ಹಾಲಿವುಡ್ ನೋಡಿದ್ದೀರಿ. ರೋಬೋ ಚಿತ್ರವನ್ನೂ ನೋಡಿದ್ದೀರಿ. ಕೃತಕ ರೋಬೋಟ್ ಸೃಷ್ಟಿಸಿ, ಮೆದುಗಳನ್ನೂ ಸೃಷ್ಟಿಸಿ.. ಆ ಕಂಪ್ಯೂಟರ್ ಚಿಪ್‍ಗೆ ಭಾವನೆಗಳನ್ನೂ ತುಂಬಿಸುವ ಕಥೆ. ಮೆದುಳಿಗೆ ಭಾವನೆಗಳೂ ಬಂದುಬಿಟ್ಟರೆ ಏನಾಗಬಹುದು ಅನ್ನೋದು ಸಿನಿಮಾ ಕಥೆ. ಈಗಾಗಲೇ ರೋಬೋಟ್‍ಗಳನ್ನು ಕೆಲವು ಕಡೆ ಬಳಸಲಾಗುತ್ತಿದೆ. ಮೈಸೂರಿನಲ್ಲೇ ರೋಬೋಟ್ ಮೂಲಕ ಸರ್ವಿಸ್ ಕೊಡುವ ಹೋಟೆಲ್ ಇದೆ. ಜೀವಕ್ಕೆ ಅಪಾಯ ಎನ್ನುವಂತಹ ಸನ್ನಿವೇಶ, ಪ್ರದೇಶಗಳಲ್ಲಿ ಕೂಡಾ ರೋಬೋಟ್ ಬಳಸಲಾಗುತ್ತಿದೆ. ಆದರೆ, ಮನುಷ್ಯನ ಮೆದುಳಿಗೇ ಚಿಪ್ ಜೋಡಿಸುವ ಕಾಲ್ಪನಿಕ ಕಥೆಗೆ ನಿಜರೂಪ ಕೊಡಲು ಮುಂದಾಗಿದ್ದಾರೆ ಎಲಾನ್ ಮಸ್ಕ್.

ಎಲಾನ್ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿ ಮಾನವರ ಮೆದುಳಿನಲ್ಲಿ ಚಿಪ್ ಸೇರಿಸುವ ಪ್ರಕ್ರಿಯೆಯನ್ನು ಇನ್ನು 6 ತಿಂಗಳಲ್ಲಿ ಆರಂಭಿಸಲಿದೆ. ಸ್ವತಃ ಎಲಾನ್ ಮಸ್ಕ್ ಇದನ್ನು ಘೋಷಿಸಿದ್ದು, ಮುಂಬರುವ ವರ್ಷಗಳಲ್ಲಿ ತಾವು ಕೂಡಾ ಚಿಪ್ ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಮಸ್ಕ್ ಪ್ರಕಾರ ಈ ಯೋಜನೆ ಯಶಸ್ವಿಯಾದರೆ ಲಾಭವಾಗುವುದು ಹುಟ್ಟಿನಿಂದಲೇ ಕುರುಡರಾಗಿರುವ, ಲಕ್ವಾ ಹೊಡೆದು ಕೈಗಳನ್ನು ಅಲುಗಾಡಿಸುವುದಕ್ಕೆ ಆಗದೇ ಇರುವವರಿಗೆ, ಘಜನಿ ಸ್ಟೈಲಲ್ಲಿ ಮರೆಯುವ ರೋಗ ಇರುವವರಿಗೆ, ಅಪಘಾತಕ್ಕೀಡಾಗಿ ಕೈಕಾಲು ಕಳೆದುಕೊಂಡಿರುವವರಿಗೆ ಉಪಯೋಗವಾಗಲಿದೆ. ಚಿಪ್ ಅಸೆಂಬಲ್ ಆದರೆ, ಮಾತನಾಡುವಂತೆಯೇ ಇಲ್ಲ. ಕೇವಲ ಮನಸ್ಸಿನ ಮೂಲಕವೇ ಆಪರೇಟ್ ಮಾಡಬಹುದು. ನಿಷ್ಕ್ರಿಯವಾಗಿರುವ ಅಂಗವನ್ನೂ ಆಕ್ಟಿವ್ ಮಾಡಬಹುದು ಎನ್ನುವ ವಾದ ಮುಂದಿಟ್ಟಿದ್ದಾರೆ.
