ನಮಗೂ.. ನಿಮಗೂ.. ಅಷ್ಟೋ ಇಷ್ಟೋ ಆಸ್ತಿ ಇರುತ್ತದೆ. ಸಾಮಾನ್ಯವಾಗಿ ತಂದೆ, ತಾಯಿ, ತಾತ, ಅಜ್ಜಿಯರಿಂದ ಆಸ್ತಿ ನಮಗೆ ಬರುತ್ತದೆ. ಹಿರಿಯರು ಮಾಡಿಟ್ಟ ಆಸ್ತಿ.. ಕಷ್ಟವಿಲ್ಲದೆ ನಮಗೆ ವರ್ಗಾವಣೆಯಾಗುತ್ತದೆ. ಆದರೆ.. ಅದಕ್ಕೆ ಶೇ.55ರಷ್ಟು ಟ್ಯಾಕ್ಸ್ ಕಟ್ಟುವ ಕಾಲ ಬರಲಿದೆ ಎಂಬ ಮಾತು.. ಅದಕ್ಕೆ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆ..ಈಗ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ.. ಎಲ್ಲೆಲ್ಲೇ ಹೋಗಲಿ.. ಇದನ್ನೇ ಅಸ್ತ್ರ ಮಾಡಿಕೊಂಡಿದ್ಧಾರೆ.ಕಾಂಗ್ರೆಸ್ಸಿಗೆ ವೋಟ್ ಹಾಕಿದರೆ.. ನಿಮ್ಮ ಆಸ್ತಿಯನ್ನ ಕಿತ್ತುಕೊಳ್ಳುತ್ತೆ ಅನ್ನೋದು ಮೋದಿಯವರ ವಾಗ್ಬಾಣದ ಗುರಿ. ಇಷ್ಟಕ್ಕೂ ಏನಿದು ವಿವಾದ..?
ನಾವು ಗೆದ್ದರೆ ಇಡೀ ದೇಶದ ಸಂಪತ್ತನ್ನು ಎಕ್ಸ್-ರೇ ಮಾಡಿಸ್ತೇವೆ. ಪ್ರತಿಯೊಬ್ಬರ ಬಳಿ ಆಸ್ತಿ ಎಷ್ಟಿದೆ ಅನ್ನೋದ್ರ ಲೆಕ್ಕ ತೆಗೀತೇವೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಂತ್ಯವಾಗಬೇಕು. ಅಂತಾದ್ದೊಂದು ಕ್ರಾಂತಿಕಾರಿ ಹೆಜ್ಜೆ ಇಡಲಿದ್ದೇವೆ. ನಮಗೆ ವೋಟ್ ಹಾಕಿ ಎನ್ನುತ್ತಿದ್ದ ರಾಹುಲ್ ಗಾಂಧಿ, ಅದಕ್ಕೆ ತಕ್ಕಂತೆ ಸ್ಯಾಮ್ ಪಿತ್ರೊಡಾ ಹೇಳಿದ ಶೇ.55ರಷ್ಟು ಆಸ್ತಿ ತೆರಿಗೆ ದೊಡ್ಡ ಕೋಲಾಹಲ ಸೃಷ್ಟಿಸಿದ್ದು ನಿಜ.
ಪಿತ್ರಾರ್ಜಿತ ಆಸ್ತಿ ತೆರಿಗೆ ಎಂದರೇನು..?
ಮೃತ ವ್ಯಕ್ತಿಯಿಂದ ಪಿತ್ರಾರ್ಜಿತವಾಗಿ ಪಡೆದ ಆಸ್ತಿಗಳ ಮೇಲೆ ಪಿತ್ರಾರ್ಜಿತ ತೆರಿಗೆಯನ್ನು ವಿಧಿಸಲಾಗುತ್ತದೆ. ಇದು ಯಾರಿಗೆ ವರ್ಗವಾಗಿರುತ್ತದೆಯೋ.. ಅವರು ಟ್ಯಾಕ್ಸ್ ಕಟ್ಟಬೇಕು. ಆಸ್ತಿ, ಆಭರಣ, ಷೇರು.. ಹೀಗೆ ಎಲ್ಲದಕ್ಕೂ ಅನ್ವಯವಾಗುವಂತೆ ಈ ತೆರಿಗೆ ಪದ್ಧತಿ ಇರುತ್ತದೆ. ಒಂದೊಂದು ದೇಶಗಳಲ್ಲಿ ಒಂದೊಂದು ರೀತಿ ಇದೆ.
