ದರ್ಶನ್ & ಗ್ಯಾಂಗ್ʻನಿಂದ ನಡೆದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿರುವುದು ಒಟ್ಟು 17 ಮಂದಿ. ಆ 17 ಮಂದಿಯಲ್ಲಿ ನಂದೀಶ್ ಕೂಡಾ ಒಬ್ಬ. ಈತ ಕೂಡಾ ದರ್ಶನ್ ಅಭಿಮಾನಿ. ಇನ್ನೂ ಕೆಲವರ ವಿಚಾರಣೆ ನಡೆಯುತ್ತಿದೆ. ಹಾಗೆ ಅರೆಸ್ಟ್ ಆದವರಲ್ಲಿ ದರ್ಶನ್ ಜೊತೆಗಿದ್ದವರು ಹಾಗೂ ಅಭಿಮಾನಿಗಳೇ ಇದ್ದಾರೆ. ಅರೆಸ್ಟ್ ಆಗಿರುವ ಅನು ತಂದೆಯನ್ನು ಕಳೆದುಕೊಂಡಿದ್ದಾರೆ. ಯಾರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಎಲ್ಲರೂ ಬಡವರೇ. ಅರೆಸ್ಟ್ ಆದ 17 ಮಂದಿಯಲ್ಲಿ ದರ್ಶನ್, ಪವಿತ್ರಾ ಗೌಡ ಅವರನ್ನು ಸೇರಿ ಐವರಷ್ಟೇ ದುಡ್ಡಿದ್ದವರು. ಉಳಿದವರು ಕಡು ಬಡವರು.
ಎಲ್ಲರನ್ನೂ ಸೇಫ್ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದರಂತೆ ದರ್ಶನ್. ಆದರೆ ದರ್ಶನ್ ಪರ ಹಾಗೂ ದುಡ್ಡಿದ್ದ ಕೆಲವರ ಪರ ಲಾಯರ್ ನೇಮಕವಾಗಿದ್ದಾರೆಯೇ ಹೊರತು, ಮಿಕ್ಕ ಬಹುತೇಕರಿಗೆ ಲಾಯರ್ ಕೂಡಾ ಇಲ್ಲ. ಆರೋಪಿಯಾಗಿದ್ದ ಅನು ತಂದೆ ನಿಧನರಾದಾಗಲೂ ಅಷ್ಟೆ, ಎಸ್ʻಪಿಪಿ ಪ್ರಸನ್ನ ಕುಮಾರ್ ಅವರೇ ಕಾಳಜಿ ವಹಿಸಿದ್ದಕ್ಕೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಯ್ತು. ಈಗ ಮಂಡ್ಯದ ನಂದೀಶ್ ಕುಟುಂಬದ ಸ್ಥಿತಿಯೂ ಭಿನ್ನವಾಗಿಲ್ಲ. ನಂದೀಶ್ ಮಂಡ್ಯದ ಕೆರೆಗೋಡು ಗ್ರಾಮದವರು. ಅಮ್ಮ ಮತ್ತು ಅಕ್ಕ ಇಬ್ಬರೂ ಕೂಲಿ ಮಾಡಿ ಬದುಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಂದೀಶ್ A5 ಆರೋಪಿ.
ದರ್ಶನ್ ಅಭಿಮಾನಿ ಮತ್ತು ಆಪ್ತನಾಗಿರುವ ನಂದೀಶ್, ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಂದೀಶ್ ಕುಟುಂಬ ಪ್ರತಿದಿನವೂ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ. ಅಮ್ಮನಿಗೆ ಅಸ್ತಮಾ ಹೆಚ್ಚಾಗಿದೆ. ಹೀಗಾಗಿ ಕೂಲಿಗೆ ಹೋಗೋಕೆ ಆಗ್ತಿಲ್ಲ. ಅಕ್ಕ, ಅಮ್ಮನನ್ನು ನೋಡಿಕೊಳ್ತಿದ್ದಾರೆ. ಅವರೂ ಸದ್ಯಕ್ಕೆ ನಿರುದ್ಯೋಗಿ.