ನ್ಯೂರಾಲಿಂಕ್ ಸಂಸ್ಥೆ, ಸರ್ಜಿಕಲ್ ರೋಬೋಟ್ (ಆರ್1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್ ಅಭಿವೃದ್ಧಿಪಡಿಸಿದೆ. ಅದನ್ನು ಮೆದುಳಿನಲ್ಲಿ ಫಿಕ್ಸ್ ಮಾಡುತ್ತಾರೆ. ಚಿಪ್ನ ಹೊರಭಾಗದಲ್ಲಿ ತಲೆಕೂದಲಿಗಿಂತಲೂ 20 ಪಟ್ಟು ಚಿಕ್ಕದಾದ ಎಲೆಕ್ಟ್ರೋಡ್ ವೈರ್ಗಳು ಇರುತ್ತವೆ. ಮೆದುಳಿನ ನರಗಳು ಬಳ್ಳಿಯಂತೆ ಹರಡಿಕೊಂಡಿರುತ್ತವಲ್ಲ, ಆ ರೀತಿ ಹರಡಿಕೊಂಡು ದೇಹದ ಅಂಗಾಂಗಗಳನ್ನು ಕಾಂಟ್ಯಾಕ್ಟ್ ಮಾಡುತ್ತವೆ. ವ್ಯಕ್ತಿ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಡಿಕೋಡ್ ಮಾಡಿ ಫೀಡ್ ಮಾಡುತ್ತವೆ.

ಸಿಂಪಲ್ಲಾಗ್ ಹೇಳ್ಬೇಕಂದ್ರೆ, ನಾವು ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ. ಇದರ ಲೈನ್ ಹೇಗಿರುತ್ತದೆಂದರೆ ಗಂಟಲು ಒಣಗಿ ನೀರು ಬೇಕು ಎಂಬ ಸಂದೇಶವನ್ನು ಗಂಟಲು, ನಾಲಗೆ ಮೂಲಕ ಮೆದುಳಿಗೆ ಹೋಗುತ್ತದೆ. ನಂತರ ಅದೇ ಮೆದುಳಿನಿಂದ ನೀರು ಹುಡುಕು ಎಂಬ ಸಂದೇಶ ಕಣ್ಣಿಗೆ ಹೋಗಿ, ಕಣ್ಣಿಗೆ ನೀರು ಬಿದ್ದ ತಕ್ಷಣ ನೀರನ್ನು ಎತ್ತಿಕೊಂಡು ಕುಡಿಯುವವರೆಗೆ, ನೀರು ಸಾಕು ಎನ್ನಿಸಿದ ತಕ್ಷಣ ನಿಲ್ಲಿಸುವವರೆಗೆ.. ಪ್ರತಿ ಕೆಲಸದಲ್ಲೂ ಮೆದುಳು ಆಕ್ಟಿವ್ ಆಗಿ ಕೆಲಸ ಮಾಡುತ್ತಲೇ ಇರುತ್ತದೆ. ಸಂದೇಶಗಳು ರವಾನೆಯಾಗುತ್ತಿರತ್ತವೆ. ಈ ಚಿಪ್ ಫಿಕ್ಸ್ ಮಾಡಿದರೆ ಅಷ್ಟೇ ಸ್ಪೀಡಿನಲ್ಲಿ ಕೆಲಸ ಮಾಡುತ್ತದಂತೆ.