ಈ ಪ್ರಕಾರ ಉತ್ತರಾಧಿಕಾರ ಪಡೆದ ಮಕ್ಕಳು, ಮೊಮ್ಮಕ್ಕಳು ಅಥವಾ ಯಾವುದೇ ಇತರ ಫಲಾನುಭವಿಯಿಂದ ಆನುವಂಶಿಕವಾಗಿ ಪಡೆದಿದ್ದರೆ.. ಸರ್ಕಾರಕ್ಕೆ ಪಿತ್ರಾರ್ಜಿತ ಆಸ್ತಿ ತೆರಿಗೆ ಪಾವತಿಸಬೇಕು. ಕೆಲವು ದೇಶಗಳಲ್ಲಿ ರಕ್ತ ಸಂಬಂಧಿಗಳು ಅಂದರೆ.. ಮಗ, ಮಗಳು, ಪತಿ ಮತ್ತು ಪತ್ನಿ ಪಿತ್ರಾರ್ಜಿತ ತೆರಿಗೆ ಕಟ್ಟುವಂತಿಲ್ಲ. ಆದರೆ.. ಬೇರೆಯ ರೀತಿ ಪಡೆದವರು ಅಂದರೆ.. ಸಂಬಂಧ, ಬಾಂಧವ್ಯಕ್ಕೆ ಆಸ್ತಿಯ ಅಧಿಕಾರ ಪಡೆದವರು ಟ್ಯಾಕ್ಸ್ ಕಟ್ಟಲೇಬೇಕು.
ಕೆಲವು ದೇಶಗಳಲ್ಲಿ ಕಡಿಮೆ ಇದ್ದರೆ.. ಕೆಲವೆಡೆ ಹೆಚ್ಚು. ಕೆಲವು ಕಡೆ ಆಸ್ತಿಯ ಅರ್ಧಕ್ಕಿಂತಲೂ ಹೆಚ್ಚು ಅಧಿಕಾರ ಸರ್ಕಾರಕ್ಕೆ ಇರುತ್ತದೆ. ಸ್ಯಾಮ್ ಪಿತ್ರೊಡಾ ಹೇಳುವಂತೆ ಅಮೆರಿಕ ಮಾದರಿ ಶೇ.55ರಷ್ಟು ಎನ್ನುತ್ತಾರೆ. ಆದರೆ.. ವಾಸ್ತವದಲ್ಲಿ ಅಮೆರಿಕದಲ್ಲಿ ಶೇ.1 ಅಥವಾ ಶೇ.2ರಷ್ಟು ಪಿತ್ರಾರ್ಜಿತ ತೆರಿಗೆ ಇದೆ. ಆ ಮಾತು ಬೇರೆ.
ಭಾರತದಲ್ಲೂ ಇತ್ತು ಪಿತ್ರಾರ್ಜಿತ ತೆರಿಗೆ ಪದ್ಧತಿ
1953ರಿಂದ 1985ರವರೆಗೂ ಪಿತ್ರಾರ್ಜಿತ ತೆರಿಗೆ ನಿಯಮ ಭಾರತದಲ್ಲೂ ಇತ್ತು. ಅದನ್ನು ರದ್ದು ಮಾಡಿದ್ದವರೇ ರಾಜೀವ್ ಗಾಂಧಿಯವರ ಸರ್ಕಾರ. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್ ಅವರು ಹಠಕ್ಕೆ ಬಿದ್ದು ಪಿತ್ರಾರ್ಜಿತ ಆಸ್ತಿಯ ಮೇಲಿನ ತೆರಿಗೆ ರದ್ದು ಮಾಡಿದ್ದರು. . ಈ ವ್ಯವಸ್ಥೆಯು ಶ್ರೀಮಂತರು ಮತ್ತು ಬಡವರ ನಡುವೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ತರುವುದಿಲ್ಲ ಎಂದು ವಿಪಿ ಸಿಂಗ್ ಬಲವಾಗಿ ವಾದಿಸಿದ್ದರು.
