ಎಲೆಕ್ಷನ್ ಮುಗಿದಿದ್ದರೂ, ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಜಟಾಪಟಿಯೇನು ನಿಂತಿಲ್ಲ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದಿರುವ ಪ್ರಿಯಾಂಕ್ ಖರ್ಗೆ ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಐಟಿ-ಬಿಟಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ. ಆದರೆ ಶಿಕ್ಷಣ ಇಲಾಖೆಯ ಬಗ್ಗೆ ಅದೇಕೆ ಮಾತನಾಡಿದರೋ ಗೊತ್ತಿಲ್ಲ. ಆದರೆ ಹಿರಿಯ ಸಚಿವರಾಗಿ ಪ್ರಿಯಾಂಕ್ ಖರ್ಗೆಯವರಿಗೆ ತಮ್ಮ ಸರ್ಕಾರದ ಇನ್ನೊಂದು ಇಲಾಖೆಯ ಬಗ್ಗೆ ಮಾತನಾಡುವ ಅಧಿಕಾರ ಇದೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ವಿಷಯ ಅದಲ್ಲ. ಚಕ್ರವರ್ತಿ ಸೂಲಿಬೆಲೆ ಹೆಸರು ಎತ್ತಿದ್ದೇ ತಡ, ಪ್ರಿಯಾಂಕ್ ಖರ್ಗೆ ವಿಷಯವೂ ಮುನ್ನೆಲೆಗೆ ಬಂದಿದೆ.
ಚಕ್ರವರ್ತಿ ಸೂಲಿಬೆಲೆ ಯಾವ ಪಿಎಚ್ಡಿ ಮಾಡಿದ್ದಾರೆ? ಬಾಡಿಗೆ ಭಾಷಣಕಾರರನ್ನೆಲ್ಲಾ ನೀವು ಲೇಖಕರು, ಸಾಹಿತಿಗಳು ಮಾಡಿದರೆ ಅದನ್ನು ನಮ್ಮ ಮಕ್ಕಳು ಓದಬೇಕಾ? ಕರ್ನಾಟಕ ಸಾಹಿತ್ಯಕ್ಕೆ ಅಷ್ಟುಬರ ಬಂದಿದೆಯಾ? ಯಾರು ಇವರೆಲ್ಲಾ? ವಾಟ್ಸಪ್ ಯುನಿವರ್ಸಿಟಿಯಲ್ಲಿ ಓದೋರು ಇವರು. ಅಲ್ಲಿಯ ಕುಲಪತಿಗಳು ನಮ್ಮ ಮಕ್ಕಳ ಪಠ್ಯಪುಸ್ತಕ ರಚನೆ ಮಾಡಲು ಪ್ರಾರಂಭ ಮಾಡಿದ್ದಾರೆ. ಅಂತಹ ಪಾಠವನ್ನು ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳ ಭವಿಷ್ಯ ಏನಾಗಬೇಕು. ಚಕ್ರವರ್ತಿ ಸೂಲಿಬೆಲೆಗಿಂತ ಒಳ್ಳೆಯ ಸಾಹಿತಿಗಳು ನಮ್ಮಲ್ಲಿ ಇಲ್ಲವಾ? ಚಕ್ರವರ್ತಿ ಸೂಲಿಬೆಲೆ ವಾಸ್ತವ ಹೇಳುವ ವ್ಯಕ್ತಿ ಅಲ್ಲ. ಅವರು ಬರೆದಿರೋ ಪಠ್ಯವನ್ನು ನಾನು ಯಾಕೆ ಓದಲಿ. ಓದೋಕೆ ನನಗೆ ಸಾಕಷ್ಟುಇದೆ. ಚಕ್ರವರ್ತಿ ಸೂಲಿಬೆಲೆ ಬರೆದ ಪಾಠ ನಮ್ಮ ಜನರಿಗೆ, ನಮ್ಮ ಮಕ್ಕಳಿಗೆ ಅಗತ್ಯ ಇಲ್ಲ. ಅದನ್ನು ಪಠ್ಯಪುಸ್ತಕದಿಂದ ತೆಗೆಯುತ್ತೇವೆ ಎಂದಿದ್ದರು ಪ್ರಿಯಾಂಕ್ ಖರ್ಗೆ.
