ಮಂಡ್ಯ. ಕಳೆದ ಎಲೆಕ್ಷನ್ನಿನಲ್ಲಿ 28ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದರೂ.. ಮಂಡ್ಯದಲ್ಲಷ್ಟೇ ಚುನಾವಣೆ ನಡೆಯಿತೇನೋ ಎಂಬಷ್ಟರ ಮಟ್ಟಿಗೆ ಸಂಚಲನ ಸೃಷ್ಟಿಸಿತ್ತು. ಈಗ ಮತ್ತೆ ಎಲೆಕ್ಷನ್ ಬಂದಿದೆ. ಆದರೆ.. ಮಂಡ್ಯ ಜೆಡಿಎಸ್ಸಿಗಾ..? ಬಿಜೆಪಿಗಾ..? ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲ. ಈ ನಡುವೆಯೇ ಜೆಡಿಎಸ್ ಚಟುವಟಿಕೆ ಬಿರುಸಾಗಿದೆ. ಸುಮಲತಾ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿರುವ ಸೂಚನೆ ಕಂಡುಬರುತ್ತಿದೆ. ಜೊತೆಯಲ್ಲೇ.. ಮತ್ತೊಮ್ಮೆ ಜೆಡಿಎಸ್ʻನಿಂದ ಕುಮಾರಸ್ವಾಮಿಯವರಾಗಲೀ ನಿಖಿಲ್ ಅವರಾಗಲೀ ಸ್ಪರ್ಧಿಸಲಿ ಎಂಬ ಕೂಗು ಕೇಳಿ ಬರುತ್ತಿದೆ.
ಅದಕ್ಕೆ ಕಾರಣ ಹಲವಾದರೂ.. ಈ ಬಾರಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಜಿಲ್ಲೆಯೊಳಗೆ ಜೆಡಿಎಸ್ ಅಸ್ತಿತ್ವ ಕಳೆದುಕೊಂಡಿದೆ. ಹೀಗಾಗಿ ದೇವೇಗೌಡರ ಕುಟುಂಬದವರೊಬ್ಬರು ಮಂಡ್ಯದಿಂದ ಕಣಕ್ಕಿಳಿದೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿಯೇ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರು ಒಂದು ಸಾಲಿನ ನಿರ್ಣಯ ಕೈಗೊಂಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆಗೆ ಆಸಕ್ತಿ ತೋರಿರಲಿಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ತಮ್ಮ ನಿಲುವು ಸ್ಪಷ್ಟಪಡಿಸಿರಲಿಲ್ಲ. ಶುಕ್ರವಾರ ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಂಬಂಧ ಆಯೋಜಿಸಿದ್ದ ಜೆಡಿಎಸ್ ಸಭೆಯಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತಾದರೂ ಅಲ್ಲೂ ಗುಟ್ಟು ಬಿಟ್ಟುಕೊಡದೆ ಕುತೂಹಲ ಕಾಯ್ದುಕೊಂಡಿದ್ದಾರೆ.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಆರಂಭದಲ್ಲೇ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಅಭ್ಯರ್ಥಿಯಾಗಿ, ನೀವು ಕೇವಲ ಅರ್ಜಿ ಹಾಕಿ ಹೋಗಿ, ನಾವು ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಅಭಿಮಾನಿಗಳು ಕೂಗಿ ಹೇಳಿದರು.
