ಸಿದ್ಧರಾಮಯ್ಯ ಸಿಎಂ ಆದ ಮೇಲೆ ಫೇಕ್ ನ್ಯೂಸ್ ತಡೆಗೆ ಕ್ರಮ ಕೈಗೊಂಡಿದ್ದಾರೆ. ಹಾಗೆ ನೋಡಿದರೆ ನೈಜ ಸುದ್ದಿಗಳಿಗಿಂತ ಹೆಚ್ಚಾಗಿ ಸುಳ್ಳು ಸುದ್ದಿಗಳು ಬೇಗ ಸದ್ದು ಮತ್ತು ಸುದ್ದಿ ಎರಡನ್ನೂ ಮಾಡುತ್ತವೆ. ಸುಳ್ಳು ಸುದ್ದಿಗಳಿಗೆ ವೇಗವೂ ಹೆಚ್ಚು. ಜನಪ್ರಿಯತೆಯೂ ಹೆಚ್ಚು. ಇಂತಹ ಸುಳ್ಳು ಸುದ್ದಿಗಳನ್ನು ಎದುರಿಸುವುದು ಸುಲಭ ಅಲ್ಲ. ಅಧಿಕಾರದಲ್ಲಿ ಇರುವವರು ಇವುಗಳನ್ನು ಎದುರಿಸುತ್ತಲೇ ಇರುತ್ತಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಎದುರಿಸಿದ್ದಾರೆ. ಆದರೆ, ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ, ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವ ಸುಳ್ಳು ಸುದ್ದಿ ಯಾವುದು ಗೊತ್ತೇ..?
ನನ್ನ ಹತ್ತಿರ ಏನ್ ನೋಟ್ ಪ್ರಿಂಟ್ ಮೆಷಿನ್ ಇದ್ಯಾ..? ಸಿದ್ಧರಾಮಯ್ಯ ಸದನದಲ್ಲಿ ಗ್ಯಾರಂಟಿಗಳ ಜಾರಿ ಬಗ್ಗೆ ಕೇಳಿದಾಗ ಕೊಟ್ಟ ಉತ್ತರ ಎಂಬ ರೀತಿಯಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕನಿಷ್ಠ ೧೫ ದಿನಕ್ಕೊಮ್ಮೆ ಈ ಹಳೆಯ ವಿಡಿಯೋ ವೈರಲ್ ಆಗುತ್ತದೆ. ಆದರೆ, ನಿಜಕ್ಕೂ ಆಗಿದ್ದೇನು ಎಂದರೆ..
ಸಿದ್ಧರಾಮಯ್ಯ ಈ ಮಾತು ಹೇಳಿದ್ದು ವಿಧಾನಸಭೆಯಲ್ಲಿಯೇ. ಆದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ ಹೇಳಿದ್ದ ಮಾತನ್ನು ಉಲ್ಲೇಖಿಸಿ ಹೇಳಿದ್ದ ಮಾತು ಅದು. ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುವುದುಕ್ಕೆ ಕುರಿತಂತೆ ನಾವೇನು ನೋಟ್ ಪ್ರಿಂಟ್ ಮಾಡುತ್ತೇವಾ..? ನಮ್ಮ ಬಳಿ ನೋಟ್ ಪ್ರಿಂಟಿಂಗ್ ಮೆಷಿನ್ ಇದ್ಯಾ..? ಎಂದು ಹೇಳಿದ್ದರು. ಯಡಿಯೂರಪ್ಪ ಏನು ಹೇಳಿದ್ದರು ಎನ್ನುವುದನ್ನು ಯಥಾವತ್ ರಿಪೀಟ್ ಮಾಡುವಾಗ ಹೇಳಿದ್ದ ಮಾತನ್ನು, ಗ್ಯಾರಂಟಿ ವಿಷಯಕ್ಕೆ ಹೇಳಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ನೆನಪಾಗಿದ್ದಕ್ಕೆ ಕಾರಣವೂ ಇದೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಸಿದ್ಧರಾಮಯ್ಯಸುಳ್ಳು ಸುದ್ದಿಗಳು ನನ್ನನ್ನು ಕೂಡ ಬಿಟ್ಟಿಲ್ಲ. ಯಡಿಯೂರಪ್ಪ ನವರು ಹೇಳಿದ್ದನ್ನ ನಾನು ಹೇಳಿದ ಹಾಗೆ ಮಾಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಯಿಂದ ನಷ್ಟವಾಗಿದ್ದು ಸಮಾಜಕ್ಕೇ ಹೊರತು ನನಗಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈ ಮಾತನ್ನು ನಾನೇ ಹೇಳಿದ್ದೆ ಎಂದು, ಗ್ಯಾರಂಟಿ ಯೋಜನೆಗಳಿಗೆ ಲಿಂಕ್ ಮಾಡಿ ಸುದ್ದಿ ಮಾಡಿದರು. ಜನರಿಗೆ ತಪ್ಪು ಸಂದೇಶ ನೀಡಿದರು ಎಂದು ಹೇಳಿದ್ದಾರೆ ಸಿದ್ದರಾಮಯ್ಯ.
