ಸೈಬರ್ ವಂಚಕರು ಒಮ್ಮೊಮ್ಮೆ ಒಂದೊಂದು ವೇಷ ಹಾಕ್ತಾರೆ. ಸ್ವಲ್ಪವೇ ಸ್ವಲ್ಪ ಯಾಮಾರಿದರೂ.. ನಮ್ಮ ದುಡ್ಡು, ಅಕೌಂಟು ಅಂತಹ ಖದೀಮರ ಪಾಲಾಗುತ್ತೆ. ವಂಚನೆ ಮಾಡೋದಕ್ಕೆ ಖದೀಮರಿಗೆ ಕೆಲವು ನಿಮಿಷಗಳು ಸಾಕು. ಇಂತಹ ಖದೀಮರ ಜಾಲದಿಂದ ತಪ್ಪಿಸಿಕೊಳ್ಳೋದು ಹೇಗೆ ಅನ್ನೋದು ರೂಪಾ ಅಯ್ಯರ್ ಅವರ ಈ ಪ್ರಕರಣವನ್ನು ಪೂರ್ತಿ ಅರ್ಥ ಮಾಡಿಕೊಂಡರೆ.. ಗೊತ್ತಾಗುತ್ತೆ. ರೂಪಾ ಅಯ್ಯರ್ ಕನ್ನಡದ ಕನ್ನಡದ ಖ್ಯಾತ ನಟಿ ಹಾಗೂ ನಿರ್ದೇಶಕಿ.
ರೂಪಾ ಅವರು ಡಿಜಿಟಲ್ ಅರೆಸ್ಟ್ʻಗೆ ಒಳಗಾಗಿದ್ದರು. ಡಿಜಿಟಲ್ ಅರೆಸ್ಟ್ ಅಂದ್ರೆ.. ಬೇರೇನಲ್ಲ.. ನಿಮ್ಮನ್ನು ಒಂದಿಷ್ಟು ಗಂಟೆಗಳ ಕಾಲ ಡಿಜಿಟಲಿ ಎಂಗೇಜ್ ಮಾಡಿಟ್ಟುಕೊಳ್ಳೋದು. ಬೇರೆಯವರ ಜೊತೆ ಸಂಪರ್ಕಕ್ಕೆ ಬರದಂತೆ ತಡೆಯುವುದು. ಆ ಸಮಯದಲ್ಲಿ ಬಲೆಗೆ ಬಿದ್ದರೆ, ದುಡ್ಡು ಕಿತ್ತುಕೊಳ್ಳೋದು. ರೂಪಾ ಅಯ್ಯರ್ ಅವರಿಗೆ ಆಗಿದ್ದೂ ಇದೇ ರೀತಿಯ ಅನುಭವ.
ಗುರುವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಯೊಬ್ಬ ರೂಪಾ ಅಯ್ಯರ್ ಅವರಿಗೆ ಕಾಲ್ ಮಾಡಿ, ತನ್ನನ್ನು ತಾನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಆಫೀಸರ್ (ಟ್ರಾಯ್) ಎಂದು ಹೇಳಿಕೊಂಡಿದ್ಧಾನೆ. ಜೆಟ್ ಏರ್ ವೇಸ್ʻನ ನರೇಶ್ ಗೋಯಲ್ ಅವರ ಮನಿಲಾಂಡ್ರಿಂಗ್ ಕೇಸಿನಲ್ಲಿ ವಿಚಾರಣೆ ನಡೆಸಬೇಕಾಗಿದೆ ಹಾಗೂ ನಿಮ್ಮ ಅಕೌಂಟ್ ನಂಬರ್, ಮೊಬೈಲ್ ನಂಬರ್ ದೇಶದ್ರೋಹಿ ಕೆಲಸಕ್ಕೆ ಬಳಕೆ ಆಗ್ತಿದೆ ಅಂತಾ ಹೆದರಿಸಿದ್ಧಾನೆ. ಮುಂಬೈ ಪೋರ್ಟ್ ಕಚೇರಿಯಲ್ಲಿ ಎಫ್ʻಐಆರ್ ಕೂಡಾ ಆಗಿದೆ ಎಂದು ಹೇಳಿ ತನ್ನ ಮೇಲಧಿಕಾರಿಯೊಬ್ಬನಿಗೆ ವಿಡಿಯೋ ಕಾಲ್ ಮಾಡಿಸಿಕೊಟ್ಟಿದ್ದಾನೆ. ಎಲ್ಲವೂ ಫೋನಿನಲ್ಲೇ ನಡೆದಿದೆ.
