ಬಸನಗೌಡ ಪಾಟೀಲ ಯತ್ನಾಳ್. ಬಿಜೆಪಿ ಫೈರ್ ಬ್ರಾಂಡ್. ಎಷ್ಟೋ ಬಾರಿ ಅವರ ಹೇಳಿಕೆಗಳು ಅವರ ರಾಜಕೀಯಕ್ಕೆ ಡ್ಯಾಮೇಜ್ ಮಾಡಿವೆ. ಪಕ್ಷದೊಳಗೆ ವೈರಿಗಳನ್ನು ಹುಟ್ಟುಹಾಕಿವೆ. ಸಮುದಾಯದೊಳಗೆ ಒಬ್ಬಂಟಿಯಾಗುವಂತೆ ಮಾಡಿವೆ. ಯಡಿಯೂರಪ್ಪ ಅವರನ್ನು ಪಕ್ಷದೊಳಗೇ ಇದ್ದುಕೊಂಡು ನೇರಾನೇರವಾಗಿ ಬೈದು ದಕ್ಕಿಸಿಕೊಳ್ಳುವ ನಾಯಕನೊಬ್ಬನಿದ್ಧಾನೆ ಎಂದರೆ ಅದು ಯತ್ನಾಳ್. ನಮ್ಮಲ್ಲಿ ಸಿಎಂ ಆಗುವುದಕ್ಕೆ ಸಾವಿರಾರು ಕೋಟಿ ಕೊಡಬೇಕು ಎಂದು ಹೇಳಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರೂ.. ಬೆಂಕಿ ಉಗುಳುತ್ತಲೇ ಇರುವ ನಾಯಕ ಯತ್ನಾಳ್. ಬಿಜೆಪಿಯಲ್ಲಿ ನನಗೆ ಮುಸ್ಲಿಮರ ವೋಟು ಬೇಡ ಎಂದು ನೇರವಾಗಿ ಗುಡುಗುವ ಯತ್ನಾಳ್.. ಬಿಜೆಪಿಯಲ್ಲಿಯೇ ಇರುವ ಹಲವರಿಗೆ ಉಗುಳಲಾಗದ.. ನುಂಗಲಾಗದ ಬಿಸಿ ಬಿಸಿ ಬೆಂಕಿ ತುಪ್ಪ. ಅಂತಹ ಯತ್ನಾಳ್ ಈಗ ಒಬ್ಬ ಸ್ವಾಮೀಜಿಯ ಬಗ್ಗೆ ಮಾತನಾಡಿದ್ಧಾರೆ.
ಬುಕ್ಕಿಂಗ್ ಸ್ವಾಮೀಜಿ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಬೊಮ್ಮಾಯಿಗೆ ಹೇಳಿದೆ ಇವನು ಬದ್ಮಾಶ್ ಅದಾನ ಇವನನ್ನ ನಂಬಬೇಡಿ ಅಂತಾ. ಬೊಮ್ಮಾಯಿ, ಯಡಿಯೂರಪ್ಪ ಸೇರಿ 15 ಕೋಟಿ ಕೊಟ್ಟಿದ್ದಾರೆ. ಕೊಡಬೇಡ ಎಂದ್ರೂ ಕೇಳಲಿಲ್ಲ. ಇಂತಹ ಕಾವಿ ಹಾಕೊಂಡು ಓಡಾಡುವ ನಾಟಕ ಕಂಪನಿಯ ಸ್ವಾಮಿಗಳು ಇದ್ದಾರೆ. ಸ್ವಾಮೀಗಳಿಗಿಂತ ರಾಜಕಾರಣಿಗಳು ಉತ್ತಮ..
ಇಂತಾದ್ದೊಂದು ಮಾತು ಹೇಳಿದ್ದಾರೆ ಬಸನಗೌಡ ಪಾಟೀಲ ಯತ್ನಾಳ್. ಯತ್ನಾಳ್ ಹೇಳಿದ ಆ ಬುಕ್ಕಿಂಗ್ ಸ್ವಾಮೀಜಿ ಯಾರು..? ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಅದೇ. ಯತ್ನಾಳ್ ಅವರಿಗೆ ವಿರುದ್ಧವಾಗಿರುವ ಸ್ವಾಮೀಜಿ ಇರಬಹುದಾ..? ಆತ ಕೆಲವು ವರ್ಷಗಳ ಹಿಂದೆ ಉದ್ಭವವಾದ ವಚನಾನಂದ ಶ್ರೀ ಇರಬಹುದಾ..? ಅಥವಾ.. ಹುಬ್ಬಳ್ಳಿಯಲ್ಲಿ ನಾಮಪತ್ರ ಸಲ್ಲಿಸಿ.. ನಂತರ ವಾಪಸ್ ತೆಗೆದುಕೊಂಡು.. ಈಗ ಕಾಂಗ್ರೆಸ್ಸಿಗೆ ಮತ ಹಾಕಿ ಎಂದು ಹೇಳುತ್ತಿರುವ ದಿಂಗಾಲೇಶ್ವರ ಸ್ವಾಮೀಜಿ ಇರಹುದಾ..? ಯಾರು.. ಆ ಬುಕ್ಕಿಂಗ್ ಸ್ವಾಮೀಜಿ.