ಫೇಕ್ ನ್ಯೂಸ್ ತಡೆಗೆ ಸಂಬಂಧಪಟ್ಟಂತೆ ಮಾತನಾಡಿದ ಸಿದ್ಧರಾಮಯ್ಯ ʻಫೇಕ್ ನ್ಯೂಸ್ ತಡೆಗೆ ನಾವೇನೋ ಕಾನೂನು ರೂಪಿಸಿದ್ದೇವೆ. ಆದರೆ ಸಮಾಜದಲ್ಲಿ, ಜನರ ನಡುವೆ ಜಾಗೃತಿ ಮೂಡದ ಹೊರತು ಫೇಕ್ ನ್ಯೂಸ್ ತಡೆ ಸಾಧ್ಯವಿಲ್ಲʼ ಎಂದು ಅಭಿಪ್ರಾಯಪಟ್ಟರು.
ಜನರಿಗೆ ಸತ್ಯ ಹೇಳುವ ಕೆಲಸವನ್ನ ಪತ್ರಿಕೆಗಳು ಮಾಡಬೇಕು. ಇದರ ನಡುವೆ ಸರ್ಕಾರ ಪತ್ರಿಕಾ ರಂಗದ ಸುದ್ದಿಗಳನ್ನ ಫ್ಯಾಕ್ಟ್ ಚೆಕ್ ಮಾಡಲಿಕ್ಕೆ ಮುಂದಾಗಿದ್ದು, ಕೆಲವು ಅಡೆ ತಡೆಗಳಿವೆ. ಸುಳ್ಳು ಸುದ್ದಿಗಳನ್ನ ಪ್ರಸಾರ ಮಾಡೋದರಿಂದ ವ್ಯಕ್ತಿಯ ತೇಜೋವದೆ ಆಗುತ್ತದೆ, ಹಾಗಾಗಿ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವಂತ ಕೆಲಸ ಮಾಡೋಣ ಎಂದು ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪತ್ರಿಕೆಗಳು ಅನಗತ್ಯ ವಿಚಾರಗಳನ್ನ ಬಿಟ್ಟು ವಸ್ತುನಿಷ್ಟ, ಪ್ರಸ್ತುತ ಬೆಳವಣಿಗೆ ಬಗ್ಗೆ ತಿಳಿಸುವಂತಹ ಕೆಲಸ ಮಾಡಬೇಕು. ಸಾಂಸ್ಕೃತಿಕ ಹಿನ್ನೆಲೆ ಇರದ ವ್ಯಕ್ತಿಗಳು ಸಿಎಂ ಸಿದ್ದರಾಮಯ್ಯರನ್ನ ಟೀಕೆ ಮಾಡುವ ಕೆಲಸ ಮಾಡುತ್ತಿವೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಪತ್ರಿಕೋದ್ಯಮ ಮತ್ತು ಮತದಾರರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.



