ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಡಾ.ಮಂಜುನಾಥ್ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕರಾಗಿ 16 ವರ್ಷ ಸೇವೆ ಸಲ್ಲಿಸಿದ್ದವರು. ಇದೀಗ ಡಿಕೆ ಸುರೇಶ್ ವಿರುದ್ಧ ಡಾ.ಮಂಜುನಾಥ್ ಸ್ಪರ್ಧೆಗಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ.. ಡಾ.ಮಂಜುನಾಥ್ ರಾಜಕೀಯ ಪ್ರವೇಶ, ಮಂಜುನಾಥ್ ಅವರ ಮಾವನೂ ಆಗಿರುವ ದೇವೇಗೌಡರಿಗಾಗಲೀ.. ಪತ್ನಿ ಡಾ.ಅನುಸೂಯ ಮಂಜುನಾಥ್ ಅವರಿಗೂ ಇಷ್ಟವಿಲ್ಲ. ಮಕ್ಕಳಾದ ಡಾ.ಸಾತ್ವಿಕ್ ಹಾಗೂ ಡಾ.ನಮ್ರತಾ ಅವರಿಗೂ ಇಷ್ಟಿವಿಲ್ಲ. ಹೀಗಿದ್ದರೂ.. ರಾಜಕೀಯಕ್ಕೆ ಓಕೆ ಎಂದರೇಕೆ..?
ಇತ್ತೀಚೆಗೆ ಆರ್. ಆರ್. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬಹಿರಂಗವಾಗಿ ಬಿಜೆಪಿ ಸೇರುವಂತೆ ಆಹ್ವಾನ ಕೊಟ್ಟಿದ್ದರು. ಆದರೆ.. ಮಂಜುನಾಥ್ ತಮಗೆ ಯೋಚನೆ ಮಾಡಲು ಸಮಯ ಬೇಕು ಎಂದು ಕೇಳಿದ್ದರು. ಇದೀಗ ಮಂಜುನಾಥ್ ಅವರನ್ನು ಕುಮಾರಸ್ವಾಮಿ ಮನವೊಲಿಸಿದ್ದಾರೆ ಎನ್ನಲಾಗಿದೆ.
ಮಂಜುನಾಥ್ ಅವರನ್ನೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ನಾಯಕರ ಒತ್ತಾಸೆಯಾಗಿದೆ. ಆ ನಾಯಕರ ಭಾವನೆಗಳನ್ನು ನಾವು ಗೌರವಿಸಬೇಕಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಮಂಜುನಾಥ್ ಅವರ ರಾಜಕೀಯ ಪ್ರವೇಶ ದೇವೇಗೌಡರಿಗೆ ಇಷ್ಟವಿರಲಿಲ್ಲ. ಆದರೆ.. ಈ ಸಂಬಂಧ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರ ಜತೆ ಭಾನುವಾರ ಎರಡು ತಾಸುಗಳ ಕಾಲ ಸಮಾಲೋಚನೆ ನಡೆಸಿ ಡಾ.ಮಂಜುನಾಥ್ ಸ್ಪರ್ಧೆ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿದೆ’ ಎಂದೂ ಅವರು ಹೇಳಿದ್ದಾರೆ. ದೇವೇಗೌಡರು ಇತ್ತೀಚೆಗೆ ಬಹಿರಂಗವಾಗಿಯೇ ತಮ್ಮ ಅಳಿಯ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಹಲವು ವೇದಿಕೆಗಳಲ್ಲಿ ತಮ್ಮ ಬಳಿ ಯಾವುದೇ ನೆರವು ಪಡೆಯದೇ ಬೆಳೆದ ಅಳಿಯನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ನಾನು ಮಾಜಿ ಪ್ರಧಾನಿ, ಮಾಜಿ ಸಿಎಂ ಎನ್ನುವ ಗೌರವವೇ ಬೇರೆ. ಡಾ.ಮಂಜುನಾಥ್ ಅವರಿಗೆ ಹೆಣ್ಣು ಕೊಟ್ಟ ಮಾವ ಎನ್ನುವ ಹೆಮ್ಮೆಯೇ ಬೇರೆ ಎಂದು ಎದೆಯುಬ್ಬಿಸಿ ಹೇಳಿಕೊಂಡಿದ್ದವರು. ಆದರೆ.. ಈಗ ಪರಿಸ್ಥಿತಿ ಬದಲಾಗಿದೆ.
ಮಂಜುನಾಥ್ ಅವರ ರಾಜಕೀಯ ಪ್ರವೇಶ ಕುಟುಂಬದ ಯಾರೊಬ್ಬರಿಗೂ ಇಷ್ಟವಿಲ್ಲವಂತೆ. ನ್ನ ಸಹೋದರಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ನಮ್ಮನ್ನು ಯಾಕೆ ರಾಜಕೀಯಕ್ಕೆ ಎಳೆಯುತ್ತೀರಿ, ನೆಮ್ಮದಿಯಿಂದ ಇದ್ದೇವೆ, ನಮಗೆ ರಾಜಕೀಯ ಬೇಡ ಅಂತ ಅಳುತ್ತಾ ಕೂತಿದ್ದಾರೆ. ಇದು ನಮ್ಮ ಮನೆಯ ಪರಿಸ್ಥಿತಿ. ನನ್ನ ನೋವು ನನಗೇ ಗೊತ್ತು. ಆದರೆ, ಆ ಕಿರಾತಕರನ್ನು ಮಣಿಸಲೇಬೇಕು. ಇದು ನನ್ನ ಗುರಿ ಎಂದಿದ್ದಾರೆ ಕುಮಾರಸ್ವಾಮಿ.
ಇದೇ ವೇಳೆ ಮಂಜುನಾಥ್ ಅವರನ್ನು ಹರಕೆಯ ಕುರಿಯನ್ನಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಉತ್ತರ ಕೊಟ್ಟಿರುವ ಕುಮಾರಸ್ವಾಮಿ . ಮಂಜುನಾಥ್ ಅವರು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಲಕ್ಷಾಂತರ ಬಡ ಜನರ ಹೃದಯ ಕಾಪಾಡಿದ್ದಾರೆ. ದೇಶದಲ್ಲಿಯೇ ಅವರ ಸೇವೆಯನ್ನು ಕೊಂಡಾಡುತ್ತಾರೆ. ಅಂತಹ ವ್ಯಕ್ತಿ ದೆಹಲಿಗೆ ಹೋದರೆ ಇಡೀ ದೇಶಕ್ಕೆ ಸೇವೆ ಮಾಡಬಹುದು. ಅವರನ್ನು ಹರಕೆಯ ಕುರಿ ಮಾಡುತ್ತಿಲ್ಲ ಎಂದು ತಿರುಗೇಟು ಕೊಟ್ಟಿದ್ಧಾರೆ.