ತುಂಬಾ ದಿನಗಳೇನು ಕಾಯಬೇಕಿಲ್ಲ. ಆ ಸ್ವಾಮೀಜಿಯ ಹೆಸರನ್ನು ಸ್ವತಃ ಯತ್ನಾಳರೇ ಹೇಳ್ತಾರೆ ಬಿಡಿ. ಆ ಮನುಷ್ಯ ಎದೆಯೊಳಗೆ ಇಟ್ಟುಕೊಂಡು ಓಡಾಡೋ ಪೈಕಿ ಅಲ್ಲ ಅಂತಾರೆ ಯತ್ನಾಳ್ ಬೆಂಬಲಿಗರು. ಆದರೆ.. ಯತ್ನಾಳ್ ಕೂಡಾ ಒಬ್ಬ ರಾಜಕಾರಣಿ. ಅವರಿಗೆ ಯಾವ ಕೊಳಾಯಿಯನ್ನು ಎಲ್ಲಿ ತಿರುವಿದರೆ.. ಎಲ್ಲಿ ನೀರು ಬರುತ್ತದೆ ಎನ್ನುವುದು ಗೊತ್ತು.
ಇದೇ ವೇಳೆ ಮೀಸಲಾತಿ ವಿಷಯವನ್ನು ಹೇಳಿರುವ ಯತ್ನಾಳ್ ದೇವಸ್ಥಾನಕ್ಕೆ ಕಾಣಿಕೆ ಕೊಟ್ಟರೆ ಅದೇ ಹಣವನ್ನ ಸಿಎಂ ಮುಸಲ್ಮಾನರಿಗೆ ಕೊಡುತ್ತಾನೆ. ಸಿಎಂ ಸಿದ್ದರಾಮಯ್ಯ ವಕ್ಫ ಬೋರ್ಡ್ಗೆ 100 ಕೋಟಿ ರೂ. ಕಂಪೌಂಡ್ ನಿರ್ಮಿಸುತ್ತಿದ್ದಾರೆ. ಹೀಗಾಗಿ ಜಾತಿ ಜಾತಿ ಎನ್ನದೇ ಎಲ್ಲರೂ ಬಿಜೆಪಿಗೆ ಮತ ಚಲಾಯಿಸುವಂತೆ ಯತ್ನಾಳ ಮನವಿ ಮಾಡಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಂ ಮೀಸಲಾತಿ ತೆಗೆಯುವದು ಗ್ಯಾರಂಟಿ. ನಾನು ಹಿಂದೆನೇ ‘ಏಯ್ ಬೊಮ್ಮಾಯಿ ನಾಟಕ ಮಾಡಿ ಮೀಸಲಾತಿ ತೆಗೆಯದಿದ್ರೆ ನೋಡು ಎಂದೆ. ತಾಯಿ ಆಣೆ ಮಾಡಿ ಹೇಳ್ತೀನಿ ಬೊಮ್ಮಾಯಿ ಮೀಸಲಾತಿ ಕೊಡ್ತಾನೆ ಎಂದಿದ್ದಾರೆ ಎಲ್ಲ ಲಿಂಗಾಯತ ಜಾತಿ, ಉಪಜಾತಿಗಳಿಗೂ ಮೀಸಲಾತಿ ನೀಡುವಂತೆ ಹೇಳಿದ್ದೇನೆ. ಪಂಚಮಸಾಲಿಗಳಿಗೆ ಅನ್ಯಾಯ ಆಗಿದೆ ಅಂತಿದ್ದಾರೆ. ಮುಂದೊಂದು ದಿನ ಪಂಚಮಸಾಲಿಗಳನ್ನೇ ಮುಖ್ಯಮಂತ್ರಿ ಮಾಡಿದ್ರೆ ಅವಾಗ ಏನ್ ಮಾಡ್ತಿರಾ? ನನ್ನ ಬಳಿ ಧಮ್ಮು ತಾಕತ ಇದೆ. ಅದನ್ನ ತೆಗೆದುಕೊಂಡು ಬರ್ತಿನಿ. ಮತ್ತೆ ನಾನೇ ಸಿಎಂ ಆಗುತ್ತೇನೆ ಎಂದಿದ್ದಾರೆ ಯತ್ನಾಳ್.



