ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಸಣ್ಣ ಸಣ್ಣದ್ದೆಲ್ಲ ನಡೀತಾ ಇರುತ್ತೆ.. ಇಂಥಾದ್ದೊಂದು ಅರ್ಥದ ಹಿಂದಿ ಡೈಲಾಗ್ ಕೇಳಿದ್ದರೆ, ಎಲ್ಲಾದರೂ ಹುಡುಕಿ ಕೇಳಿಕೊಳ್ಳಿ. ಶಿವಣ್ಣ ಇದ್ದಾರೆಂದೇ ಜೈಲರ್ ಚಿತ್ರಕ್ಕೆ ಕರ್ನಾಟಕದಲ್ಲಿ ಈ ಹಿಂದಿನ ಕ್ರೇಜ್`ನ್ನೂ ಮೀರಿದ ರಜನಿ ಹವಾ ಕ್ರಿಯೇಟ್ ಆಗಿರೋದು. ಇಲ್ಲಿ ಹಾಕಿರುವ ಕಟೌಟುಗಳಲ್ಲಿ ಶಿವಣ್ಣ ಜೊತೆ, ಅಪ್ಪು ಕೂಡಾ ಇದ್ದಾರೆ. ಅದು ಅಭಿಮಾನಿ ದೇವರುಗಳ ಹೆಮ್ಮೆ. ರಜನಿಕಾಂತ್ ಚಿತ್ರದ ಈವೆಂಟ್ ಶೋನಲ್ಲೂ ಶಿವಣ್ಣ ನನ್ನ ಚಿತ್ರದಲ್ಲಿ ನಟಿಸಿದ್ದು ನನ್ನ ಭಾಗ್ಯ ಎಂದಿದ್ದರು. ಅದು ರಜನಿಕಾಂತ್ ಅವರ ದೊಡ್ಡತನ. ಆದರೆ, ಬುಕ್ ಮೈ ಶೋದವರಿಗೆ (Book My Show) ಇದೇನಾಗಿದೆ..?
ಶಿವಣ್ಣ. ಕನ್ನಡಿಗರ ಸೂಪರ್ ಸ್ಟಾರ್. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಳ್ಳುವ ಶಿವರಾಜ್`ಕುಮಾರ್ (Dr.Shiva Rajkumar), ಇದೇ ಮೊದಲ ಬಾರಿಗೆ ತಮಿಳಿನಲ್ಲಿ ನಟಿಸಿದ್ದಾರೆ. ರಜನಿಕಾಂತ್ (Rajanikanth) ಅವರ ಜೈಲರ್ (Jailor) ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ತನ್ನದು ಸುಮಾರು 10 ನಿಮಿಷಗಳ ರೋಲ್ ಅಷ್ಟೇ ಎಂದಿರೋ ಶಿವಣ್ಣ, ಚಿತ್ರದ ಬಗ್ಗೆ ಥ್ರಿಲ್ ಆಗಿದ್ದಾರೆ. ನಾಳೆ ಸಿನಿಮಾ ರಿಲೀಸ್. ಬುಕ್ಕಿಂಗ್ ಜೋರಾಗಿಯೇ ಇದೆ.
ತಮಿಳು ಚಿತ್ರಗಳಿಗೆ ಕರ್ನಾಟಕದ ಮಾರುಕಟ್ಟೆ ಅನ್ನೋದು ಕಾಮಧೇನು ಇದ್ದಂತೆ. ಇಲ್ಲಾದರೆ ಡಬಲ್ ತ್ರಿಬಲ್ ದುಡ್ಡಿಗೆ ಟಿಕೆಟ್ ಮಾರಬಹುದು. ಆ ಕಥೆ ಬಿಡಿ, ಬುಕ್ ಮೈ ಶೋನಲ್ಲಿ (Book My Show) ಟಿಕೆಟ್ ಬುಕ್ ಮಾಡೋಕೆ ನೋಡಿದರೆ.. ಅಲ್ಲಿ ಶಿವಣ್ಣನೇ ಇಲ್ಲ. ಶಿವಣ್ಣ ತಮ್ಮ ಚಿತ್ರದಲ್ಲಿ ಪುಟ್ಟ ಪಾತ್ರವಾದರೂ ನಟಿಸಿದ್ದು ನನ್ನ ಭಾಗ್ಯ ಎಂಬಂತೆ ರಜನಿಕಾಂತ್ ಅವರೇ ಮಾತನಾಡ್ತಾರೆ. ತಮಿಳುನಾಡು ಇಂಡಸ್ಟ್ರಿಯೂ ಥ್ರಿಲ್ಲಾಗಿ ಚಪ್ಪಾಳೆ ಹೊಡೆಯುತ್ತೆ. ಆದರೆ ಜೈಲರ್ ಚಿತ್ರವನ್ನು ಬುಕ್ ಮಾಡುವಾಗ ಬುಕ್ ಮೈ ಶೋನಲ್ಲಿ (Book My Show) ಶಿವಣ್ಣ ಫೋಟೋ ನಾಪತ್ತೆಯಾಗುತ್ತೆ.
