ದರ್ಶನ್ ಜೈಲಿಗೆ ಹೋಗಿ ತಿಂಗಳಾಗುತ್ತಾ ಬಂತು. ಅಲ್ಲಲ್ಲ.. ತಿಂಗಳು ಕಳೆದು ಹೋಗಿದೆ. ಈ ಮಧ್ಯೆ ದರ್ಶನ್ ಪರ ವಕೀಲರು ಜಾಮೀನಿಗೂ ಅರ್ಜಿ ಹಾಕಿಲ್ಲ. ಕೊಲೆ ಕೇಸಿನಲ್ಲಿ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಆದರೆ.. ದರ್ಶನ್ ಅವರಿಗೆ ಜೈಲೂಟ ಅಡ್ಜಸ್ಟ್ ಆಗುತ್ತಿಲ್ಲ. ಹೀಗಾಗಿ ಅವರಿಗೆ ಮನೆ ಊಟ ಕೊಡ್ಬೇಕು ಎಂದು ದರ್ಶನ್ ಪರ ವಕೀಲರು ಕೋರ್ಟ್ ಮೆಟ್ಟಿಲೇರಿದ್ಧಾರೆ. ಹೈಕೋರ್ಟಿಗೆ ಹೋಗಿದ್ದ ಕೇಸ್, ಮತ್ತೆ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಬಂದಿದೆ. ಜುಲೈ 26ರ ಒಳಗೆ ತೀರ್ಮಾನ ಆಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆ ಕೋರ್ಟಿನಲ್ಲಿ ವಾದ ಪ್ರತಿವಾದ ನಡೆದು ಜುಲೈ 25ಕ್ಕೆ ತೀರ್ಪು ಹೊರಬರಲಿದೆ.
ಕೋರ್ಟಿನಲ್ಲಿ ದರ್ಶನ್ ಪರ ವಕೀಲ ರಾಘವೇಂದ್ರ ವಾದ :
ಜೈಲಿನಲ್ಲಿರುವ ವಿಚಾರಾಣಾಧೀನ ಖೈದಿಗಳು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇದೆ. ಒಂದು ವೇಳೆ ತಮ್ಮ ವ್ಯವಸ್ಥೆ ಮಾಡಿಕೊಳ್ಳಲು ಆಗದಿದ್ದಾಗ ಜೈಲಿನಲ್ಲಿ ಪಡೆಯಲು ಅವಕಾಶ ಇದೆ. ಹೊರಗಿನಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ನೀಡುವ ಅಧಿಕಾರ ಜೈಲು ಐಜಿಪಿಗೆ ನೀಡಲಾಗಿದೆ. ತಮ್ಮ ಸೌಲಭ್ಯಗಳನ್ನು ತಾವು ಪಡೆದುಕೊಳ್ಳಲು ಆಗದೇ ಇದ್ದಾಗ ಮಾತ್ರ ಜೈಲು ಅಥಾರಿಟಿ ನೀಡಬಹುದು . ಜೈಲಿನಲ್ಲಿರುವ ಆರೋಪಿಗೆ ಮನೆಯ ಊಟಕ್ಕೆ ಅವಕಾಶ ನೀಡದೇ ಇರೋದು ಆರ್ಟಿಕಲ್ 21 ಅಡಿ ವೈಯಕ್ತಿಕ ಸ್ವಾತಂತ್ರ್ಯ ಕಿತ್ತುಕೊಂಡಂತೆ ಆಗತ್ತದೆ. ಎಲ್ಲರಿಗೂ ಜೀವಿಸುವ ಹಕ್ಕನ್ನ ಸಂವಿಧಾನ ನೀಡಿದೆ. ದರ್ಶನ್ ಕೇವಲ ಫಿಲ್ಮ್ ಸ್ಟಾರ್ ಅನ್ನೋ ಕಾರಣಕ್ಕೆ ಪ್ರತಿಕೂಲ ಪ್ರಚಾರ ಸಿಗುತ್ತಿದೆ. ಹೀಗಾಗಿ, ಆರೋಪಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.
ಎಸ್ʻಪಿಪಿ ಪ್ರಸನ್ನ ಕುಮಾರ್ ವಾದ :
ವಿಚಾರಾಣಾಧೀನ ಖೈದಿ ಅಥವಾ ಸಿವಿಲ್ ಕೇಸ್ ಆರೋಪಿ ಅಥವಾ ಸತ್ಯಾಗ್ರಹಿ ಆರೋಪಿ ಆಗಿದ್ದರೆ ಮಾತ್ರ ಮನೆಯಿಂದ ಊಟ ಪಡೆಯಲು ಅವಕಾಶ ಇದೆ. ಆದರೆ, ಶಿಕ್ಚೆಗೆ ಗುರಿಯಾಗಿದ್ದರೆ ಮಾತ್ರ ಮೆನಯ ಊಟ ಕಳಲು ಬರುವುದಿಲ್ಲ. ಇನ್ನು ಆರೋಪಿ ಫಿಲ್ಮ್ ಸ್ಟಾರ್, ಫಿಲ್ಮ್ ಹಿರೋ ಆಗಿದ್ದಾರೆ. ಈ ಪ್ರಕರಣವನ್ನ ಮಿಡಿಯಾ ಫಾಲೋ ಮಾಡ್ತಾ ಇದ್ದಾರೆ. ಹೀಗಾಗಿ, ಜೈಲು ಅಧಿಕಾರಿಗಳು ಮನೆಯಿಂದ ತರಿಸಿದ ಅಥವಾ ಹೊರಗಡೆಯಿಂದ ತರಿಸಿದ ಆಹಾರ, ಇತರೆ ವಸ್ತುಗಳನ್ನ ನೀಡಲು ಅವಕಾಶ ನೀಡಿಲ್ಲ.