ಯಾರಿವನು ಸ್ಯಾಮ್ ಪಿತ್ರೊಡಾ..?
ಸ್ಯಾಮ್ ಪಿತ್ರೋಡಾ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ. ಕಾಂಗ್ರೆಸ್ ಪಕ್ಷದ ವಿದೇಶಿ ಘಟಕದ ಅಧ್ಯಕ್ಷ.ಪೂರ್ತಿ ಹೆಸರು ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ. ಗುಜರಾತಿನವರು. ಇಡೀ ಕುಟುಂಬ ಗಾಂಧೀಜಿಯವರ ಅನುಯಾಯಿಯಾಗಿತ್ತು. ಇವತ್ತು ಭಾರತೀಯ ಟೆಲಿ ಕಮ್ಯುನಿಕೇಷನ್ ಕ್ರಾಂತಿ ಇದೆಯಲ್ಲ.. ಅದೆಲ್ಲದಕ್ಕೂ ಅಡಿಗಲ್ಲು ಹಾಕಿದವರು ಈ ಸ್ಯಾಮ್ ಪಿತ್ರೊಡಾ ಎನ್ನುವುದು ಕಾಂಗ್ರೆಸ್ಸಿಗರ ವಾದ.
ಭಾರತದಲ್ಲಿ ಹುಟ್ಟಿದ್ದರೂ.. ಅಮೆರಿಕದ ನಾಗರಿಕತ್ವ ಪಡೆದಿದ್ದ ಸ್ಯಾಮ್ ಪಿತ್ರೊಡಾ ಅವರನ್ನ.. ಭಾರತಕ್ಕೆ ಬರುವಂತೆ ಒಪ್ಪಿಸಿ ಕರೆತಂದಿದ್ದವರು ಖುದ್ದು ರಾಜೀವ್ ಗಾಂಧಿ. 1981ರಲ್ಲಿ ಅಮೆರಿಕದ ನಾಗರಿಕತ್ವ ತ್ಯಜಿಸಿ ಭಾರತಕ್ಕೆ ಬಂದ ಸ್ಯಾಮ್ ಪಿತ್ರೊಡಾ ಭಾರತದ ಟೆಲಿಕಾಂ ಆಯೋಗದ ಸ್ಥಾಪಕ ಅಧ್ಯಕ್ಷರಾದರು. ರಾಜೀವ್ ಗಾಂಧಿಯವರ ಸಲಹೆಗಾರರಾದರು. ದೂರಸಂಪರ್ಕ, ನೀರು, ಸಾಕ್ಷರತೆ, ಪ್ರತಿರಕ್ಷಣೆ, ಡೈರಿ ಮತ್ತು ಎಣ್ಣೆಕಾಳುಗಳಿಗೆ ಸಂಬಂಧಿಸಿದ ಆರು ತಂತ್ರಜ್ಞಾನ ಮಿಷನ್‌ಗಳ ಮುಖ್ಯಸ್ಥರಾಗಿದ್ದ ಸ್ಯಾಮ್.. 1990ರಲ್ಲಿ ಅಮೆರಿಕಕ್ಕೆ ವಾಪಸ್ ಆದರು.
ರಾಜೀವ್ ನಿಧನದ ನಂತರ ಭಾರತಕ್ಕೆ ಗುಡ್ ಬೈ ಹೇಳಿದ್ದ ಸ್ಯಾಮ್ ಪಿತ್ರೊಡಾ.. ಮತ್ತೆ ವಾಪಸ್ ಬಂದಿದ್ದು 5 ವರ್ಷಗಳ ನಂತರ. ಆಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸ್ಯಾಮ್ ಅವರಿಗಾಗಿಯೇ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್‌ನ ವರ್ಲ್ಡ್ ಟೆಲ್ ಅನ್ನೋ ಸೃಷ್ಟಿಸಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ರು.