ಹೌದು, ಬುಕ್ ಮೈ ಶೋನಲ್ಲಿ (Book My Show) ಹೀರೋ ರಜನಿಕಾಂತ್ (Rajanikanth), ರಮ್ಯಕೃಷ್ಣ, ಜಾಕಿ ಶ್ರಾಫ್ (Jacike shraff), ಯೋಗಿ ಬಾಬು (Yogi Babu), ಸುನಿಲ್ (Sunil), ವಿನಾಯಕನ್ ಹಾಗೂ ಕಾವಲಯ್ಯ (Kavalayya..) ಹಾಡಿನಲ್ಲಷ್ಟೇ ಕುಣಿದಿರುವ ತಮನ್ನಾ ಭಾಟಿಯಾ ಹೆಸರು ಮತ್ತು ಫೋಟೋಗಳಿವೆ. ತಂತ್ರಜ್ಞರ ಫೋಟೋಗಳೂ ಇವೆ. ಆದರೆ ಶಿವಣ್ಣ ಮಾತ್ರ ನಾಪತ್ತೆ. ಇದು ಬುಕ್ ಮೈ ಶೋ (Book My Show) ಎಡವಟ್ಟಾಗಿರಬಹುದು ಆದರೆ ಜೈಲರ್ ಟೀಂ ಕೂಡಾ ಈ ಬಗ್ಗೆ ಗಮನ ಹರಿಸಬೇಕಿತ್ತು ಎನ್ನುತ್ತಿದ್ದಾರೆ ಫ್ಯಾನ್ಸ್. ಮೊದಲೇ ಸಿನಿಮಾ ಟ್ರೇಲರಿನಲ್ಲಿ ಶಿವಣ್ಣ ಇಲ್ಲ ಎಂದು ಬೇಸತ್ತಿದ್ದ ಅಭಿಮಾನಿ ದೇವರುಗಳಿಗೆ, ಬುಕ್ ಮೈ ಶೋನಲ್ಲಿ (Book My Show) ಹೀಗಾಗುತ್ತಿರೋದು ಸಹಿಸಿಕೊಳ್ಳಲಾಗದ ನೋವು ತಂದಿಟ್ಟಿದೆ.
ಬುಕ್ ಮೈ ಶೋ (Book My Show) ಇಂತಹ ಭಾನಗಡಿ ಮಾಡಿಕೊಳ್ಳೋದು ಇದೇನೂ ಹೊಸದಲ್ಲ. ಕನ್ನಡಿಗರಿಗೆ, ಕನ್ನಡದವರಿಗೆ ಏನ್ ಬೇಕಾದ್ರೂ ಅವಮಾನ ಮಾಡಬಹುದು ಅನ್ನೋ ಮನಸ್ಥಿತಿಯಲ್ಲಿಯೇ ವರ್ತಿಸಿದ ಉದಾಹರಣೆ ಈ ಹಿಂದೆ ನಡೆದಿವೆ. ಏನ್ ಮಾಡೋದು.. ಬುಕ್ ಮೈ ಶೋದವರು ಏನ್ ಮಾಡಿದ್ರೂ ದಕ್ಕಿಸಿಕೊಳ್ಳುತ್ತೇವೆ ಅನ್ನೋ ಅಹಂಕಾರಕ್ಕೆ ಬಿದ್ದು ಬಿಟ್ಟಿದ್ದಾರೆ.



