ಬೆಂಗಳೂರು ಗ್ರಾಮಾಂತರ ಈಗ ಇಡೀ ರಾಜ್ಯದ ಐಕಾನ್ ಕ್ಷೇತ್ರ. ಏಕೆಂದರೆ ಅಲ್ಲಿ ಡಿಕೆ ಸುರೇಶ್ ಎದುರು ಡಾ.ಮಂಜುನಾಥ್ ಅಭ್ಯರ್ಥಿ. ಡಿಕೆ ಸುರೇಶ್, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಆಗಿರುವ ಡಿಕೆ ಶಿವಕುಮಾರ್ ತಮ್ಮ. ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ರಾಜ್ಯದ ಏಕೈಕ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಆಗ ಡಿಕೆ ಶಿವಕುಮಾರ್ ಪಕ್ಷದಲ್ಲಿ ಎಲ್ಲರಂತೆ ಒಬ್ಬ ಲೀಡರ್, ಅಷ್ಟೆ. ಈಗ ಹಾಗಲ್ಲ. ಅವರು ರಾಜ್ಯ ಕಾಂಗ್ರೆಸ್ʻನಲ್ಲಿ ನಂ.೨ ಸ್ಟ್ರಾಂಗ್ ಲೀಡರ್. ಆದರೆ.. ಎದುರಾಳಿಯಾಗಿರುವುದು ಡಾ.ಮಂಜುನಾಥ್. ಮಾಜಿ ಪ್ರಧಾನಿ ದೇವೇಗೌಡರ ಅಳಿಯ. ಮಾಜಿ ಸಿಎಂ ಕುಮಾರಸ್ವಾಮಿಯವರ ಭಾವ. ಆದರೆ.. ನಾವೇ ಗೆಲ್ಲೋದು.. ಭಯ ಬೇಡ ಅಂತಿದ್ಧಾರೆ ಡಿಕೆ ಶಿವಕುಮಾರ್.
ಈ ಬಾರಿ ಕನಿಷ್ಠ 3 ಲಕ್ಷ ಮತಗಳ ಅಂತರದಿಂದ ಡಿಕೆ ಸುರೇಶ್ ಗೆಲ್ಲುತ್ತಾರೆ ಎನ್ನುವುದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ವಿಶ್ವಾಸ. ರಾಮನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಆನೇಕಲ್, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಇದೀಗ ರಾಮನಗರಕ್ಕೆ ಬಂದಿದ್ದೇನೆ. ಡಿಕೆ ಸುರೇಶ್ ಅಭಿವೃದ್ಧಿ ಕೆಲಸ ಮಾಡಿದ್ದಾನೆ. ನಮ್ಮ ಸರ್ಕಾರ ಸಹ ಅಭಿವೃದ್ಧಿ ಮಾಡಿದೆ. ಹೀಗಾಗಿ ಈ ಬಾರಿ ಅತಿ ಹೆಚ್ಚು ಮತಗಳನ್ನ ಪಡೆದು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.
ಬಿಜೆಪಿ ಡಿಕೆ ಸುರೇಶ್‌ರನ್ನ ಟಾರ್ಗೆಟ್ ಮಾಡಿದೆ. ಈ ಹಿಂದೆಯೂ ಇದೇ ರೀತಿ ಡಿಕೆ ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿಯನ್ನ ನಿಲ್ಲಿಸಿದ್ರು. ಆದರೆ ಈಗ ಬೇರೆ ಏನೂ ನಡೀತಿಲ್ಲ ಅಂತಾ ಚಿಹ್ನೆ ಬದಲಾಯಿಸಿದ್ದಾರೆ ಅಷ್ಟೇ. ಚನ್ನಪಟ್ಟಣದಲ್ಲಿ ಹೆಚ್ಚು ಕಾರ್ಯಕರ್ತರು ಬರ್ತಿದ್ದಾರೆ. ಯೋಗೇಶ್ವರ ಸಹ ಗೊತ್ತಲ್ಲ ಹೊಂದಾಣಿಕೆ ಆಗಿಲ್ಲ ಎಂದಿರುವ ಡಿಕೆ ಶಿವಕುಮಾರ್, ಕಳೆದ ಬಾರಿಗಿಂತ ದೊಡ್ಡ ಅಂತರದಲ್ಲಿ ಡಿಕೆ ಸುರೇಶ್ ಗೆಲ್ಲುತ್ತಾನೆ ಎಂದು ತಮ್ಮನ ಗೆಲುವಿನ ಭವಿಷ್ಯ ನುಡಿದಿದ್ದಾರೆ.
ಇತ್ತ ಬಿಜೆಪಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಟಾಲಿವುಡ್ ನಟ ಪವನ್ ಕಲ್ಯಾಣ್ ಬಲ ಸಿಗುತ್ತಿದೆ. ಕ್ಷೇತ್ರದಲ್ಲಿ 3 ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿವೆ. ಬೆಂಗಳೂರು ದಕ್ಷಿಣ, ಆನೇಕಲ್ ಹಾಗೂ ರಾಜರಾಜೇಶ್ವರಿ ನಗರ. ಇಲ್ಲಿ ಕಳೆದ ಬಾರಿಯೂ ಬಿಜೆಪಿ ಮುನ್ನಡೆ ಪಡೆದಿತ್ತು. ಆದರೆ.. ಕನಕಪುರ, ರಾಮನಗರ, ಚೆನ್ನಪಟ್ಟಣ ಹಾಗೂ ಕುಣಿಗಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಲೀಡ್ ಸಿಕ್ಕಿತ್ತು.
ಈಗಲೂ ವಿಧಾನಸಭೆ ಲೆಕ್ಕ ನೋಡಿದರೆ.. ಕಾಂಗ್ರೆಸ್ ಮುನ್ನಡೆಯಲ್ಲಿದೆ. ಆದರೆ.. ಬಿಜೆಪಿ ಮತ್ತು ಜೆಡಿಎಸ್ ಮತಗಳು ಒಗ್ಗೂಡಿದರೆ.. ಆಗ ಡಾ.ಮಂಜುನಾಥ್ ಗೆಲುವು ಶತಃಸಿದ್ಧವಾಗಲಿದೆ. ಆದರೆ.. ಮತಗಳು ಒಗ್ಗೂಡಿದರೆ ಮಾತ್ರ ಎನ್ನುವುದನ್ನು ಮರೆಯಬಾರದು.
ಡಾ.ಮಂಜುನಾಥ್ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಡಿಕೆ ಬ್ರದರ್ಸ್ ಕೂಡಾ ಕ್ಷೇತ್ರವನ್ನು ಪ್ರಬಲವಾಗಿ ತೆಗೆದುಕೊಂಡಿದ್ದಾರೆ. ಅಂದರೆ.. ಡಿಕೆ ಸುರೇಶ್.. ಕ್ಷೇತ್ರವನ್ನು ಬಿಟ್ಟು ಎಲ್ಲಿಯೂ ಹೋಗುತ್ತಿಲ್ಲ. ಡಿಕೆ ಶಿವಕುಮಾರ್ ಕೂಡಾ ಪ್ರತಿದಿನಕ್ಕೆ ಒಮ್ಮೆ ಕ್ಷೇತ್ರದ ಯಾವುದಾದರೂ ಕಡೆ ಆಕ್ಟಿವ್ ಆಗಿದ್ದಾರೆ. ತಮ್ಮನ ಗೆಲುವು ಅವರಿಗೆ ತುಂಬಾ ಮುಖ್ಯ.



