ಕೆಲವರಿರುತ್ತಾರೆ. ಅವರ ಕೆಲಸ ಸಮಸ್ಯೆಗಳನ್ನು ನಿವಾರಿಸುವುದು. ಆದರೆ.. ಸಮಸ್ಯೆ ನಿವಾರಿಸುತ್ತೇನೆ ಎಂಬ ಜವಾಬ್ದಾರಿ ಹೊತ್ತ ವ್ಯಕ್ತಿಯೇ ಸಮಸ್ಯೆಗಳನ್ನು ಸೃಷ್ಟಿಸುತ್ತಾ ಹೋದರೆ.. ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ಸ್ಯಾಮ್ ಪಿತ್ರೋಡಾ ಎಂಬ ವ್ಯಕ್ತಿ. ಈತ ಕಾಂಗ್ರೆಸ್ಸಿನ ಸಾಗರೋತ್ತರ ಘಟಕದ ಅಧ್ಯಕ್ಷನಾಗಿದ್ದ ವ್ಯಕ್ತಿ. ಇದೂವರೆಗೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭೆ ಚುನಾವಣೆ ವರೆಗೆ ಒಂದೇ ಒಂದು ಎಲೆಕ್ಷನ್ ಗೆದ್ದ ಉದಾಹರಣೆ ಇಲ್ಲ. ಆದರೆ.. ಕಾಂಗ್ರೆಸ್ಸಿನಲ್ಲಿ ಪ್ರಭಾವಿ ನಾಯಕ. ರಾಜೀವ್ ಗಾಂಧಿಗೇ ಆಪ್ತರಾಗಿದ್ದವರು. ಆ ಸ್ಯಾಮ್ ಪಿತ್ರೋಡಾ ಅವರೇ ವಿವಾದ ಪುರುಷ.
ಕಾಂಗ್ರೆಸ್ಸಿಗೆ ಈ ಚುನಾವಣೆಯಲ್ಲಿ ಅತಿ ದೊಡ್ಡ ಶತ್ರುವಾಗಿ ಕಾಡುತ್ತಿರುವುದು ಸ್ಯಾಮ್ ಪಿತ್ರೋಡಾ. ರಾಷ್ಟ್ರೀಯ ಕಾಂಗ್ರೆಸ್ಸಿನ ಸಾಗರೋತ್ತರ ಅಧ್ಯಕ್ಷರೂ ಆಗಿದ್ದ ಸ್ಯಾಮ್ ಪಿತ್ರೋಡಾ, ಈಗ ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಿತ್ರೋಡಾ ಅವರ ರಾಜೀನಾಮೆಯನ್ನು ಕೇಳಿ ಪಡೆದಿದ್ದಾರೆ. ಇಷ್ಟಕ್ಕೂ ಸ್ಯಾಮ್ ಪಿತ್ರೋಡಾ ಭಾರತದ ಜಾತ್ಯತೀತತೆ, ಸಾಮರಸ್ಯ ಹೇಳುವ ಉತ್ಸಾಹದಲ್ಲಿ ಹೇಳಿದ್ದ ಮಾತು ಪಿತ್ರೋಡಾ ಅವರಿಗೆ ಮುಳುವಾಗಿದೆ.