ದರ್ಶನ್ ಗೆ ಡಯೇರಿಯಾ ಆಗಿರೋದು ಸರಿಯಿದೆ. ಇನ್ನು ದರ್ಶನ್‌ಗೆ 2023ರಲ್ಲಿ ಏನೋ ಸಮಸ್ಯೆ ಇತ್ತು ಎಂದು ದಾಖಲೆ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಇರೋದು ಆರ್ಥೋಪಿಡಿಪ್ ಸಮಸ್ಯೆ. ಆಹಾರ ಸೇವನೆಗೂ ಆರ್ಥೋಪಿಡಿಕ್ ಸಮಸ್ಯೆಗೂ ಸಂಬಂಧ ಇಲ್ಲ. ಜೊತೆಗೆ ದರ್ಶನ್‌ಗೆ ವೈರಲ್ ಫೀವರ್ ಇದೆ, ಬ್ಯಾಕ್ ಪೇನ್ ಇದೆ ಎಂದು ಹೇಳಲಾಗಿದೆ. ಸರ್ವೀಸ್ ಮ್ಯಾನ್ಯೂವಲ್ ಪ್ರಕಾರ ಆಹಾರ ಹಾಗೂ ಇತರೆ ಸೌಲಭ್ಯ ನೀಡಲಾಗುತ್ತಿದೆ.
ಕರ್ನಾಟಕ ಪ್ರಿಸನ್ ರೂಲ್ಸ್ 1974 ರ ಅಡಿ ಏನೇನು ಕೊಡಬೇಕು ಎಂದು ಉಲ್ಲೇಖಿಸಲಾಗಿದೆ. ರೂಲ್ 322ರ ಪ್ರಕಾರ ಮನೆ ಊಟ ಅನ್ನೋ ಪದವೇ ಇಲ್ಲ. ಎಕ್ಸ್ಟ್ರಾ ಡಯಟ್ ಇದ್ದರೆ ಅದನ್ನು ಕೊಡಬೇಕಿರುವುದು ವೈದ್ಯಾಧಿಕಾರಿ. ಆದರೆ ಡಾಕ್ಟರ್ ಯಾವುದೇ ಎಕ್ಸ್ಟ್ರಾ ಡಯಟ್ ಗೆ ಸೂಚನೆ ಕೊಟ್ಟಿಲ್ಲ.
ವೈದ್ಯಾಧಿಕಾರಿ ಹೇಳಿದರೆ ಮಾತ್ರ ಜೈಲು ಅಧಿಕಾರಿಗಳು ಹೆಚ್ಚು ಕ್ಯಾಲರಿ ಆಹಾರ ನೀಡಬಹುದು. ಅಂದರೆ, ಸಸ್ಯಾಹಾರಿಗಳಿಗೆ ಬಾಳೆ ಹಣ್ಣು, ಮಾಂಸಾಹಾರಿಗಳಿಗೆ ವಾರಕ್ಕೆ ಒಂದು ದಿನ ನಾನ್ ವೆಜ್ ಕೊಡಬಹುದು. ಆದರೆ, ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ. ವೈರಲ್ ಫೀವರ್ ಇದ್ದವರಿಗೆ ಹೆಚ್ಚುವರಿ ಆಗಿ ಬಿಸಿನೀರು ನೀಡಬಹುದು. ವೈದ್ಯರ ಸಲಹೆ ಮೇರೆಗೆ ಮಾತ್ರ ಆಹಾರ ನೀಡಬಹುದು. ಉದಾಹರಣೆಗೆ ಭೇದಿ ಆಗ್ತಾ ಇದ್ರೆ, ಖಾರ ಇಲ್ಲದ ಊಟ ನೀಡಬಹುದು ಅಷ್ಟೇ.
ಇನ್ನು ಹಾಸಿಗೆ ವಿಚಾರವೂ ಅಷ್ಟೆ, ಆರೋಪಿ ಕೊಲೆ ಆರೋಪಿಯಾಗಿದ್ದು, ಕೊಲೆ ಆರೋಪಿಗಳು ಪ್ರತ್ಯೇಕ ಹಾಸಿಗೆ ಪಡೆಯುವುದಕ್ಕೆ ಅರ್ಹರಲ್ಲ. ಕೊಲೆ ಆರೋಪಿಗಳನ್ನ ಹೊರತುಪಡಿಸಿ ಮಾತ್ರ ಸ್ವಂತ ಬಟ್ಟೆ, ಹಾಸಿಗೆ ಅರ್ಹರು.
ಜೈಲಿಗೆ ಬಂದ ಮೇಲೆ ಬ್ಯಾಕ್ ಪೇಯ್ನ್ ಶುರುವಾಯ್ತಾ..? ಜೂನ್ 22ರವರೆಗೂ ವ್ಯಾಯಾಮ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅಲ್ಲಿಯವರೆಗೂ ಇಲ್ಲದ ಸಮಸ್ಯೆ ಈಗ ಹೇಗೆ ಸಾಧ್ಯ.
ಈ ರೀತಿ ವಾದ ಪ್ರತಿವಾದಗಳು ನಡೆದಿದ್ದು, ಜುಲೈ 25ಕ್ಕೆ ನ್ಯಾಯಾಧೀಶರು ಅಂತಿಮ ತೀರ್ಮಾನ ಪ್ರಕಟಿಸಲಿದ್ಧಾರೆ. ಆನಂತರ ಇದೇ ವಿಷಯದ ಬಗ್ಗೆ ಮ್ಯಾಜಿಸ್ಟ್ರೇಟ್ ತೀರ್ಪಿನ ಬಗ್ಗೆ ಹೈಕೋರ್ಟ್ ಕೂಡಾ ವಿಚಾರಣೆ ಮಾಡಲಿದೆ.



