ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಒಂದಿಷ್ಟು ಅಶ್ಲೀಲ ವಿಡಿಯೋಗಳು ಸಿಕ್ಕಿವೆ ಎಂಬ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಹಲವು ತಿಂಗಳುಗಳಿಂದ ಓಡಾಡುತ್ತಲೇ ಇತ್ತು. ಆ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕೋರ್ಟಿಂದ ತಡೆಯಾಜ್ಞೆ ತಂದಿದ್ದವರಿಗೆ, ಇದು ಗೊತ್ತಿರಲಿಲ್ಲ ಎಂದೇನಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಆದಾಗ ಬಿಜೆಪಿಯ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ದೊಡ್ಡ ದೊಡ್ಡ ನಾಯಕರು ಈ ಬಾರಿ ಹಾಸನಕ್ಕೆ ಪ್ರಜ್ವಲ್ ಅವರಿಗೆ ಟಿಕೆಟ್ ಬೇಡ ಎಂದಿದ್ದರಂತೆ. ಅದನ್ನು ಕುಮಾರಸ್ವಾಮಿ ಹೇಳಿಕೊಂಡಿದ್ದರು ಕೂಡಾ.
ಆದರೆ.. ಎಲ್ಲಿಯೂ ವಿಡಿಯೋಗಳ ಕಾರಣಕ್ಕೆ ಎಂದು ಹೇಳಿರಲಿಲ್ಲ. ಹೇಗೆ ಹೇಳ್ತಾರೆ.. ಅಷ್ಟೇ ಅಲ್ಲ.. ಕುಮಾರಸ್ವಾಮಿಯವರಿಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡುವುದು ಇಷ್ಟ ಇರಲಿಲ್ಲ. ಆದರೆ.. ದೇವೇಗೌಡರು ಹಠಕ್ಕೆ ಬಿದ್ದರು. ಕುಮಾರಸ್ವಾಮಿ ಮಾಧ್ಯಮಗಳಲ್ಲಿ ಪ್ರಜ್ವಲ್ ಅವರಷ್ಟೇ ಅಲ್ಲ, ಕುಟುಂಬದ ಯಾರೊಬ್ಬರಿಗೂ ಟಿಕೆಟ್ ಕೊಡುವುದು ಇಷ್ಟ ಇಲ್ಲ ಎಂದು ಹೇಳುತ್ತಿದ್ದರೆ.. ಅತ್ತ ದೇವೇಗೌಡರು ಹಾಸನಕ್ಕೆ ಹೋಗಿ ಪ್ರಜ್ವಲ್ ರೇವಣ್ಣ ಅವರಿಗೇ ಟಿಕೆಟ್ ಎಂದು ಘೋಷಿಸಿಬಿಟ್ಟರು. ಕುಮಾರಸ್ವಾಮಿಗೆ ಅನ್ಯ ಮಾರ್ಗವಿರಲಿಲ್ಲ.
ಈ ಬಾರಿಯ ಚುನಾವಣೆಯಲ್ಲೂ ಅಷ್ಟೆ.. ನಾಮಪತ್ರ ಸಲ್ಲಿಸುವಲ್ಲಿಂದ ಶುರುವಾಗಿ.. ಕೊನೆಯ ದಿನದ ವರೆಗೆ ಪ್ರಚಾರ ಮಾಡಿದರು. ಸರಿಸುಮಾರು 15ಕ್ಕೂ ಹೆಚ್ಚು ಸಮಾವೇಶ ಮಾಡಿದರು. ನನ್ನ ಮೊಮ್ಮಗನನ್ನು ಗೆಲ್ಲಿಸಿ ಎಂದು ಕಣ್ಣೀರಾಕಿದರು. ಇತ್ತೀಚೆಗೆ ಆರೋಗ್ಯದಲ್ಲಿ ಸ್ವಲ್ಪ ಕೃಶರಾದಂತಿದ್ದ ದೇವೇಗೌಡರಿಗೆ ಅದೇನೋ ಹುಮ್ಮಸ್ಸು, ಉತ್ಸಾಹ ಬಂದುಬಿಟ್ಟಿತ್ತು. ಇಷ್ಟೆಲ್ಲ ಆಗಿ.. ದೇವೇಗೌಡರಿಗೆ ಈ ವಿಷಯ ಗೊತ್ತೇ ಇರಲಿಲ್ಲವಾ.. ಎಂದರೆ.. ನೋ. ದೇವೇಗೌಡರಿಗೆ ವಿಷಯ ಗೊತ್ತಿತ್ತು.
ರೇವಣ್ಣನವರೇ ಹೇಳ್ತಾರಲ್ಲ.. ಇದು ನಾಲ್ಕೈದು ವರ್ಷ ಹಳೆಯ ಕೇಸು ಎಂದು. ಆದರೆ.. ಏನ್ ಆಗಲ್ಲ ಬಿಡು, ನಮ್ ವಿರುದ್ಧ ಯಾರು ತಿರುಗಿಬೀಳ್ತಾರೆ ಎಂದುಕೊಂಡಿದ್ದರ ಪರಿಣಾಮ, ದೇವೇಗೌಡರು ತಮ್ಮ ಜೀವನ ಸಂಧ್ಯಾಕಾಲದಲ್ಲಿ ತಲೆತಗ್ಗಿಸುವಂತಾಗಿದೆ. ಅದು ಅತಿಯಾದ ಆತ್ಮವಿಶ್ವಾಸ ಎನ್ನುವುದಕ್ಕಿಂತ ಭಂಡ ಧೈರ್ಯ ಎನ್ನಬಹುದೇನೋ..