ಭಾರತದ ಪೂರ್ವ ಭಾಗದವರು ಚೀನಾದವರಂತೆ ಕಾಣ್ತಾರೆ, ಇನ್ನು ದಕ್ಷಿಣ ಭಾರತೀಯರು ಆಫ್ರಿಕರನ್ನರಂತೆ ಕಾಣ್ತಾರೆ. ಉಳಿದಂತೆ ಭಾರತದ ಪಶ್ಚಿಮ ಭಾಗದವರು ಅರಬ್ಬರಂತೆ ಕಂಡರೆ, ಉತ್ತರ ಭಾರತೀಯರು ಬಿಳಿ ಚರ್ಮವುಳ್ಳವರಾಗಿದ್ದಾರೆ. ತಮ್ಮ ಬಣ್ಣ, ಸಂಸ್ಕೃತಿ ಹೀಗೆ ಹಲವು ವಿಚಾರಗಳಲ್ಲಿ ವ್ಯತ್ಯಾಸ ಇದ್ದರೂ ಭಾರತೀಯರೆಲ್ಲರೂ ಉತ್ತಮವಾಗಿ, ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ವೈವಿಧ್ಯತೆಗಳ ನಡುವೆ ಕೂಡ ಒಟ್ಟಿಗೆ ಜೀವನ ಸಾಗಿಸುತ್ತಿರುವುದೇ ಭಾರತೀಯರ ಹೆಗ್ಗಳಿಕೆ ಇದು ಸ್ಯಾಮ್ ಪಿತ್ರೋಡಾ ಅವರು ಆಡಿರುವ ಮಾತು.
ಪಿತ್ರೋಡಾ ಅವರ ಕಾಂಟ್ರವರ್ಸಿಗಳು ಹೊಸದೇನಲ್ಲ. ಸ್ಯಾಮ್ ಸ್ಟೇಟ್ಸ್ʻಮನ್ʻಗೆ ಕೊಟ್ಟಿರುವ ಸಂದರ್ಶನದಲ್ಲಿ ರಾಮ ಮತ್ತು ರಾಮಮಂದಿರ ಭಾರತದ ಪರಿಕಲ್ಪನೆಯನ್ನೇ ಹಾಳು ಮಾಡಿದವು ಎನ್ನುತ್ತಾರೆ. ಇದು ಇನ್ನೊಂದು ರೀತಿಯಲ್ಲಿ ಕಾಂಗ್ರೆಸ್ಸಿಗೆ ಕಪಾಳಕ್ಕೆ ಹೊಡೆದಂತಿದೆ. ಶ್ರೀರಾಮ ಎನ್ನುವುದು ಭಾರತದ ಹಾಗೂ ಭಾರತೀಯರ ಅಸ್ಮಿತೆಯಾಗಿರುವಾಗ.. ಅದೇ ರಾಮ, ಅಯೋಧ್ಯೆಯ ರಾಮ ಮಂದಿರ ಭಾರತದ ತತ್ವವನ್ನೇ ಹಾಳು ಮಾಡಿದವು ಎನ್ನುತ್ತಾರೆ ಸ್ಯಾಮ್ ಪಿತ್ರೋಡಾ.
ಇತ್ತೀಚೆಗೆ ಪಿತ್ರಾರ್ಜಿತ ಆಸ್ತಿಯ ಮೇಲೆ 55% ತೆರಿಗೆ ಹಾಕುವ, ಅರ್ಧ ಸಂಪತ್ತನ್ನು ಸರ್ಕಾರಕ್ಕೆ ಕೊಡುವ ಪ್ರಸ್ತಾಪ ಮುಂದಿಟ್ಟು ಕಾಂಗ್ರೆಸ್ಸಿಗೆ ಟೆನ್ಷನ್ ಕೊಟ್ಟಿದ್ದರು. ಆಸ್ತಿಯಾಯ್ತು.. ರಾಮನಾಯ್ತು.. ಈಗ ದ.ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ವಿವಾದ ಸೃಷ್ಟಿಸಿ.. ವಿವಾದ ಪುರುಷರೇ ಆಗಿದ್ಧಾರೆ ಸ್ಯಾಮ್.
