ಈ ವರ್ಷ ದರ್ಶನ್ ಅವರ ಸಿನಿಮಾ ಇಲ್ಲವಾ.. ಈ ಪ್ರಶ್ನೆಗೆ ಸ್ವತಃ ದರ್ಶನ್ ಅವರಿಂದಲೇ ಉತ್ತರ ಸಿಕ್ಕಿದೆ. ಯಾರು ಏನಾದರೂ ಮಾಡ್ಕೊಳ್ಳಲಿ.. ತಾನು ಮಾತ್ರ ಸಿನಿಮಾ ಮಾಡ್ತಾ ಇರ್ತೇನೆ ಎನ್ನುವ ದರ್ಶನ್ ಸಿನಿಮಾ ಮಾಡುತ್ತಲೇ ಇದ್ಧಾರೆ. ಈಗ ಹಲವು ಅಡೆತಡೆಗಳ ಮಧ್ಯೆಯೂ ದರ್ಶನ್ ಅವರ ಮತ್ತೊಂದು ಸಿನಿಮಾ ಡೆವಿಲ್ ಈ ವರ್ಷವೇ ರಿಲೀಸ್ ಆಗೋದು ಪಕ್ಕಾ ಆಗಿದೆ. ದರ್ಶನ್ ಅವರ ಸಿನಿಮಾ ಮುಂದಿನ ವರ್ಷಕ್ಕಲ್ಲ.. ದರ್ಶನ್ ಅವರ ಡೆವಿಲ್ ದರ್ಶನ ಈ ವರ್ಷದಲ್ಲೇ ಆಗುತ್ತೆ..!
ದರ್ಶನ್ ಅವರ ಕೈಗೆ ಪೆಟ್ಟಾಗಿ, ಸಣ್ಣ ಆಪರೇಷನ್ ಕೂಡಾ ಆಗಿದ್ದ ಕಾರಣ ಡೆವಿಲ್ ಚಿತ್ರದ ಚಿತ್ರೀಕರಣ ತಡವಾಗಿತ್ತು. ಹೀಗಾಗಿ ಅಕ್ಟೋಬರಿನಲ್ಲಿಯೇ ರಿಲೀಸ್ ಮಾಡುತ್ತೇವೆ ಎಂದು ಹೇಳಿದ್ದ ಚಿತ್ರತಂಡ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿತ್ತು. ದರ್ಶನ್ ಅವರ ಡೆವಿಲ್ ಮುಂದಿನ ವರ್ಷವೇ ರಿಲೀಸ್ ಆಗೋದು ಅಂದ್ಕೊಂಡಿದ್ದವರಿಗೆ ಸಿಹಿಯಾದ ಶಾಕ್ ಕೊಟ್ಟಿದೆ ಡೆವಿಲ್ ಟೀಂ.
‘ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ – ‘ಡೆವಿಲ್’ ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ ಅನುಮಾನವೇ ಇಲ್ಲದೆ ದರ್ಶನ್ ಅವರ ಡೆವಿಲ್ ಡಿಸೆಂಬರಿಗೆ ಬರುವುದು ಕನ್ʻಫರ್ಮ್ ಆಗಿದೆ.
ದರ್ಶನ್ಗೆ ಕಳೆದ ಡಿಸೆಂಬರ್ ಅದೃಷ್ಟ ತಂದುಕೊಟ್ಟಿತ್ತು. ಅವರ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗಿ 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈಗ ಅವರ ಮುಂದಿನ ಚಿತ್ರವನ್ನು ಡಿಸೆಂಬರ್ ಅಂತ್ಯಕ್ಕೆ ತೆರೆಮೇಲೆ ತರುತ್ತಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಪ್ರಕಾಶ್ ವೀರ್ (ಮಿಲನ ಪ್ರಕಾಶ್) ನಿರ್ದೇಶನದ ಡೆವಿಲ್ ಚಿತ್ರಕ್ಕೆ ರಚನಾ ರೈ ನಾಯಕಿಯಾಗಿದ್ಧಾರೆ. ಜೆ.ಜಯಮ್ಮ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿರುವುದು ವಿಶೇಷ.
ದರ್ಶನ್ ಅವರ ಎದುರು ಬರುವ ಕನ್ನಡ ಸಿನಿಮಾಗಳು ಯಾವುದು ಎಂಬುದು ಗೊತ್ತಿಲ್ಲ. ಆದರೆ, ಹಿಂದಿಯಲ್ಲಿ ಅಮೀರ್ ಖಾನ್ ನಟಿಸಿರುವ ಸಿತಾರೆ ಜಮೀನ್ ಪರ್ ಭಾಗ-2, ಡಿಸೆಂಬರ್ ಹೊತ್ತಿಗೇ ಬರಲಿದೆ. ಕ್ರಿಸ್ ಮಸ್ಸಿಗೆ ಒಂದು ವಾರ ಮುಂಚೆ ಅಕ್ಷಯ್ ಕುಮಾರ್ ಅಭಿನಯದ ʻವೆಲ್ʻಕಂ ಟು ದಿ ಜಂಗಲ್ʼ ರಿಲೀಸ್ ಆಗಲಿದೆ. ಇತ್ತೀಚೆಗೆ ಅಕ್ಷಯ್ ಕುಮಾರ್ʻಗೆ ಹಿಟ್ ಸಿಕ್ಕಿಲ್ಲ. ಹಾಲಿವುಡ್ʻನ ಲಯನ್ ಕಿಂಗ್ ಹಾಗೂ ಥಂಡರ್ ಬೋಲ್ಟ್ ಕೂಡಾ ಅದೇ ಸಮಯಕ್ಕೆ ರಿಲೀಸ್ ಆಗಲಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳೂ ಎಂದಿನಂತೆ ಪೈಪೋಟಿ ನೀಡಲಿವೆ.
ಅಂದಹಾಗೆ ದರ್ಶನ್ ಅವರ ಕಾಟೇರ ರಿಲೀಸ್ ಆಗಿದ್ದ ಹೊತ್ತಿನಲ್ಲೇ ಶಾರೂಕ್ ಹಾಗೂ ಪ್ರಭಾಸ್ ಅಭಿನಯದ ಚಿತ್ರಗಳು, ಹಾಲಿವುಡ್ ಸ್ಟಾರ್ ಸಿನಿಮಾಗಳು ರಿಲೀಸ್ ಆಗಿದ್ದವು. ಆದರೆ.. ಅವೆಲ್ಲವನ್ನೂ ಮೀರಿ ದರ್ಶನ್ ಅವರ ಕಾಟೇರ ಗೆದ್ದಿತ್ತು. ಈಗ ಮತ್ತೊಮ್ಮೆ ದರ್ಶನ್ ಡೇಟ್ ಘೋಷಿಸಿಕೊಂಡಿದ್ದಾರೆ. ಕ್ರಿಸ್ ಮಸ್ ರಜೆಯ ಸಂಪೂರ್ಣ ಲಾಭ ಪಡೆಯುವ ಮನಸ್ಸಂತೂ ದರ್ಶನ್ ಅವರಿಗೆ ಇದೆ.