ಅಂದ್ರೆ ನೀವು ಮನಸ್ಸಿನಲ್ಲಿ ಯಾರಿಗೋ ಫೋನ್ ಮಾಡಬೇಕು ಎಂದುಕೊಂಡರೆ ನಿಮ್ಮ ಬಳಿಯಿರೋ ಮೊಬೈಲ್‍ನಿಂದ ಆ ವ್ಯಕ್ತಿಗೆ ಕರೆ ಹೋಗುತ್ತದೆ. ಬೇಡ ಎನ್ನಿಸಿದರೆ ಕಟ್. ಕೈಕಾಲುಗಳ ಅಗತ್ಯವಿಲ್ಲ. ಮನಸ್ಸಿನ ಮಾತನ್ನು ಜಾರಿಗೆ ತರಬಹುದು. ಇದರ ಜೊತೆಗೆ ಮೆದುಳಿನಲ್ಲಿ ನಾನಾ ನರರೋಗದಿಂದ ನಿಷ್ಕ್ರಿಯಗೊಂಡಿರುವ ಭಾಗಗಳನ್ನು ಎಲೆಕ್ಟ್ರೋಡ್ ಮೂಲಕ ಉತ್ತೇಜಿಸಿ ಅವುಗಳನ್ನು ಮರಳಿ ಸಕ್ರಿಯಗೊಳಿಸುವ ಕೆಲಸ ಮಾಡುತ್ತದೆ. ಇದು ಯಶಸ್ವಿಯಾದರೆ ಪಾರ್ಶ್ವವಾಯು, ಪಾರ್ಕಿನ್ಸನ್ ಮೊದಲಾದ ಸಮಸ್ಯೆಯಿಂದ ನರಳುತ್ತಿರುವವರಿಗೆ ಆಶಾ ಕಿರಣವಾಗಲಿದೆ. ಚಿಪ್ ಅನ್ನು ಮಾನವರ ಮೆದುಳಿನಲ್ಲಿ ಅಳವಡಿಸಲು ನ್ಯೂರಾಲಿಂಕ್ ಎಲ್ಲಾ ಸಿದ್ಧತೆ ನಡೆಸಿದ್ದು, ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆಗೆ ಅರ್ಜಿ ಹಾಗೂ ದಾಖಲೆಗಳನ್ನೂ ಸಲ್ಲಿಸಿದೆ. ಅನುಮತಿ ನೀಡಿದರೆ ಮುಂದಿನ 6 ತಿಂಗಳಲ್ಲಿ ಮೆದುಳಿನಲ್ಲಿ ಚಿಪ್ ಸೇರ್ಪಡೆ ಕಾರ್ಯಕ್ರಮ ಆರಂಭವಾಗಲಿದೆ.

ಈ ಚಿಪ್ ಅಳವಡಿಕೆಯನ್ನು ಮನುಷ್ಯರು ಮಾಡುವುದಿಲ್ಲ.ವೈದ್ಯರು ಮಾಡುವುದಿಲ್ಲ. ಎಲೆಕ್ಟ್ರಿಕಲ್ ಎಕ್ಸ್‍ಪರ್ಟ್, ಸಾಫ್ಟ್‍ವೇರ್ ಎಕ್ಸ್‍ಪರ್ಟ್ ಮಾಡುವುದಿಲ್ಲ. ಬದಲಿಗೆ ಇದಕ್ಕೆಂದೇ ಒಂದು ರೋಬೋಟ್ ಸೃಷ್ಟಿಸಲಾಗಿದ್ದು, ರೋಬೋಟ್ ಮೂಲಕ ಚಿಪ್ ಅಳವಡಿಸಲಾಗುತ್ತಿದೆ. ನ್ಯೂರಾಲಿಂಕ್ ಕಂಪನಿಯು ಕಳೆದ ಕೆಲವು ವರ್ಷಗಳಿಂದ ಇಲಿ, ಮಂಗಗಳ ಮೆದುಳಿನಲ್ಲಿ ಚಿಪ್ ಅಳವಡಿಸಿ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು, ಈಗ ಮನುಷ್ಯರ ಮೇಲೆ ಪ್ರಯೋಗಕ್ಕೆ ಅನುಮತಿ ಸಿಗಬೇಕಿದೆ.



