡನಾಡಿದ್ದವರು. ಆದರೆ.. ಯಾವ ಸಮಯದಲ್ಲೂ ಡಾ.ರಾಜ್ ಬೀಗರ ಪರ ಹೋಗಲಿಲ್ಲ. ಅಂತಹ ಡಾ.ರಾಜ್ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಡಾ. ರಾಜ್‌ಕುಮಾರ್ ನಟನೆಯ ‘ಮಯೂರ’ ಸಿನಿಮಾದದ ದೃಶ್ಯ ನೆನಪಿದೆ ಅಲ್ಲವಾ.. ಪಲ್ಲವರ ದೊರೆಯ ಎದುರು ಕನ್ನಡಿಗರ ಶೌರ್ಯ, ಧೈರ್ಯವನ್ನು ಹೇಳುತ್ತಾ ಹೋಗುವ ಮಯೂರ ವರ್ಮ.. ಪಲ್ಲವರು ಮೋಸದಿಂದ ಕಿತ್ತುಕೊಂಡ ಕನ್ನಡಿಗರ ಸಾಮ್ರಾಜ್ಯವನ್ನು ಮತ್ತೆ ಗೆಲ್ಲುತ್ತೇವೆ ಎಂದು ಸವಾಲು ಹಾಕುವ ದೃಶ್ಯ ಅದು. ಆ ದೃಶ್ಯವನ್ನಿಟ್ಟುಕೊಂಡು.. ಎಡಿಟ್ ಮಾಡಿ ಬೇರೆಯ ವಾಯ್ಸ್ ಕೊಡಲಾಗಿದೆ.
ಈ ದೇಶದ ಪ್ರಧಾನಿ ಆಗಲು ಧಮ್, ತಾಕತ್ತು ಇರಬೇಕು. ಸರ್ಜಿಕಲ್ ಸ್ಟ್ರೈಕ್ ಮಾಡುವ ತಾಕತ್ತು ಯಾರಿಗೆ ಇದೆ? ಆರ್ಟಿಕಲ್ 370 ರದ್ದು ಮಾಡಿ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗವನ್ನಾಗಿ ಮಾಡುವ ತಾಕತ್ತು ಯಾರಿಗೆ ಇದೆ? ದೇಶಾದಾದ್ಯಂತ ಜಿಎಸ್ಟಿ ಜಾರಿಗೆ ತಂದರು. ಆ ತಾಕತ್ತು ಯಾರ ಹತ್ತಿರ ಇದೆ? ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ನಮ್ಮ ದೇಶದವರನ್ನು ವಾಪಸ್ ಕರೆದುಕೊಂಡು ಬಂದರು. ಆ ತಾಕತ್ತು ಯಾರಿಗೆ ಇದೆ? ಕಳೆದ 50 ವರ್ಷಗಳಲ್ಲಿ ಆದ ಅಭಿವೃದ್ಧಿ ಕೇವಲ 10 ವರ್ಷಗಳಲ್ಲಿ ಆಗಿದೆ. ಪ್ರತಿದಿನ 28 ಕಿಲೋ ಮೀಟರ್ ರಸ್ತೆ ಮಾಡುತ್ತಿದ್ದಾರೆ. ಮನೆಮನೆ ಮುಂದೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸಿಕ್ಕಿದೆ. ಬೆಟ್ಟ ಗುಡ್ಡಗಳಲ್ಲೂ ರಸ್ತೆ ಮಾಡಿದ್ದಾರೆ. ಪ್ರತಿ ಹಳ್ಳಿಯಲ್ಲಿ ಇಂಟರ್ನೆಟ್ ಕನೆಕ್ಷನ್ ಇದೆ. ನಮ್ಮ ದೇಶದ ಆರ್ಥಿಕತೆ ಈಗ 4ನೇ ಸ್ಥಾನಕ್ಕೆ ದಾಪುಗಾಲು ಇಡುತ್ತಿದೆ. ಈಗ ಮತ್ತೆ ಮೋದಿ ಪ್ರಧಾನಿ ಆದರೆ ನಮ್ಮ ದೇಶ ವಿಶ್ವದಲ್ಲೇ ನಂ.1 ಆಗುತ್ತದೆ. ಮೋದಿಗೆ ಮಕ್ಕಳು, ಮೊಮ್ಮಕ್ಕಳು ಯಾರೂ ಇಲ್ಲ. ದಿನದ 24 ಗಂಟೆಯೂ ದೇಶಕ್ಕಾಗಿ ಕೆಲಸ ಮಾಡುತ್ತಾ ಇದ್ದಾರೆ. ಅವರು ಈ ದೇಶವನ್ನು ಕಾಯುತ್ತಿರುವ ಕಾಲಭೈರವ. ಅವರಿಗೇ ನಮ್ಮ ಮತ.. ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದೊಂದು ರೀತಿ ಫೇಕ್ ವಿಡಿಯೋ ಎನ್ನುವುದಕ್ಕೆ ಅಡ್ಡಿ ಇಲ್ಲ.
ಈಗಾಗಲೇ ರಣವೀರ್ ಸಿಂಗ್, ಅಮೀರ್ ಖಾನ್, ಅಲ್ಲು ಅರ್ಜುನ್ ಫೇಕ್ ವಿಡಿಯೋ ಮಾಡಿ ಕಾಂಗ್ರೆಸ್ ಪರ ಮತ ಕೇಳುವ ರೀತಿ ಫೇಕ್ ವಿಡಿಯೋ ಮಾಡಲಾಗಿದೆ. ಈಗ ಬಿಜೆಪಿಯವರ ಸರದಿ.
2014ರಲ್ಲಿ ಶಿವ ರಾಜ್ ಕುಮಾರ್ ಅವರ ಪತ್ನಿ ಗೀತಾ ರಾಜಕೀಯಕ್ಕೆ ಬಂದರು. ಜೆಡಿಎಸ್ʻನಿಂದ ನಿಂತು ಸೋತಿದ್ದ ಗೀತಾ, ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ಧಾರೆ. ಶಿವಣ್ಣ ಪತ್ನಿಯ ಪರ ಪ್ರಚಾರ ಮಾಡುತ್ತಿದ್ಧಾರೆ. ಇದೆಲ್ಲದರ ನಡುವೆ ಡಾ.ರಾಜ್ ಅವರನ್ನು ಕೂಡಾ ಬಿಜೆಪಿ ರಾಜಕೀಯಕ್ಕೆ ಎಳೆದು ತಂದಿದೆ.