ಸೋಷಿಯಲ್ ಮೀಡಿಯಾದಲ್ಲಿ ಹಾರಾಡುತ್ತಿರುವ ಅಭಿಮಾನಿಗಳಾಗಲೀ, ದರ್ಶನ್ ಪರ ದೊಡ್ಡ ದೊಡ್ಡ ವಕೀಲರನ್ನು ಇಟ್ಟು ಫೈಟ್ ಮಾಡುತ್ತಿರುವ ದರ್ಶನ್ ಪತ್ನಿಯಾಗಲೀ.. ಯಾರೂ ಕೂಡಾ ನಂದೀಶ್ ಸಹಾಯಕ್ಕೆ ಬಂದಿಲ್ಲ.
ಜೈಲಲ್ಲಿರುವ ಮಗನನ್ನು ನೋಡಲು ಬೆಂಗಳೂರಿಗೆ ಬರಲೂ ಆಗುತ್ತಿಲ್ಲ. ವಕೀಲರನ್ನು ನೇಮಕ ಮಾಡಬೇಕು ಎಂಬುದು ಕೂಡಾ ಗೊತ್ತಿಲ್ಲ. ನೇಮಕ ಮಾಡಿಕೊಂಡರೆ ಅವರಿಗೆ ಫೀಸ್ ಕೊಡುವಷ್ಟು ಹಣವೂ ಇಲ್ಲ. ಹೆತ್ತವರ ಸಂಕಟ ನೋಡಲಾಗದೆ ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿದ್ದಾರೆ, ಆದರೆ ಡೀಸೆಲ್ ಹಾಕಿಸೋಕೆ ಹಣವಿಲ್ಲ. ನಂದೀಶ್ ತಾಯಿ ಭಾಗ್ಯಮ್ಮ ಅಸ್ತಮಾದಿಂದ ನರಳುತ್ತಿದ್ದಾರೆ. ದರ್ಶನ್ ಅಭಿಮಾನಿಗಳು, ಆಪ್ತರು ಯಾರು ಸಹ ಸೌಜನ್ಯಕ್ಕಾದರೂ ಮನೆ ಬಳಿಗೆ ಬಂದಿಲ್ಲ. ನಂದೀಶ್ ಬಿಡುಗಡೆಗೆ ವಕೀಲರನ್ನ ನೇಮಿಸಿಕೊಳ್ಳಲು ನಮಗೆ ಶಕ್ತಿ ಇಲ್ಲ. ದರ್ಶನ್ ಅಭಿಮಾನಿ ಎನಿಸಿಕೊಂಡ ಯಾರೊಬ್ಬರು ನಮ್ಮ ಕಷ್ಟ ಕೇಳಲಿಲ್ಲ ಎಂದು ನಂದೀಶ್ ಅಕ್ಕ ನಂದಿನಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಅಭಿಮಾನಿಗಳು ಎಂದು ಹೇಳಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾರಾಡುವವರು ಯಾರೂ ಕೂಡಾ ನಂದೀಶ್ ಸೇರಿದಂತೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಬಡವರ ನೆರವಿಗೆ ಮುಂದಾಗುತ್ತಿಲ್ಲ. ಸೋಷಿಯಲ್ ಮೀಡಿಯಾ ಪ್ರತಾಪ, ಕೇವಲ ದರ್ಶನ್ ಮೇಲಿನ ಅಭಿಮಾನಕ್ಕೆ ಜೈಲು ಸೇರಿದವರ ಕುಟುಂಬದ ಹೊಟ್ಟೆ ತುಂಬಿಸುವುದಿಲ್ಲ. ಜಾಮೀನು ಕೊಡುವಂತೆ ಮಾಡುವುದಿಲ್ಲ. ಅಭಿಮಾನ.. ಕೊಲೆಯಂತಹ ಕುಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುವ ಮಟ್ಟಕ್ಕೆ ಇಳಿಯುವುದು ಬೇಡ.



