ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಗೀತಾ ಶಿವರಾಜ್ʻಕುಮಾರ್ ಸ್ಪರ್ಧೆ ಮಾಡ್ತೀದ್ಧಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಹೆಸರು ಘೋಷಣೆಯಾಗಿದೆ. 2014ರ ನಂತರ ಮತ್ತೊಮ್ಮೆ ದೊಡ್ಮನೆಯವರು ರಾಜಕೀಯ ಅಖಾಡಕ್ಕೆ ಇಳಿಯುತ್ತಿದ್ಧಾರೆ. ಚುನಾವಣೆ ಘೋಷಣೆಯಾದ ಮೇಲೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಗೀತಾ.
2014ರಲ್ಲಿ ಮೊದಲ ಬಾರಿಗೆ ಗೀತಾ ಅಖಾಡಕ್ಕೆ ಇಳಿದಾಗ.. ಶಿವ ರಾಜಕುಮಾರ್, ಗೀತಾ ಅವರ ಪರವಾಗಿ ಮತಯಾಚನೆ ಮಾಡಿದ್ದರು. ಆದರೆ.. ಗೀತಾ ಸೋತಿದ್ದರು. ಇನ್ನು ಕಳೆದ ಬಾರಿ ಶಿವ ರಾಜಕುಮಾರ್ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಕೇವಲ ಭಾವಮೈದುನ ಮಧು ಬಂಗಾರಪ್ಪ ಅಷ್ಟೇ ಅಲ್ಲ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವರ ಪರ ಪ್ರಚಾರ ಮಾಡಿದ್ದರು. ಇದೀಗ ಮತ್ತೊಮ್ಮೆ ಪ್ರಚಾರಕ್ಕೆ ಸಿದ್ಧರಾಗುತ್ತಿದ್ಧಾರೆ. ಇದೇ ವೇಳೆ ದೊಡ್ಮನೆ ರಾಜಕೀಯದಿಂದ ದೂರವೇನೂ ಇರಲಿಲ್ಲ ಎಂದು ಹೇಳಿದ್ಧಾರೆ.
ಆದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1998ರ ನಂತರ ಬಿಜೆಪಿಯನ್ನು ಬಿಟ್ಟು ಬೇರಾರೂ ಗೆದ್ದಿಲ್ಲ. ಖುದ್ದು ಬಂಗಾರಪ್ಪನವರೇ ಯಡಿಯೂರಪ್ಪ ವಿರುದ್ಧ ನಿಂತು ಸೋತಿದ್ದಾರೆ. ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಈಗಾಗಲೇ 3 ಬಾರಿ ಗೆದ್ದಿರೋ ಸಂಸದ. ಹೀಗಿರುವಾಗ ಹೇಗಿದೆ ಈ ಬಾರಿಯ ಪೈಪೋಟಿ ಎಂಬ ಪ್ರಶ್ನೆಗೆ ಖುದ್ದು ಶಿವಣ್ಣ ಉತ್ತರ ಕೊಟ್ಟಿದ್ದಾರೆ.
ನಾವು ಸ್ಪರ್ಧೆ ಮಾಡಲು ಅಖಾಡಕ್ಕೆ ಇಳಿದಿದ್ದೀವಿ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಕರ್ನಾಟಕ ಯಾರ ಭದ್ರಕೋಟೆ ಅನ್ನೋದು ಇಂಪಾರ್ಟೆಂಟ್ ಅಲ್ಲ. ಒಟ್ಟಿನಲ್ಲಿ ಸ್ಪರ್ಧೆ ಮಾಡ್ತೀವಿ ಅಖಾಡಕ್ಕೆ ಇಳಿದೀವಿ ಗೆಲ್ತೀವಿ. ರಾಜಕೀಯದಲ್ಲಿ ಯಾವುದೇ ಟ್ರೆಂಡ್ ಇಲ್ಲ ಎಂದಿದ್ಧಾರೆ.