ಆದರೆ.. ಪಿತ್ರೋಡಾ ಅವರ ದ.ಭಾರತೀಯರು ಆಫ್ರಿಕನ್ನರಂತೆ ಕಾಣುತ್ತಿದ್ದಾರೆ ಹಾಗೂ ಈಶಾನ್ಯ ಭಾರತೀಯರು ಚೀನಾದವರಂತೆ ಕಾಣುತ್ತಾರೆ ಎಂಬ ಮಾತು ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ಮೋದಿಯವರಿಗೆ ಚುನಾವಣಾ ಪ್ರಚಾರದಲ್ಲಿ ರಾಮ ಬಾಣವಾಗಿದ್ದರೆ, ಕಾಂಗ್ರೆಸ್ಸಿನವರು ಅಬ್ಭಾ.. ದಕ್ಷಿಣ ಭಾರತದಲ್ಲಿ ಚುನಾವಣೆ ಮುಗಿದಿದೆ.. ಬಚಾವು ಎಂದು ನಿಟ್ಟುಸಿರು ಬಿಡುವಂತಾಗಿದೆ.
ಮೋದಿ ಪ್ರಚಾರ ಭಾಷಣದಲ್ಲಿ ʻಚರ್ಮದ ಬಣ್ಣದ ಆಧಾರದಲ್ಲಿನ ಅವಮಾನವನ್ನು ದೇಶ ಎಂದಿಗೂ ಸಹಿಸದು. ನಾವು ಕಪ್ಪು ಚರ್ಮ ಹೊಂದಿದ್ದ ಕೃಷ್ಣನ ಆರಾಧಕರು. ರಾಷ್ಟ್ರಪತಿ ಚುನಾವಣೆ ವೇಳೆ ದ್ರೌಪದಿ ಮುರ್ಮು ಅವರನ್ನು ಸೋಲಿಸಲು ರಾಹುಲ್ ಗಾಂಧಿ ಕರೆ ನೀಡಿದ್ದು ಅವರ ಚರ್ಮದ ಬಣ್ಣ ಕಪ್ಪು ಎಂಬ ಕಾರಣಕ್ಕೇ ಎಂಬುದೀಗ ಅರ್ಥವಾಗಿದೆ. ನನ್ನ ದೇಶದ ಜನರ ಸಾಮರ್ಥ್ಯವನ್ನು ಅವರ ಚರ್ಮದ ಬಣ್ಣದ ಮೇಲೆ ನಿರ್ಧರಿಸಲಾಗುವುದೇ? ಈ ಚರ್ಮದ ಬಣ್ಣದ ಆಟ ಆಡಲು ಶೆಹಜಾದಾಗೆ (ರಾಹುಲ್ ಗಾಂಧಿ) ಅನುಮತಿ ಕೊಟ್ಟಿದ್ದು ಯಾರು? ಇದಕ್ಕೆ ಶೆಹಜಾದಾ ಉತ್ತರಿಸಲೇಬೇಕು. ನಾನು ಇಂದು ಬಹಳ ಕೋಪಗೊಂಡಿದ್ದೇನೆ. ನನ್ನನ್ನು ಯಾರು ಬೇಕಾದರೂ ನಿಂದಿಸಲಿ, ನಾನು ಸಹಿಸಿಕೊಳ್ಳುವೆ. ಆದರೆ ಶೆಹಜಾದಾನ ಚಿಂತಕ (ಪಿತ್ರೋಡಾ) ಇಂಥ ದೊಡ್ಡ ನಿಂದನೆ ಮಾಡುತ್ತಾರೆ ಎಂದಾದಲ್ಲಿ ಅದು ನನ್ನಲ್ಲಿ ಅತೀವ ಕೋಪ ತರಿಸಿದೆ ದಕ್ಷಿಣ ಭಾರತೀಯರ ವರ್ಣದ ಬಗ್ಗೆ ಪಿತ್ರೋಡಾ ಮಾತಾಡಿರುವ ಕಾರಣ ಇಂಡಿಯಾ ಕೂಟದಿಂದ ಡಿಎಂಕೆ ಹೊರಬರುತ್ತದೆಯೇ?’ ಎಂದೂ ಮೋದಿ ಸವಾಲು ಹಾಕಿದ್ಧಾರೆ.



