ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ, ಗೆಳತಿ ಪವಿತ್ರಾ ಗೌಡ ಅವರ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ ದರ್ಶನ್. ಅವರನ್ನು ನೋಡುವುದಕ್ಕೆ ಪ್ರತಿ ದಿನವೂ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ ಇದುವರೆಗೆ ಭೇಟಿ ಮಾಡಿರುವುದು ಕುಟುಂಬ ಸದಸ್ಯರು ಹಾಗೂ ಕೆಲವು ಗೆಳೆಯರು ಮಾತ್ರ. ಏಕೆಂದರೆ ವಾರಕ್ಕೆ ಎರಡು ಬಾರಿ ಮಾತ್ರ ಕುಟುಂಬ ಸದಸ್ಯರ ಜೊತೆ ಭೇಟಿ, ಮಾತುಕತೆಗೆ ಅವಕಾಶ ಇರುತ್ತದೆ.
ಹೀಗಾಗಿ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ತಾಯಿ ಮೀನಾ ತೂಗುದೀಪ್ ಹಾಗೂ ತಮ್ಮ ದಿನಕರ್ ಅವರು ಭೇಟಿ ಮಾಡಿದ್ದಾರೆ. ಅವರೇನೋ ರಕ್ತ ಸಂಬಂಧಿಕರು. ಇನ್ನು ಸ್ನೇಹಿತರಾದ ಧನ್ವೀರ್, ವಿನೋದ್ ಪ್ರಭಾಕರ್, ಪ್ರೇಮ್, ರಕ್ಷಿತಾ ಪ್ರೇಮ್ ಅವರೂ ಭೇಟಿ ಮಾಡಿದ್ದಾರೆ. ಆದರೆ, ಇವರೆಲ್ಲರ ಮಧ್ಯೆ ಸಮತಾ ಎಂಬುವವರ ಭೇಟಿ ಕುತೂಹಲ ಕೆರಳಿಸಿದೆ.
ಮಂಗಳವಾರ ಸಮತಾ ಎಂಬುವವರು ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಮಾಧ್ಯಮಗಳ ಕಣ್ಣು ತಪ್ಪಿಸಿಯೇ ಜೈಲಿಗೆ ಹೋಗಿದ್ದ ಸಮತಾ, ರಿಜಿಸ್ಟರ್ʻನಲ್ಲಿ ಸಂಬಂಧಿಕರು ಎಂದು ನಮೂದಿಸಿದ್ದಾರೆ. ಈ ಸಮತ, ದರ್ಶನ್ ಅವರಿಗೆ ದೂರದ ಅಥವಾ ಹತ್ತಿರದ ಸಂಬಂಧಿಕರೇನಲ್ಲ. ಆದರೆ, ಆರೋಪಿ ನಂ.1 ಪವಿತ್ರಾ ಗೌಡ ಅವರ ಪರಮಾಪ್ತೆ. ಈ ಸಮತಾ ಅವರು ಪವಿತ್ರಾ ಗೌಡ ಅವರು ಆಯೋಜಿಸಿದ್ದ ಪಾರ್ಟಿಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಖಾಯಂ ಆಗಿ ಕಾಣಿಸಿಕೊಂಡಿದ್ದಾರೆ. ಪ್ರವಾಸಗಳಲ್ಲಿಯೂ ಇದ್ದಾರೆ.
ಅದೆಲ್ಲದರ ಜೊತೆಗೆ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಯಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಯೊಬ್ಬರು ಈ ಸಮತ ಅವರ ಕುಟುಂಬ ಸದಸ್ಯರು ಎನ್ನಲಾಗಿದೆ. ಹೀಗಾಗಿ ತನಿಖೆಯ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಅದು ನಿಜವೇ ಆಗಿದ್ದರೆ ಹೂತಿರುವ ರೇಣುಕಾಸ್ವಾಮಿ ಶವ ಮತ್ತೆ ಮೇಲೆದ್ದು ಕೂರಬೇಕಾಗಿ ಬಂದರೂ ಬರಬಹುದು.
ಅಂದಹಾಗೆ ದರ್ಶನ್ ಅವರು ಸಮತಾ ಅವರ ಜೊತೆ ಸುಮಾರು 15 ನಿಮಿಷ ಮಾತುಕತೆ ನಡೆಸಿದ್ದು, ಮಾತುಕತೆಯ ವಿವರಗಳು ಲಭ್ಯವಾಗಿಲ್ಲ. ಅಫ್ʻಕೋರ್ಸ್ ಕೊಡುವ ಅಗತ್ಯವೂ ಇಲ್ಲ. ಆದರೆ, ಸಮತಾ ಅವರ ಜೊತೆಗಿನ ಈ ಮಾತುಕತೆ, ಇಡೀ ಕೇಸಿಗೆ ಟ್ವಿಸ್ಟ್ ಕೊಟ್ಟರೂ ಆಶ್ಚರ್ಯವಂತೂ ಇಲ್ಲ.