ಚಕ್ರವರ್ತಿ ಸೂಲಿಬೆಲೆ ಅವರ ಪಿಹೆಚ್`ಡಿ ಬಗ್ಗೆ ಪ್ರಶ್ನೆ ಮಾಡಿದ್ದೇ ತಡ, ಪ್ರಿಯಾಂಕ್ ಖರ್ಗೆ 12 ತರಗತಿ ಫೇಲು, 10ನೇ ತರಗತಿ ಫೇಲು, ಮೀಸಲಾತಿ ಪಡೆದರೂ ಓದೋಕೆ ಆಗಿಲ್ಲ. ಖರ್ಗೆಯವರಂತಹ ಶ್ರೀಮಂತನ ಮಗ, ಮೀಸಲಾತಿ ಪಡೆದರೂ ವಿದ್ಯಾರ್ಹತೆ ಇಲ್ಲ ದರೆ ಚಕ್ರವರ್ತಿ ಸೂಲಿಬೆಲೆ ಎಂಜಿನಿಯರಿಂಗ್ ಪದವೀಧರ ಎಂದು ಟೀಕೆ ಮಾಡೋಕೆ ಶುರು ಮಾಡಿದ್ದರು ಸೂಲಿಬೆಲೆ ಅಭಿಮಾನಿಗಳು.
ಈ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ ನನ್ನ ವಿದ್ಯಾರ್ಹತೆ ನನ್ನ ಅಫೀಡವಿಟ್ ನಲ್ಲೇ ಇದೆ. ಅದನ್ನ ನೋಡಿಕೊಳ್ಳೋದಕ್ಕೆ ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಹೋಗಿ ಅದನ್ನೂ ನೋಡಿಕೊಳ್ಳಲು ಹೇಳಿ. ನ್ಯಾಷನಲ್ ಲಾ ಸ್ಕೂಲ್ ನಲ್ಲೂ ನಾನು ಪಾಸಾಗಿದ್ದೇನೆ. ನಾನು ಮಾಡಿದ ವಿದ್ಯಾಭ್ಯಾಸ ಇವ್ರಿಗೆ ತಿಳಿಯದೇ ಇರಬಹುದು. ಅದಕ್ಕೆ ನಾನೇನು ಉತ್ತರ ಕೊಡೋದಕ್ಕೆ ಆಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಷಯವನ್ನೂ ಎಳೆದು ತಂದಿದ್ದಾರೆ.
ನನ್ನ ವಿದ್ಯಾರ್ಹತೆ ಬಗ್ಗೆ ಟೀಕೆ ಮಾಡುವವರು ಅವರ ಸುಪ್ರೀಂ ಲೀಡರ್ ಇದ್ದಾರಲ್ಲ ಅವರ ಅರ್ಹತೆ ಏನಿದೆ ಅನ್ನೋದನ್ನ ತಿಳ್ಕೋದಕ್ಕೆ ಹೇಳಿ. ಯಾರಾದ್ರೂ ಪ್ರಧಾನ ಮಂತ್ರಿ ಅವರ ಡಿಗ್ರಿ ತಿಳ್ಕೋಳ್ಳೋಕೆ ಹೋದ್ರೆ ಆರ್ ಟಿ ಐ ನಲ್ಲಿ ಕೊಡಬೇಡಿ ಅಂತಾ ಹೇಳ್ಬಿಟ್ಟಿದ್ದಾರೆ. ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಮೊದಲು ಅದಕ್ಕೆಲ್ಲಾ ಉತ್ತರ ಕೊಡಲಿ ಎಂದಿದ್ದಾರೆ ಪ್ರಿಯಾಂಕ್ ಖರ್ಗೆ.



