ನಟ ದರ್ಶನ್ ಅವರಿಗೆ ಕಾರುಗಳ ಕ್ರೇಜ್ ಇರೋದು ಗೊತ್ತು. ದರ್ಶನ್ ಅವರ ಬಳಿ ಬಿಎಂಡಬ್ಲ್ಯು, ಲ್ಯಾಂಬೋರ್ಗಿನಿ, ಜಾಗ್ವಾರ್ ಸೇರಿದಂತೆ ದೊಡ್ಡ ದೊಡ್ಡ ಕಾರುಗಳಿವೆ. ಈಗ ದರ್ಶನ್ ಅವರ ಚಿತ್ರಗಳಿಂದಲೇ ಹೆಸರು ಮಾಡಿದ ಡೈರೆಕ್ಟರ್ ಕೂಡಾ ಐಷಾರಾಮಿ ಕಾರುಗಳ ಕ್ರೇಜ್ ಹಚ್ಚಿಕೊಂಡಿದ್ಧಾರೆ.
ತರುಣ್ ಸುಧೀರ್. ಹಿರಿಯ ನಟ ಸುಧೀರ್ ಅವರ ಮಗ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ಇತ್ತೀಚೆಗೆ ಕಾಟೇರ ಸಿನಿಮಾ ಇಂಡಸ್ಟ್ರಿಯಲ್ ಹಿಟ್ ಎನಿಸಿಕೊಂಡಿತ್ತು. ಅಂತಹ ತರುಣ್ ಮನೆಗೀಗ ಬಿಎಂಡಬ್ಲ್ಯು ಕಾರ್ ಬಂದಿದೆ. ತಾಯಿ ಮಾಲತಿ ಸುಧೀರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಸಂಭ್ರಮಿಸಿದ್ಧಾರೆ ತರುಣ್. ತರುಣ್ ಖರೀದಿಸಿರುವ ಕಾರಿನ ಬೆಲೆ 60 ಲಕ್ಷಕ್ಕಿಂತ ಹೆಚ್ಚು.
ತರುಣ್ ಅವರಂತೂ ಕಾಟೇರ ಚಿತ್ರದ ಯಶಸ್ಸಿನಿಂದ ಸಖತ್ ಬ್ಯುಸಿಯಾಗಿದ್ಧಾರೆ. ಬಿಜೆಪಿ ಮುಖಂಡ, ದರ್ಶನ್ ಅವರ ಆಪ್ತ ಸಚ್ಚಿದಾನಂದ ಇಂಡುವಾಳು ನಿರ್ಮಾಣ ಮಾಡಲಿರುವ ಮೊದಲ ಸಿನಿಮಾಕ್ಕೆ ದರ್ಶನ್ ಹೀರೋ ಮತ್ತು ತರುಣ್ ಡೈರೆಕ್ಟರ್. ದರ್ಶನ್ ನಾಯಕತ್ವದಲ್ಲಿ ‘ವೀರ ಸಿಂಧೂರ ಲಕ್ಷ್ಮಣ’ ಚಿತ್ರಕ್ಕೂ ತರುಣ್ ಅವರೇ ಡೈರೆಕ್ಟರ್. ಅಂದಹಾಗೆ ಸುಧೀರ್ ಎಂಬ ಕಲಾವಿದನನ್ನು ಕನ್ನಡ ಚಿತ್ರರಂಗದವರು ಸಿಂಧೂರ ಲಕ್ಷ್ಮಣ ಚಿತ್ರದ ಮೂಲಕವೇ ಗುರುತಿಸಿದ್ದು. ರಂಗಭೂಮಿಯಲ್ಲಿ ಸುಧೀರ್ ಸಿಂಧೂರ ಲಕ್ಷ್ಮಣ ಪಾತ್ರದಿಂದಲೇ ಖ್ಯಾತಿ ಪಡೆದಿದ್ದವರು.
