ರಾಜ್ಯ ಬಿಜೆಪಿಯವರಿಗೆ ಪದೇ ಪದೇ ಕಾಂಗ್ರೆಸ್ಸಿನವರ ಕೈಗೆ ದೊಣ್ಣೆ ಕೊಟ್ಟು ಒಡೆಸಿಕೊಳ್ಳೋದು ಕಾಮನ್ ಆಗಿ ಬಿಟ್ಟಿದೆ. ವಿಶೇಷವಾಗಿ ಕಳೆದ ವಿಧಾನಸಭೆ ಚುನಾವಣೆ ಹೊತ್ತಿನಿಂದಲೂ ಹೀಗೆ ಪದೇ ಪದೇ ಏಟು ತಿನ್ನುತ್ತಲೇ ಇದೆ ಬಿಜೆಪಿ. ಈ ಬಾರಿಯೂ ಅಷ್ಟೆ.. ಹೊಸಕೋಟೆಯ ಅವಿಮುಕ್ತೇಶ್ವರ ದೇವಸ್ಥಾನಕ್ಕೆ ಮುಸ್ಲಿಂ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದ ಆದೇಶವನ್ನು ಕಾಂಗ್ರೆಸ್ ಸರ್ಕಾರದ್ದು ಎಂದು ಹೇಳೋಕೆ ಹೊರಟಿದ್ದ ಬಿಜೆಪಿ, ಕಾಂಗ್ರೆಸ್ಸಿನ ಕೈಗೆ ಬ್ರಹ್ಮಾಸ್ತ್ರವನ್ನೇ ಕೊಟ್ಟಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಾರಂಭದ ಮೇಲ್ವಿಚಾರಣೆಗೆ ಕಾಂಗ್ರೆಸ್ ‘ನವಾಜ್’ ಎಂಬವರನ್ನು ನೇಮಿಸಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. `ಹೊಸಕೋಟೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಕಾರ್ಯಕ್ರಮದ ಮೇಲ್ವಿಚಾರಣೆಗೆ ಕಾಂಗ್ರೆಸ್ ‘ನವಾಜ್’ ಅವರನ್ನು ನೇಮಿಸಿದೆ. ನಮ್ಮ ದೇವಸ್ಥಾನಗಳನ್ನು ಲೂಟಿ ಮಾಡಲು ಯತ್ನಿಸಿದ ನಂತರ ಹಿಂದೂ ದ್ವೇಷಿ ಸಿ.ಎಂ ಸಿದ್ದರಾಮಯ್ಯ ಈಗ ಹಿಂದೂಯೇತರರನ್ನು ನೇಮಿಸುವ ಮೂಲಕ ದೇವಾಲಯಗಳು ಮತ್ತು ಅವುಗಳ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿತ್ತು.
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಬಿಜೆಪಿ ಸರ್ಕಾರದ ಕಾಲದಲ್ಲಿಯೂ ಮುಸ್ಲಿಮ್ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಲಾಗಿತ್ತು ಎಂಬ ಸತ್ಯ ಸಂಗತಿಯನ್ನು ದಾಖಲೆ ಸಮೇತ ಮುಂದಿಟ್ಟ ಕಾಂಗ್ರೆಸ್, ಎಲ್ಲರನ್ನೂ ಬ್ರಹ್ಮರಥೋತ್ಸವ ಸಮಿತಿಗೆ ಸೇರಿಸುವ ಸಂಪ್ರದಾಯವೇ ಅಲ್ಲಿನ ವಿಶೇಷತೆ ಎಂದು ದಾಖಲೆ ಸಮೇತ ತೋರಿಸಿತ್ತು. ಆಗ ಮಾತು ಕಳೆದುಕೊಂಡ ಬಿಜೆಪಿ, ತಾನು ಮೊದಲು ಮಾಡಿದ್ದ ಟ್ವೀಟ್ʻನ್ನು ಡಿಲೀಟ್ ಮಾಡಿತ್ತು. ಅಷ್ಟೆಲ್ಲ ಆದ ಮೇಲೆ.. ಡಿಲೀಟ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ.. ಪದೇ ಪದೇ ನಮ್ಮ ಕೈಗೆ ಬಡಿಗೆ ಕೊಟ್ಟು.. ಯಾಕೆ ಹೊಡೆಸಿಕೊಳ್ತೀರಿ ಎಂದು ಪ್ರಶ್ನೆ ಮಾಡಿದೆ.


ಇಂತಹ ಅನಗತ್ಯ ವಿವಾದದ ಮಾತುಗಳನ್ನು ಬಿಟ್ಟು ನಾಡಿನ ಜನರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಿ ಎಂದು ಕಾಂಗ್ರೆಸ್ಸಿಗರು ಬಿಜೆಪಿಯವರಿಗೆ ಬುದ್ದಿವಾದ ಹೇಳಿದ್ದರೆ.. ರಾಜ್ಯ ಬಿಜೆಪಿಯವರು ಏನೂ ಹೇಳೋಕೆ ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದರು.
ಇನ್ನು ಬಿಜೆಪಿಯ ಕಾರ್ಯಕರ್ತರೊಬ್ಬರ ಮೇಲೆ ಕಾಂಗ್ರೆಸ್ʻನವರಿಂದ ಹಲ್ಲೆಯಾದ ಪ್ರಕರಣದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿರುವ ಆರ್.ಅಶೋಕ್ ಹೋರಾಟ ನಡೆಸುವ ಬದಲಿಗೆ.. ಸಭಾತ್ಯಾಗ ಮಾಡಿ ಸ್ವಂತ ಪಕ್ಷದವರನ್ನೇ ಮುಜುಗರಕ್ಕೀಡು ಮಾಡಿದ್ದರು.
ಇನ್ನು ಹಲವು ದೇವರು ಧರ್ಮಗಳ ವಿಚಾರದಲ್ಲಿ ಕಾಂಗ್ರೆಸ್ಸಿಗೆ ಹೊಡೆಯಲು ಹೋಗಿ.. ಆಮೇಲೆ ತಾವೇ ಪೆಟ್ಟು ತಿಂದು ಪದೇ ಪದೇ ಯಾಮಾರುತ್ತಿದೆ ಬಿಜೆಪಿ. ಮೇಲ್ನೋಟಕ್ಕೆ ನೋಡಿದರೆ.. ರಾಜ್ಯ ಬಿಜೆಪಿಯವರ ನಡುವೆ ಹೊಂದಾಣಿಕೆ ಹಾಗೂ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ.