ಈಗ ಅದೇ ಪ್ರಜ್ವಲ್ ರೇವಣ್ಣ ಅವರ ವಿಡಿಯೋಗಳು ಹೊರಬರುತ್ತಿದ್ದಂತೆಯೇ.. ಯಾರೊಬ್ಬರ ಅದು ಸುಳ್ಳು ಎನ್ನುತ್ತಿಲ್ಲ. ತಿರುಚಿದ ವಿಡಿಯೋ, ಗ್ರಾಫಿಕ್ಸ್ ಸೃಷ್ಟಿ ಅಂತಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅಂತಿದ್ಧಾರೆ. ಅದು ಕುಮಾರಸ್ವಾಮಿ ಹೇಳಿದ ಮಾತು. ಬಿಜೆಪಿಯ ಎಲ್ಲ ನಾಯಕರೂ ಅದೇ ಮಾತು ಹೇಳ್ತಿರೋದು ವಿಶೇಷ.
ದೇವೇಗೌಡರ ಕುಟುಂಬವೇ ಎರಡಾದಾಗ..
ಮ್ಮ ಕುಟುಂಬದ ಕುಡಿಯಾದ ಪ್ರಜ್ವಲ್ ಅವರು ಹಾದಿ ತಪ್ಪಿರುವುದು ಮೊದಲೇ ಗೊತ್ತಾಗಿದ್ದರೆ ಬುದ್ಧಿ ಹೇಳಿ ತಪ್ಪಿಸಬಹುದಿತ್ತು ಎಂದಿರುವ ಕುಮಾರಸ್ವಾಮಿ, ದೇವೇಗೌಡರ ಹೆಸರು ಮತ್ತು ತಮ್ಮ ಕುಟುಂಬವನ್ನು ಎಳೆದು ತರಬೇಡಿ. ಇದಕ್ಕೂ ಅದಕ್ಕೂ ಸಂಬಂಧ ಇಲ್ಲ. ನಾವೇ ಬೇರೆ. ರೇವಣ್ಣನವರೇ ಬೇರೆ.. ಅವರು ನಾವು ಹಲವು ವರ್ಷಗಳಿಂದ ಬೇರೆ ಬೇರೆ ಮನೆಯಲ್ಲಿದ್ದೇವೆ ಎಂದಿದ್ದಾರೆ. ಪ್ರಜ್ವಲ್ ರೇವಣ್ಣನವರ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳಗಳ ಆರೋಪಗಳಿಂದಾಗಿ ಕೇವಲ ಅವರು ಮಾತ್ರವಲ್ಲ, ಇಡೀ ರಾಜ್ಯವೇ ತಲೆತಗ್ಗಿಸುವಂಥದ್ದು. ಅವರ ವಿರುದ್ಧ ಕೇಳಿಬಂದಿರುವ ಹಗರಣ ಆರೋಪಗಳು ಪ್ರಜ್ವಲ್ ಅವರಿಗೆ ಮಾತ್ರ ಸಂಬಂಧಿಸಿದ್ದು. ಅದಕ್ಕೂ ನಮ್ಮ ಇಡೀ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕುಮಾರಣ್ಣನ ಸ್ಪಷ್ಟ ಮಾತು.
ದೇವೇಗೌಡರಿಗೆ ಗೊತ್ತಾಗಿದ್ದು ಯಾವಾಗ..?
ಭಾನುವಾರ ಈ ವಿಚಾರ ಅರಿವಿಗೆ ಬಂದಾಗ ನಾವು ಚರ್ಚೆ ನಡೆಸಿದ್ದೆವು. ಆದರೆ ದೇವೇಗೌಡರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ವಿಷಯವನ್ನು ಅವರ ಗಮನಕ್ಕೆ ತರಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಉಚ್ಚಾಟನೆ ರಾಷ್ಟ್ರೀಯ ಮಂಡಳಿಯಿಂದ ಆಗಬೇಕಾಗಿರುವುದರಿಂದ ನಾನೂ ದೇವೇಗೌಡರಿಗೆ ಮನವಿ ಮಾಡಿದ್ದೆ. ಈಗ ಬಂದಿರುವ ಕೆಲ ವಿಷಯಗಳ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರ ಶೀಘ್ರ ಹೊರ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ ಕುಮಾರಸ್ವಾಮಿ. ಆದರೆ.. ಭಾನುವಾರದವರೆಗೂ ದೇವೇಗೌಡರಿಗೆ ಗೊತ್ತಿರಲಿಲ್ಲ ಎನ್ನುವ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ.