ಕಳೆದ ಬಾರಿ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದೆವು. ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೇವೆ. ಕಳೆದ ಬಾರಿಗೂ ಈ ಬಾರಿಗೂ ವ್ಯತ್ಯಾಸ ಇದೆ. ಈ ಬಾರಿ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗೀತಾ ಅವರು ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದಿದ್ದು ಓದಿದ್ದು ಕೂಡ ಅಲ್ಲೇ. ಅದು ಅವರ ತವರು ಮನೆ ಶಿವಮೊಗ್ಗ. ಅವರ ತವರು ಮನೆಗೆ ಯಾವಾಗಾದ್ರು ಹೋಗಬಹುದು ಬರಬಹುದು. ಶಿವಮೊಗ್ಗ ಸಮಸ್ಯೆ ಗೀತಾ ಅವರಿಗೆ ಗೊತ್ತಿದೆ. ಯಾಕಂದ್ರೆ ಅವರ ತಂದೆ ಅವರ ಸಹೋದರ ರಾಜಕೀಯದಲ್ಲಿ ಇದ್ದವರು. ಅವರಿಗೂ ಕೂಡ ಎಲ್ಲ ಗೊತ್ತಿದೆ. ಅಖಾಡಕ್ಕೆ ಬಂದಾಗ ಫೇಸ್ ಮಾಡಬೇಕು ನುಗ್ಗಬೇಕು. ಯಾವುದೇ ಕ್ಷೇತ್ರ ಇರಲಿ ಆತ್ಮವಿಶ್ವಾಸದಿಂದ ನುಗ್ಗಬೇಕು. ಪ್ರಚಾರ ಹೇಗೆ ಸ್ಟಾರ್ಟ್ ಮಾಡ್ತಾರೆ ಹಾಗೆ ಹೋಗಬೇಕು ಎಂದಿರುವ ಶಿವ ರಾಜ್ ಕುಮಾರ್.. ತಮ್ಮ ಕುಟುಂಬ ರಾಜಕೀಯದಿಂದ ದೂರವೇನೂ ಇಲ್ಲ. ಯಾವುದನ್ನೂ ಬೇಡ ಅನ್ನೋಕೆ ಆಗೋದಿಲ್ಲ. ಎಲ್ಲ ರಾಜಕೀಯ ನಾಯಕರೂ ಅಪ್ಪಾಜಿಯನ್ನು ಭೇಟಿ ಮಾಡ್ತಾ ಇದ್ದರು ಅಂತಾ ನೆನಪಿಸಿಕೊಂಡಿದ್ದಾರೆ.
ಅನುಮಾನವೇ ಇಲ್ಲ. ಹೊಸದಾಗಿ ಅಧಿಕಾರ ವಹಿಸಿಕೊಂಡ ಸಿಎಂ, ಸಚಿವರು ಡಾ.ರಾಜ್ ಅವರ ಮನೆಯೂ ಸೇರಿದಂತೆ ಕೆಲವರನ್ನು ಭೇಟಿ ಮಾಡುವುದು ಸಹಜವಾಗಿತ್ತು. ಕಾಂಗ್ರೆಸ್ ಅಷ್ಟೇ ಅಲ್ಲ, ಜನತಾ ಪಕ್ಷ, ಜನತಾ ದಳ, ಬಿಜೆಪಿಯಿಂದ ಸಿಎಂ ಆದವರೆಲ್ಲ ರಾಜ್ ಮನೆಗೆ ಹೋಗಿ ಬರುವುದು ಸಂಪ್ರದಾಯವೇ ಆಗಿ ಹೋಗಿತ್ತು. ಕಾಂಗ್ರೆಸ್ಸಿನಲ್ಲಿದ್ದ ಬಂಗಾರಪ್ಪ, ಹಲವು ಪಕ್ಷಗಳನ್ನು ಬದಲಿಸಿದರೂ.. ರಾಜಕೀಯ ವೇದಿಕೆಗಳಲ್ಲಿ ರಾಜ್ ಕಾಣಿಸಿಕೊಳ್ಳಲಿಲ್ಲ. ಬೇರೆ ಪಕ್ಷಗಳ ಲೀಡರ್ಸ್ ಜೊತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರಾದರೂ.. ಕನ್ನಡದ ವಿಷಯ ಬಂದಾಗ ರಾಜ್ ಯಾವ ರೀತಿಯ ಮುಲಾಜನ್ನೂ ನೋಡುತ್ತಿರಲಿಲ್ಲ. ಈಗ ಶಿವಣ್ಣ ಹೀಗೆ ಹೇಳಿದ್ಧಾರೆ.



