ರಾಜ್ಯಕ್ಕೆ ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣ ಕೊಡದೆ ಯಾಮಾರಿಸಿದೆ. ನಮಗೆ ಸಿಕ್ಕಿದ್ದು ದೊಡ್ಡ ಚೊಂಬು ಅನ್ನೋ ಜಾಹೀರಾತು ಈಗ ರಾಜ್ಯಾದ್ಯಂತ ಸೌಂಡ್ ಮಾಡ್ತಾ ಇದೆ. ಒಂದು ಜಾಹೀರಾತು ಕೂಡಾ ಸುದ್ದಿಯಾಗಿದ್ದು ಇತ್ತೀಚೆಗೆ ಅಪರೂಪವೆಂದೇ ಹೇಳಬೇಕು.
ಕಾಂಗ್ರೆಸ್ ಜಾಹೀರಾತಿನಲ್ಲಿ..
ಸ್ಟೀಲ್ ಚೊಂಬಿನ ಚಿತ್ರ ಹಾಕಲಾಗಿದ್ದು.. ಆ ಚೊಂಬಿನ ಚಿತ್ರದ ಕೆಳಗೆ ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಎಂಬ ಬರಹ ಇದೆ.
ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುವ ಚೊಂಬು
ರೈತರ ಆದಾಯ ಡಬಲ್ ಮಾಡುವ ಚೊಂಬು
ತೆರಿಗೆ ಹಂಚಿಕೆಯಲ್ಲಿ ಚೊಂಬು
ಬರ/ನೆರೆ ಪರಿಹಾರದಲ್ಲಿ ಚೊಂಬು
27 ಜನ ಬಿಜೆಪಿ/ಜೆಡಿಎಸ್ ಸಂಸದರು ರಾಜ್ಯಕ್ಕೆ ನೀಡಿದ ಕೊಡುಗೆ ಕೇವಲ ಚೊಂಬು
ಈ ಚುನಾವಣೆಯಲ್ಲಿ ನಾವು ನೀಡೋಣ ಇದೇ ಚೊಂಬು ಎಂದು ಬರೆಯಲಾಗಿದೆ.
ಕಾಂಗ್ರೆಸ್ ನ ಜಾಹೀರಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತೆರಿಗೆ ಹಂಚಿಕೆ, ಬರ ಪರಿಹಾರ, ರೈತರ ಆದಾಯ ಇತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಕೊಡುಗೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರು ಕನ್ನಡಿಗರ ಕೈಗೆ ಖಾಲಿ ಚೊಂಬು ಕೊಟ್ಟವರು ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಜೆಪಿ ಟೆನ್ಷನ್ ಆಗಿದೆ. ಎಂದಿನಂತೆ ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ವಿಚಾರ ಎತ್ತಿ ಚೊಂಬಿನ ಜಾಹೀರಾತನ್ನು ಟೀಕಿಸಿದ್ಧಾರೆ.
ಕಾಂಗ್ರೆಸ್ಸಿಗರೇ,
•ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. •ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು.
•ಇದ್ದ ಬದ್ದ ಹಣವನ್ನೆಲ್ಲ ಖಾಲಿಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು.
•ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು.
• ನಿರುದ್ಯೋಗಿಗಳಿಗೆ ಯುವನಿಧಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು. ದೇಶದಲ್ಲಿ ಕಾಣದ ‘ಕೈ’ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ‘ಖಾಲಿ ಚೊಂಬು ಎಂದು ಲೇವಡಿ ಮಾಡಿದ್ಧಾರೆ.
ಅಶೋಕ್ ಕೂಡಾ ಬೆಂಗಳೂರಿನ ಜನತೆಗೆ ನಿಮ್ಮ ಕಾಂಗ್ರೆಸ್ ಸರ್ಕಾರದಿಂದ ಸಿಕ್ಕಿದ್ದು ಬರೀ ಬಾಂಬು ಮತಾಂಧರು ರಾಜ್ಯದೆಲ್ಲೆಡೆ ಹಿಂದೂಗಳ ಮೇಲೆ ಅಟ್ಟಹಾಸ ಮೆರೆಯಿತ್ತಿರುವುದಕ್ಕೆ ಕಾರಣ ಎಂದು ಟೀಕಿಸಿದ್ದಾರೆ.
ಮಾಧ್ಯಮದವರ ಮೈಕುಗಳ ಮುಂದೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರಿಗೆ ಟೆನ್ಷನ್ ಕೊಟ್ಟ ಚೊಂಬಿನ ಜಾಹೀರಾತು ಸಖತ್ ಕ್ರಿಯೇಟಿವ್ ಆಗಿದೆ.
ವಿಧಾನಸಭೆ ಚುನಾವಣೆ ವೇಳೆ ಪೇ ಸಿಎಂ ಜಾಹೀರಾತಿನ ಮೂಲಕ ಸಂಚಲನ ಸೃಷ್ಟಿಸಿದ್ದ ಕಾಂಗ್ರೆಸ್, ಈಗ ಚೊಂಬಿನ ಜಾಹೀರಾತಿನ ಮೂಲಕ ಸದ್ದು ಮಾಡಿದೆ. ವೋಟು ಪ್ಲಸ್ ಆಗುತ್ತೋ.. ಬಿಡುತ್ತೋ.. ಸದ್ಯಕ್ಕಂತೂ ಕಾಂಗ್ರೆಸ್ ಮೀಡಿಯಾ ಟೀಂ ಆಕ್ಟಿವ್ ಆಗಿದೆ. ಕ್ರಿಯೇಟಿವ್ ಆಗಿದೆ.



