ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್, ಸಾವಿನ ವ್ಯಾಪಾರಿ, ರಕ್ತದ ವ್ಯಾಪಾರಿ, ಏಳು ತಲೆ ಸರ್ಪ, ವಿಷದ ಹಾವು, ಹಂತಕ.. ಹೀಗೆ ಯಾವೆಲ್ಲ ಭಾಷೆಗಳಲ್ಲಿ ಟೀಕಿಸಬಹುದೋ.. ಅದೆಲ್ಲವನ್ನೂ ಟೀಕಿಸಿ ಆಗಿದೆ. ಈಗ ಮೋದಿಯನ್ನು ಶನಿ ಎಂದು ಟೀಕಿಸಿದ್ಧಾರೆ. ಕಾಂಗ್ರೆಸ್ಸಿಗ ರಮೇಶ್ ಕುಮಾರ್.
ಕೋಲಾರದಲ್ಲಿ ಮಾತನಾಡಿರುವ ರಮೇಶ್ ಕುಮಾರ್, ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ ಎಂದು ಹೇಳಿದ್ದಾರೆ. ಜೂ.04 ಕ್ಕೆ ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದಿರುವ ರಮೇಶ್ ಕುಮಾರ್, ಇಂದಿರಾ ಗಾಂಧಿ ಕೂತಿದ್ದ ಸೀಟಿನಲ್ಲಿ ಬಂದು ಕುಳಿತುಬಿಟ್ಟೆಯಲ್ಲಪ್ಪಾ ಮೋದಿ, ಎಂತಹವರ ಜಾಗಕ್ಕೆ ಎಂತಹವರು ಬಂದು ಕೂತಿದ್ದಾನೆ. ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೇವೆ. ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ಧಾರೆ.
ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ ರಮೇಶ್ ಕುಮಾರ್ ಅವರಂಥವರಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಚುನಾವಣೆ ಫಲಿತಾಂಶವೇ ಅವರಿಗೆ ಉತ್ತರ ಕೊಡುತ್ತದೆ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದನ್ನ ಅವರು ನೋಡಲಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ರಮೇಶ್ ಕುಮಾರ್ ಅವರಂತಹವರ ಮಾತುಗಳಿಗೆ ಬೆಲೆಯೇ ಇಲ್ಲ, ಅಂತಹವರಿಗೆಲ್ಲ ರಿಯಾಕ್ಷನ್ ಕೊಡಬೇಕಾ ಎನ್ನುವ ಅರ್ಥದಲ್ಲಿ ಮಾತನಾಡಿರುವ ಯಡಿಯೂರಪ್ಪ ಮೋದಿ ಪ್ರಧಾನಿಯಾಗುವುದು ಶತಃ ಸಿದ್ಧ, ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಕಾಂಗ್ರೆಸ್ಸಿನ ಮುಖಂಡ ರಮೇಶ್ ಕುಮಾರ್ ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿ ಅವರು ರಮೇಶ್ ಕುಮಾರ್ ಮತ್ತು ಕಾಂಗ್ರೆಸ್ಸಿಗೆ ಶನಿಯಾಗಿದ್ದಾರೆ. ಯಾರು ಭಷ್ಟಾಚಾರ ಮಾಡುತ್ತಾರೆ, ಯಾರು ದೇಶವಿರೊಧಿ ಚಟುವಟಿಕೆ ಮಾಡುತ್ತಾರೆ. ಯಾರು ಜನ ವಿರೋಧಿ ಕೆಲಸ ಮಾಡುತ್ತಾರೆಯೋ ಅವರಿಗೆ ಮೋದಿ ಶನಿಯಾಗಿ ಕಾಡುತ್ತಾರೆ ಎಂದು ತಿರುಗೇಟು ನೀಡಿದರು. ದೇಶಭಕ್ತರಿಗೆ, ಯುವಕರಿಗೆ, ಹೆಣ್ಣುಮಕ್ಕಳಿಗೆ ಅವರು ವರವನ್ನು ಕೊಡುತ್ತಾರೆ. ರಮೇಶ್ ಕುಮಾರ್ ಅವರಿಗೆ ಅದರ ಒಳ ಮರ್ಮ ಗೊತ್ತಿದೆ ಎಂದಿದ್ಧಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಬರ ಬಂದಿದೆ ರೈತರಿಗೆ ಕೇವಲ ಎರಡು ಸಾವಿರ ಪರಿಹಾರ ನೀಡಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸುಮಾರು ₹1100 ಕೋಟಿ ಬಾಕಿ ಕೊಡಬೇಕಿದೆ. ಇದೊಂದು ರೈತ ವಿರೋಧಿ, ಬಡವರ, ದಲಿತರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಜನರ ತೆರಿಗೆ ಹಣವನ್ನು ಗ್ಯಾರಂಟಿಗಳಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಐವತ್ತು ಸಾವಿರ ಸಾಲ ಹೇರಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.