ಅಂದಹಾಗೆ ಇದುವರೆಗೆ ತರುಣ್ ಮಾಡಿರುವ ಮೂರು ಚಿತ್ರಗಳಲ್ಲೂ ದರ್ಶನ್ ಇದ್ದಾರೆ. ಚೌಕ, ರಾಬರ್ಟ್ ಮತ್ತು ಕಾಟೇರಗಳಲ್ಲಿ ದರ್ಶನ್ ನಟಿಸಿದ್ದರು. ಇನ್ನು ಮುಂದಿನ ಎರಡು ಚಿತ್ರಗಳಲ್ಲೂ ದರ್ಶನ್ ನಟಿಸುತ್ತಿದ್ದಾರೆ. ಇನ್ನು, ತರುಣ್ ಸುಧಿರ್ ಅವರು ಇದೇ ಮೊದಲ ಬಾರಿಗೆ ಕಿರುತೆರೆ ಅಂಗಳಕ್ಕೂ ಕಾಲಿಟ್ಟಿದ್ದು, ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋನ ಜಡ್ಜ್ʻಗಳಲ್ಲಿ ಒಬ್ಬರಾಗಿದ್ದಾರೆ.
ಅಂದಹಾಗೆ ಕನ್ನಡದಲ್ಲಿ ನಿರ್ದೇಶಕರು ಐಷಾರಾಮಿ ಕಾರುಗಳಲ್ಲಿ ಓಡಾಡುವುದು ಚಿತ್ರರಂಗವೇ ಥ್ರಿಲ್ ಆಗಬೇಕಾದ ಸುದ್ದಿ. ಬಹುಶಃ ಕನ್ನಡದಲ್ಲಿ ಕೆಲವೇ ಕೆಲವು ಡೈರೆಕ್ಟರ್ಸ್ ಐಷಾರಾಮಿ ಕಾರುಗಳನ್ನು ಮ್ಯಾನೇಜ್ ಮಾಡುತ್ತಿದ್ಧಾರೆ. ನಟರ ಬಳಿ ಇಂತಹ ಕಾರುಗಳಿರುವುದು ವಿಶೇಷವೇನಲ್ಲ.
ಸ್ಟಾರ್ ನಟರಿಂದ ಆರಂಭಗೊಂಡು.. ತೀರಾ ಇತ್ತೀಚೆಗೆ ಬಂದ ಹೀರೋಗಳೂ ಐಷಾರಾಮಿ ಕಾರು ಇಟ್ಟುಕೊಂಡಿದ್ಧಾರೆ. ಆದರೆ.. ನಿರ್ದೇಶಕರ ಲಿಸ್ಟ್ ನೋಡಿದರೆ.. ಹಾಗೆ ಸಿಗುವುದಿಲ್ಲ. ಯೋಗರಾಜ್ ಭಟ್ ಅವರಿಗೆ ಅಂತಹ ಕ್ರೇಜ್ ಇಲ್ಲ. ಸೂರಿಯವರಿಗೂ ಅಷ್ಟೆ. ಅಫ್ʻಕೋರ್ಸ್.. ಅವರಿಗೆ ಅಂತಹ ಕಾರು ಇಟ್ಟುಕೊಳ್ಳುವ ತಾಕತ್ತಿದೆ. ಆದರೆ.. ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ, ಇದೀಗ ತರುಣ್ ಸುಧೀರ್ ಸೇರಿದಂತೆ ಕೆಲವೇ ಕೆಲವರು ಮಾತ್ರ ಇಂತಹ ಐಷಾರಾಮಿ ಕಾರು ಇಟ್ಟುಕೊಂಡಿದ್ಧಾರೆ.
ಅಂದಹಾಗೆ ಇಲ್ಲಿ ಖುಷಿಯಾಗುವುದು ಮಾಲತಿ ಸುಧೀರ್ ಅವರ ಬಗ್ಗೆ. ಇವರು ಇರುವ ಮನೆಗೆ ಅಂಬರೀಷ್ ನಿಲಯ ಎಂಬ ಹೆಸರಿದೆ. ಅಂದರೆ.. ಮನೆ ಕಟ್ಟುವಾಗ ಅಂಬರೀಷ್ ಮಾಡಿದ ಸಹಾಯದ ನೆನಪಿಗೆ.. ಹಾಗೆ ಒಬ್ಬ ಕಲಾವಿದನ ನೆರವಿನಿಂದ ಮನೆ ಕಟ್ಟಿಕೊಂಡ ಕುಟುಂಬದವರು.. ಈಗ ಸ್ವತಃ ಸ್ವಂತ ಐಷಾರಾಮಿ ಕಾರು ಕೊಂಡುಕೊಳ್ಳುವುದೇ ಸಾಧನೆ.