ವಿಡಿಯೋ ಕಾಲ್ ಮಾಡಿದರೆ.. ಅಲ್ಲೊಬ್ಬ ನಕಲಿ ಪೊಲೀಸ್ ಕಾಣಿಸಿದ್ಧಾನೆ. ಪೊಲೀಸ್ ಯೂನಿಫಾರ್ಮ್ ಹಾಕಿಕೊಂಡಿದ್ದ ಆತ ನರೇಶ್ ಗೋಯೆಲ್ ಕೇಸಿನಲ್ಲಿ ನಾವು ಲಿಸ್ಟ್ ಮಾಡಿರುವ 247 ಮಂದಿಯಲ್ಲಿ ನೀವೊಬ್ಬರು. ನೀವು ಸೆಲಬ್ರಿಟಿ ಆಗಿರೋದ್ರಿಂದ ಇದು ಹೊರಗೆ ಗೊತ್ತಾದರೆ, ಕರ್ನಾಟಕ ಪೊಲೀಸರಿಗೆ ಗೊತ್ತಾದರೆ.. ನಿಮ್ಮ ಮಾನ ಮರ್ಯಾದೆಯೇ ಹೋಗಲಿದೆ. ನಾವು 24 ಗಂಟೆಗಲ ಕಾಲ ವರ್ಚುವಲ್ ಅಬ್ಸರ್ವೇಷನ್ ಮಾಡುತ್ತೇವೆ. ಆಮೇಲೆ ನಿರಾಕ್ಷೇಪಣ ಪತ್ರ (ಎನ್ʻಓಸಿ) ಕೊಡುತ್ತೇವೆ ಎಂದೆಲ್ಲ ಹೇಳಿದ್ಧಾರೆ.
ಗುರುವಾರ ಮಧ್ಯಾಹ್ನ ಶುರುವಾದ ರಾತ್ರಿ 9 ಗಂಟೆವರೆಗೂ ವಿಚಾರಣೆ ನಡೆದಿದೆ. ಆಮೇಲೆ ರಾತ್ರಿಯಾಯ್ತು ಮಲಗುತ್ತೇನೆ ಎಂದಾಗ ಅವರು ಅದಕ್ಕೆ ಅವಕಾಶ ಕೊಟ್ಟು, ಬೆಳಗ್ಗೆ 9 ಗಂಟೆಗೆಲ್ಲ ವಿಚಾರಣೆಗೆ ಹಾಜರಾಗಬೇಕು ಎಂದುಹೇಳಿದ್ದಾರೆ. ಜೊತೆಗೆ ಅಕೌಂಟ್ ನಂಬರ್, ಬಿಸಿನೆಸ್, ರೂಪಾ ಅಯ್ಯರ್ ನಡೆಸುತ್ತಿರುವ ಎಲ್ಲ ಇಂಡಸ್ಟ್ರಿ ಹಾಗೂ ಟ್ರಸ್ಟ್ʻಗಳ ಮಾಹಿತಿ ಪಡೆದಿದ್ದಾರೆ. ಬೆಳಗ್ಗೆ ಕಾಂಟ್ಯಾಕ್ಟಿಗೆ ಬಂದಾಗ ಇಮ್ಮೀಡಿಯೆಟ್ಟಾಗಿ 30 ಲಕ್ಷ ರೂ. ಜಮಾ ಮಾಡಿ ಎಂದು ಡಿಮ್ಯಾಂಡ್ ಇಟ್ಟಿದ್ಧಾರೆ. ರೂಪಾ ಅಯ್ಯರ್ ಅವರು ನೆಟ್ ಬ್ಯಾಂಕಿಂಗ್ ಬಳಸುವುದಿಲ್ಲ ಎಂದಾಗ ಬ್ಯಾಂಕಿಗೆ ಹೋಗಿ ಜಮೆ ಮಾಡಿ ಎಂದು ಒತ್ತಾಯಿಸಿದ್ಧಾರೆ.