ಆದರೆ.. ಕಳೆದ ಬಾರಿಯ ತಪ್ಪು ತಿದ್ದಿಕೊಂಡಂತೆ ಕಾಣುತ್ತಿರುವ ಜೆಡಿಎಸ್ ನಾಯಕರದ್ದು ಈ ಬಾರಿ ಎಚ್ಚರಿಕೆಯ ಹೆಜ್ಜೆ. ಜಿಲ್ಲೆಯ ಜನ ಕುಟುಂಬ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಿರುಗಿಬೀಳುವ ವಾತಾವರಣ ಸೃಷ್ಟಿಯಾಗುವ ಭಯವೋ.. ಏನೋ.. ಯಾವ ನಿರ್ಧಾರವನ್ನೂ ಒಮ್ಮೆಗೇ ಪ್ರಕಟಿಸಿಲ್ಲ. ಬದಲಿಗೆ.. ನಿಮಗೆ ನಾನು ನಿರಾಸೆ ಮಾಡಲ್ಲ. ಸಭೆಗೆ ಬಂದಾಗ ನಿಮ್ಮ ಕೂಗು ಕೇಳಿದ್ದೇನೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರ ಬಾಗಿ ನಮಸ್ಕರಿಸುತ್ತೇನೆ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ. ನಿಮ್ಮ ಆಸೆಗೆ ಭಂಗವನ್ನೂ ತರಲ್ಲ. ನಿಖಿಲ್ ಅವರಿಗೂ ಒಂದು ಮಾತು ಹೇಳುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ನಿರಾಸೆಯಾಗುವುದಿಲ್ಲ. ನಿಮ್ಮ ಆಸೆ ಏನಿದೆಯೋ ಅದನ್ನು ನೇರವೇರಿಸುತ್ತೇನೆ ಎಂದು ಹೇಳಿದ್ದಾರೆ ಕುಮಾರಸ್ವಾಮಿ. ಮಾರ್ಚ್ ೨೫ಕ್ಕೆ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಇದೆ.
ಸುಮಲತಾ ಸೈಲೆಂಟ್ : ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ತಮಗೇ ಸಿಗುವ ವಿಶ್ವಾಸದಲ್ಲಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿನ್ನೂ ತಮ್ಮ ಮುಂದಿನ ನಡೆ ನಿರ್ಧರಿಸಿಲ್ಲ. ಈ ಹಿಂದೆಲ್ಲ ಮಂಡ್ಯದಿಂದಲೇ ಸ್ಪರ್ಧೆಯ ಸ್ಪಷ್ಟ ಸೂಚನೆ ನೀಡಿದ್ದವರು ಈಗ ಮೌನಕ್ಕೆ ಶರಣಾಗಿದ್ದಾರೆ. ಜೆಡಿಎಸ್ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದರೆ, ಸುಮಲತಾ ಬೆಂಗಳೂರಿನಲ್ಲೇ ಇದ್ದಾರೆ.
ಮೂಲಗಳ ಪ್ರಕಾರ ಮಂಡ್ಯ ಕ್ಷೇತ್ರವನ್ನು ಮೈತ್ರಿಯ ಭಾಗವಾಗಿ ಜೆಡಿಎಸ್ʻಗೆ ಕೊಡಲಾಗಿದ್ದು, ಜೆಡಿಎಸ್ ಅಭ್ಯರ್ಥಿಯೇ ನಿಲ್ಲಲಿದ್ದಾರೆ ಎಂಬ ಸೂಚನೆ ಇದೆ.
ನಿಖಿಲ್ ಕುಮಾರಸ್ವಾಮಿ ಕೂಡಾ ಸುಮಲತಾ ಅವರನ್ನು ತಾಯಿ ಸಮಾನ ಎಂದಿದ್ದು, ಎಚ್ಚರಿಕೆಯ ಮೇಲೆ ಎಚ್ಚರಿಕೆ ವಹಿಸುತ್ತಿದ್ಧಾರೆ. ಮಾಜಿ ಸಂಸದರೂ ಆಗಿರುವ ಸಿಎಸ್ ಪುಟ್ಟರಾಜು ನೇತೃತ್ವದಲ್ಲಿಯೇ ಮಂಡ್ಯವನ್ನು ಗೆಲ್ಲುವುದಕ್ಕೆ ಜೆಡಿಎಸ್ ಪ್ಲಾನ್ ಮಾಡುತ್ತಿದೆ.



