ಧ್ರುವ ಸರ್ಜಾಗೆ ಹಾಗೂ ಅವರ ಅಭಿಮಾನಿಗಳಿಗೆ ಕೊನೆಗೂ ಮುಹೂರ್ತ ಹತ್ತಿರ ಬಂದಿದೆ. ಧ್ರುವ ಸರ್ಜಾ ಅವರ ಸಿನಿಮಾಗೆ ಸಿಕ್ಕಾಪಟ್ಟೆ ಗ್ಯಾಪ್ ಇರುತ್ತೆ. ಆಗಾಗ್ಗೆ ಪ್ರೆಸ್ ಮೀಟ್ ಇತ್ಯಾದಿಗಳಾಗಿ ಸುದ್ದಿಯಲ್ಲಿರದೇ ಹೋಗಿದ್ದರೆ.. ಅಭಿಮಾನಿಗಳೂ ಮರೆತುಹೋಗುವಷ್ಟು ಗ್ಯಾಪ್ ಕೊಡ್ತಾರೆ. ಧ್ರುವ ಸರ್ಜಾ ಮೊದಲ ಸಿನಿಮಾ ಮಾಡಿದ್ದು 2012ರಲ್ಲಿ. ಈಗ 2024. ಈ 12 ವರ್ಷಗಳಲ್ಲಿ ಮಾಡಿದ್ದು ನಾಲ್ಕೂ ಮತ್ತೊಂದು ಸಿನಿಮಾ.
5ನೇ ಸಿನಿಮಾ ಶೂಟಿಂಗ್ ಶುರುವಾಗಿ ಬರೋಬ್ಬರಿ 3 ವರ್ಷಗಳಾಗುತ್ತಿವೆ. ಈಗ ಸುದೀರ್ಘ ಎರಡೂವರೆ ವರ್ಷಗಳ ವೇಯ್ಟಿಂಗ್ ಮುಗಿಯುವ ಸಮಯ ಹತ್ತಿರವಾಗುತ್ತಿದ್ದು, ಮಾರ್ಟಿನ್ ಚಿತ್ರ ಬಿಡುಗಡೆಗೆ ಮುಹೂರ್ತ ಕೂಡಿ ಬರುತ್ತಿದೆ. ಶೂಟಿಂಗ್ ಮುಗಿದ ಬೆನ್ನಲ್ಲೇ ತಮ್ಮ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮುಗಿಸಿದ್ದು, ನಿರ್ದೇಶಕ ಎ.ಪಿ. ಅರ್ಜುನ್ ಫೋಟೋ ಹಂಚಿಕೊಂಡು ಖುಷಿ ಹಂಚಿಕೊಂಡಿದ್ದಾರೆ.
ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ಆದ ಹಿನ್ನೆಲೆ ಎಲ್ಲ ಭಾಷೆಯಲ್ಲಿಯೂ ಧ್ರುವ ತಾವೇ ಖುದ್ದು ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರಾ ಅನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ ಈ ಪ್ರಶ್ನೆಗೆ ಸದ್ಯಕ್ಕೆ ನಿಖರವಾದ ಉತ್ತರ ಇಲ್ಲ.
ಎ.ಪಿ.ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿದ್ದು, ಅನ್ವೇಶಿ ಜೈನ್ ಹಾಗೂ ಸುಕೃತಾ ವಾಗ್ಲೇ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಉದಯ್ ಕೆ.ಮೆಹ್ತಾ ಬಂಡವಾಳ ಹಾಕಿದ್ದು, ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆಯಾಗುವ ಸಾಧ್ಯತೆಗಳಿವೆ.
ಮಾರ್ಟಿನ್ ಚಿತ್ರಕ್ಕೆ 100 ಕೋಟಿಗೂ ಹೆಚ್ಚು ಬಂಡವಾಳ ಹಾಕಲಾಗಿದೆ. ಚಿತ್ರದ ಒಂದು ಟೀಸರಿನಲ್ಲಿ ಪಾಕಿಸ್ತಾನದ ಜೈಲನ್ನು ಬ್ರೇಕ್ ಮಾಡುವ ದೃಶ್ಯಗಳಿತ್ತು. ಅಂದಹಾಗೆ ಇದುವರೆಗೆ ಧ್ರುವ ಅಭಿನಯದ 4 ಚಿತ್ರಗಳನ್ನು ನೋಡಿದವರಿಗೆ ಯಾವ್ಯಾವುದೋ ಕಾರಣಕ್ಕೆ ಸಿನಿಮಾ ಲೇಟ್ ಆಗಿರುವುದು ಗೊತ್ತಾಗುತ್ತದೆ. ಏಕೆಂದರೆ ಕಂಪ್ಲೀಟ್ ಸಿನಿಮಾ ನೋಡಿದಾಗ ಈ ಚಿತ್ರಕ್ಕೆ ಎರಡೂ..ಎರಡೂವರೆ ವರ್ಷ ಬೇಕಿತ್ತಾ ಅಂತನ್ನಿಸೋದು ಸಹಜ. ಆದರೆ.. ಮಾರ್ಟಿನ್ ಹಾಗಾಗದಿರಲಿ ಎನ್ನೂವುದು ಅಭಿಮಾನಿಗಳ ನಿರೀಕ್ಷೆ.
ಸದ್ಯಕ್ಕೆ ಐಪಿಎಲ್ ಕಾವು ಏರಲಿದೆ. ಮೇ ಅಂತ್ಯದವರೆಗೆ ಎಲ್ಲರೂ ಐಪಿಎಲ್ ಧ್ಯಾನದಲ್ಲಿರುವ ಕಾರಣಕ್ಕೆ ಮಾರ್ಟಿನ್ ಚಿತ್ರವನ್ನ ಜೂನ್ ಕ್ಕಿಂತ ಮೊದಲು ಬಿಡುಗಡೆ ಮಾಡುವ ಧೈರ್ಯವನ್ನ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಮಾಡಲ್ಲ. ಇನ್ನೂ ಕೆ.ಡಿ ವಿಚಾರದಲ್ಲಿ ಕೂಡ ಪ್ರೇಮ್ ರಿಸ್ಕ್ ತೆಗೆದುಕೊಳ್ಳಲ್ಲ. ಈ ಕಾರಣಕ್ಕೆ ಜೂನ್ ನಂತರದಲ್ಲಿ ಇವೆರಡು ಸಿನಿಮಾದಲ್ಲಿ ಮೊದಲು ಯಾವ ಸಿನಿಮಾ ಬಿಡುಗಡೆಯಾಗುತ್ತೆ ಅನ್ನುವ ಕುತೂಹಲ ಅಭಿಮಾನಿಗಳದ್ದು. ಒಟ್ಟಿನಲ್ಲಿ ಸದ್ಯಕ್ಕೆ ಧ್ರುವ ಸರ್ಜಾ ಮಾರ್ಟಿನ್ ಚಿತ್ರದ ಡಬ್ಬಿಂಗ್ ಕೆಲಸವನ್ನ ಮುಗಿಸಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸದ್ಯಕ್ಕೆ ಭರದಿಂದ ಸಾಗಿವೆ. ಬೆಳ್ಳಿ ಪರದೆಯಲ್ಲಿ ಮಾರ್ಟಿನ್ ಧಗಧಗಿಸುವುದು ಯಾವಾಗ ಅನ್ನುವುದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.