ಕಾಲ್ʻನಲ್ಲಿ ಮಾತನಾಡುತ್ತಿರುವಾಗಲೇ ರೂಪಾ ಅಯ್ಯರ್ ಅವರಿಗೆ ಸಿಬಿಐ ಹಾಗೂ ಇಡಿಯಿಂದ ನೋಟಿಸ್ ಕೂಡಾ ಕಳಿಸಿದ್ಧಾರೆ. ಇಡಿಯವರದ್ದಂತೂ ಅರೆಸ್ಟ್ ವಾರೆಂಟ್ ಕೂಡಾ ಬಂದಿದೆ.
ಅಷ್ಟು ಹೊತ್ತಿಗೆ ಸಮಾಧಾನವಾಗಿ ಯೋಚಿಸಿದ್ದ ರೂಪಾ ಅಯ್ಯರ್ ಅವರಿಗೆ ಇದು ಟ್ರ್ಯಾಪ್ ಎಂದು ಗೊತ್ತಾಗಿದೆ. ಬಿಜೆಪಿಯಲ್ಲಿ ಸಕ್ರಿಯವಾಗಿರುವ ರೂಪಾ ಅಯ್ಯರ್, ಅಣ್ಣಾಮಲೈ ಹೆಸರು ಹೇಳಿದ ನಂತರ ಸೈಬರ್ ಕ್ರೈಂ ಎಂದು ಹೆಸರು ಹೇಳಿಕೊಂಡಿದ್ದವರು ತಣ್ಣಗಾಗಿದ್ಧಾರೆ. ಕೊನೆಗೆ ಮೋದಿ, ಬಿಜೆಪಿಯನ್ನು ಬೈದುಕೊಂಡು ಸುಮ್ಮನಾಗಿದ್ಧಾರೆ. ರೂಪಾ ಅಯ್ಯರ್ ಬಚಾವ್ ಆಗಿದ್ದಾರೆ.
ಇಂತಹ ವಂಚನೆಗಳು ಹೊಸದೇನೂ ಅಲ್ಲ. ವಂಚಕರು ಹೇಗಿರುತ್ತಾರೆಂದರೆ.. ಕೆಲವು ವರ್ಷಗಳ ಹಿಂದೆ ರಾಜ್ಯ ಡಿಜಿಪಿಯಾಗಿದ್ದವರೊಬ್ಬರು ಸಾವಿರಾರು ರೂಪಾಯಿ ಕಳೆದುಕೊಂಡಿದ್ದರು. ಐಪಿಎಸ್ ಅಧಿಕಾರಿಗಳನ್ನೂ ಯಾಮಾರಿಸಿ ದುಡ್ಡು ಹೊಡೆಯುವ ಪ್ರಳಯಾಂತಕರಿದ್ಧಾರೆ. ಸದ್ಯಕ್ಕಂತೂ ರೂಪಾ ಅಯ್ಯರ್ ಅವರ ಫೋನ್ ನಂಬರ್ ಸೇಫು.
ಅಂದಹಾಗೆ ರೂಪಾ ಅಯ್ಯರ್ ಅವರಿಗೇನೋ ಅಣ್ಣಾಮಲೈ ಹೆಸರು ಇತ್ತು. ಎಲ್ಲರಿಗೂ ಆ ರೀತಿಯ ಅದೃಷ್ಟ ಇರೋದಿಲ್ಲ. ಅಲ್ವಾ.. ಇಂತಹ ಕೇಸುಗಳಿಗೆ ಮುಖಾಮುಖಿಯಾದಾಗ.. ನೀವು ಯಾವುದೇ ತಪ್ಪು ಮಾಡಿಲ್ಲದೇ ಇರುವಾಗ.. ಡೈರೆಕ್ಟ್ ಆಗಿ ನೀವೇ ಪೊಲೀಸರ ಹತ್ತಿರ ಹೋಗಿ. ಇಂತಹ ಖದೀಮರ ಜಾಲಕ್ಕೆ ಸಿಕ್ಕು ಹಣ, ಮರ್ಯಾದೆ ಎರಡನ್ನೂ ಕಳೆದುಕೊಳ್ಳೋ ಬದಲು, ಪೊಲೀಸರ ಎದುರು ವಿವರಣೆ ಕೊಟ್ಟು ಗೆಲ್ಲಬಹುದು.



