ಒಬ್ಬ ಹೊಸ ಹೀರೋ ಚಿತ್ರರಂಗಕ್ಕೆ ಎಂಟ್ರಿ ಕೊಡುವಾಗ ಎಲ್ಲರೂ ಶುಭ ಹಾರೈಸುತ್ತಾರೆ. ಅದರಲ್ಲಿಯೂ ದೊಡ್ಮನೆಯ ಕುಡಿ ಬರುವಾಗ ಹಾರೈಕೆಗಳ ಸುರಿಮಳೆಯೇ ಸಹಜ. ಅಲ್ಲದೆ ಈಗ ಅಪ್ಪು ಇಲ್ಲ. ಭಾವುಕರಾಗುವುದೂ ಸಹಜ. ಆದರೆ.. ದೊಡ್ಮನೆಯ ಹುಡುಗರಿಗೆ ಹೊಣೆಗಾರಿಕೆ ಹೆಚ್ಚು. ಬೆನ್ನ ಹಿಂದಿರುವುದು ಡಾ.ರಾಜ್ ಎಂಬ ದೊಡ್ಡ ಹೆಸರು. ಪಾರ್ವತಮ್ಮ, ಶಿವಣ್ಣ, ಪುನೀತ್ ಎಲ್ಲರೂ ಆ ಭಾರವನ್ನು ಹೊಸಬರಿಗೆ ಇನ್ನಷ್ಟು ಹೆಚ್ಚಿಸಿದ್ಧಾರೆ. ಹೀಗಿರುವಾಗಲೇ.. ನಟ ರಾಘವೇಂದ್ರ ರಾಜಕುಮಾರ್ ತಮ್ಮ ಮಗನಿಗೆ ತಗ್ಗಿ ಬಗ್ಗಿ ಇರಬೇಕು ಎಂದು ಬುದ್ದಿ ಹೇಳಿದ್ಧಾರೆ. ಅದೂ ಕೂಡ ಪುನೀತ್ ಅವರಂತೆಯೇ ತಗ್ಗಿ ಬಗ್ಗಿ ಇರಬೇಕು ಎಂದು ಕಿವಿ ಮಾತು ಹೇಳಿದ್ಧಾರೆ.
ಈಗ ಯುವ ಕಾರ್ಯಕ್ರಮಕ್ಕೆ ಬರೋಣ. ಡಾ.ರಾಜ್ ಕುಟುಂಬದ ಮತ್ತೊಂದು ಕುಡಿಯ ಚಿತ್ರರಂಗ ಪ್ರವೇಶಕ್ಕೆ ಕಾಲ ಕೂಡಿ ಬಂದಿದೆ. ಪುನೀತ್ ಅವರ ಅಗಲಿಕೆ ನಂತರ ಆಗುತ್ತಿರುವ ಯುವ ರಾಜ್ ಕುಮಾರ್ ಸಿನಿಮಾ ಎಂಟ್ರಿ, ಅಭಿಮಾನಿಗಳನ್ನು ಭಾವುಕರನ್ನಾಗಿಸುತ್ತಿದೆ. ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ಕೂಡಾ ಕಣ್ಣೀರು ಹಾಕಿದ್ಧಾರೆ.
ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ… ಹಾಡು ಹಾಡುತ್ತಿದ್ದ ವೇಳೆ ವೇದಿಕೆ ಎದುರಿಗೆ ಕೂತಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಕಣ್ಣೀರು ಹಾಕಿದ್ಧಾರೆ. ಗಾಯಕ ವಿಜಯಪ್ರಕಾಶ್ ಅವರ ದನಿಯಲ್ಲಿ ಮೂಡಿ ಬಂದ ಹಾಡಿಗೆ ಅಭಿಮಾನಿಗಳು ಜಯಘೋಷ ಹಾಕಿದರೆ, ವಿಜಯ್ ಪ್ರಕಾಶ್ ಕೂಡಾ ಭಾವುಕರಾಗಿದ್ದರು. ಎದುರಲ್ಲಿಯೇ ಕುಳಿತಿದ್ದ ಅಶ್ವಿನಿ ಪುನೀತ್ ಕಣ್ಣೀರಾದರು. ನಂತರಮಾತನಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು, ‘ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
ಇದೇ ವೇದಿಕೆಯಲ್ಲಿ ಮಾತನಾಡಿದ ಯುವ . ಡಾ ರಾಜ್ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ನಟನಾ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂಬುದು ಸುಳ್ಳು. ನಾನು ನಟನಾಗುತ್ತೇನೆ ಎಂದು ಚಿಕ್ಕವನಿದ್ದಾಗಲೇ ಮನೆಯಲ್ಲಿ ನಿರ್ಧರಿಸಿಬಿಟ್ಟಿದ್ದರು. ಆದರೆ ನಾನು ಇಷ್ಟು ದಿವಸ ಅವಕಾಶಕ್ಕಾಗಿ ಕಾದಿದ್ದೆ. ಕೊನೆಗೆ ಸಮರ್ಥವಾಗಿ ನಿಮಗೆ ಇಷ್ಟವಾಗುವ ರೀತಿಯಲ್ಲೂ ಸಿದ್ಧವಾಗಿ ಸಿನಿಮಾ ಮಾಡಿದ್ದೇನೆ. ಈ ಸಿನಿಮಾ ಆಗಿದ್ದಕ್ಕೆ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕಾರಣ. ಅಪ್ಪು ನನ್ನನ್ನು ಇಲ್ಲಿವರೆಗೆ ತಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಮುಂದೆ ನನ್ನನ್ನು ನೀವೇ ನೋಡಿಕೊಳ್ಳಬೇಕು. ನೀವು ಹೇಗೆ ಮುನ್ನಡೆಸುತ್ತಿರೋ ಹಾಗೇ ನಾನು ಸಾಗುತ್ತೇನೆ ಎಂದರು.
ನಟ ರಾಘವೇಂದ್ರ ರಾಜಕುಮಾರ್ ಅವರಂತೂ ಅವನು ನನ್ನ ಮಗನಲ್ಲ. ಅಪ್ಪು ಮಗ. ನನ್ನ ಮಗನ ವಿಚಾರದಲ್ಲಿಒಬ್ಬ ತಂದೆ ಮಾಡುವ ಕೆಲಸವನ್ನು ಅಪ್ಪು ಮಾಡಿ ಹೋಗಿದ್ದಾನೆ. ‘ನೀವು ಸುಮ್ಮನಿರಿ, ನಾವು ನೋಡಿಕೊಳ್ಳುತ್ತೇವೆ’ ಅಂತ ಅಪ್ಪು ಅಂದಿದ್ದ. ಅವನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಆತನಿಂದ ಅಪ್ಪು ಜಾಗ ತೆಗೆದುಕೊಳ್ಳಲು ಆಗಲ್ಲ. ಅದನ್ನು ಪಡೆದುಕೊಳ್ಳಬೇಕು. ನನ್ನ ತಮ್ಮ ಅಪ್ಪುನಂತೆ ತಗ್ಗಿ ಬಗ್ಗಿ ನಡೆಯುವ ಗುಣವನ್ನು ನನ್ನ ಮಗ ಬೆಳೆಸಿಕೊಂಡು, ಅಭಿಮಾನಿಗಳನ್ನು ದೇವರಾಗಿ ಕಾಣಬೇಕು ಎಂದು ಹೇಳಿದರು.
ಯುವ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಗಾಯಕ ವಿಜಯಪ್ರಕಾಶ್, ನಟ ವಿನಯ್ ರಾಜಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರು, ಅಚ್ಯುತ್ ಕುಮಾರ್, ಸುಧಾರಾಣಿ, ಹಿತಾ ಚಂದ್ರಶೇಖರ್, ನಿಶ್ವಿಕಾ ನಾಯ್ಡು, ಗಿರಿರಾಜ್ ನವೀನ್ ಸಜ್ಜು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶುಭ ಹಾರೈಸುವುದು ಬೇರೆ. ಆದರೆ.. ತಮ್ಮ ಮಗನನ್ನು ʻತಮ್ಮನ ಹಾಗೆಯೇ ಇರು. ಹಾಗೆಯೇ ಸರಳವಾಗಿರು. ಹಿರಿಯರನ್ನು ಗೌರವಿಸು. ತಲೆ ಬಾಗಿರಲಿʼ ಎಂದು ಹೇಳಿರುವ ರಾಘವೇಂದ್ರ ರಾಜಕುಮಾರ್ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ. ದೊಡ್ಮನೆ ಅಂದ್ರೆ ಇದು ಎನ್ನುತ್ತಿದ್ದಾರೆ ದೊಡ್ಮನೆ ಫ್ಯಾನ್ಸ್.