ಕಾಂಗ್ರೆಸ್ ಸೋತ ಮೇಲೆ ಮತ್ತೆ ಅಮೆರಿಕಕ್ಕೆ ಹೋದ ಸ್ಯಾಮ್ ಪಿತ್ರೊಡಾ.. 2008ರಲ್ಲಿ ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಸಲಹೆಗಾರರಾದರು. ಟೆಲಿಕಮ್ಯುನಿಕೇಷನ್ ಕ್ರಾಂತಿಕಾರ ಈ ವ್ಯಕ್ತಿಯ ಮೇಲೆ ಸ್ಪೆಕ್ಟ್ರಂ ಹಂಚಿಕೆಯ ಆಧಿಕಾರವಿತ್ತು ಎನ್ನಲಾಗುತ್ತದಾರೂ.. ಹೊಣೆಗಾರಿಕೆ ಇರಲಿಲ್ಲ. ಹೀಗಾಗಿಯೇ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಹಲವರು ಹೆಸರು ಬಂದರೂ.. ಸ್ಯಾಮ್ ಹೆಸರು ಇರಲಿಲ್ಲ ಎನ್ನುವ ವಾದವೂ ಇದೆ.
2013ರಲ್ಲಿ ಸ್ಯಾಮ್ ಪಿತ್ರೊಡಾ ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯೂ ಆದರು. ಪಿತ್ರೊಡಾ ಬಡವರೇನಲ್ಲ. ಅವರ ಹೆಸರಿನಲ್ಲಿ 2 ಸಾವಿರಕ್ಕೂ ಹೆಚ್ಚು ಟೆಕ್ನಾಲಜಿ ಪೇಟೆಂಟ್ʻಗಳಿವೆ. ಸಿ-ಸ್ಯಾಮ್ ಅನ್ನೋ ಕಂಪೆನಿಯ ಓನರ್. 10ಕ್ಕೂ ಹೆಚ್ಚು ದೇಶಗಳಲ್ಲಿ ಬಿಸಿನೆಸ್ ಇದೆ.
ಇವರ ಆಸ್ತಿಯ ಕ್ಲಿಯರ್ ಪಿಕ್ಚರ್ ಗೊತ್ತಿಲ್ಲವಾದರೂ.. ಸಾವಿರಾರು ಕೋಟಿಗಳಿಗೆ ಯಜಮಾನ ಅನ್ನೋದಂತೂ ನಿಜ. ಈ ವ್ಯಕ್ತಿ ತನ್ನದೇ ಕಂಪೆನಿಯೀಂದ ವರ್ಷಕ್ಕೆ ಪಡೆಯುವ ಸಂಬಳ ಸುಮಾರು 80 ಕೋಟಿಯಂತೆ.
ಈ ವ್ಯಕ್ತಿಯನ್ನು ರಾಹುಲ್ ಗಾಂಧಿ ಅದೆಷ್ಟು ನಂಬಿದ್ದರೆಂದರೆ.. ತಮ್ಮ ಯಾವುದಾದರೂ ಒಂದು ಡ್ರೀಮ್ ಪ್ರಾಜೆಕ್ಟ್ ಐಡಿಯಾವನ್ನು ಮರುಮಾತಿಲ್ಲದೆ ಇವರಿಗೇ ವಹಿಸ್ತಾ ಇದ್ರು. ಎರಡನೇ ಯೋಚನೆ ಮಾಡ್ತಾ ಇರಲಿಲ್ಲ. ರಾಜೀವ್ ಗಾಂಧಿ ಕಾಲದ ಪ್ರತಿ ಯಶಸ್ಸು ಹಾಗೂ ವೈಫಲ್ಯ.. ಎಲ್ಲದಕ್ಕೂ ಈ ಸ್ಯಾಮ್ ಪಿತ್ರೊಡಾ ಹೊಣೆಗಾರ ಎನ್ನುತ್ತಾರೆ ರಾಜಕೀಯ ತಜ್ಞರು.



