ಡಿಕೆ ಶಿವಕುಮಾರ್, ಡಿಕೆ ಸುರೇಶ್ ತಂಗಿ ಹೆಸರಲ್ಲಿ ಐಶ್ವರ್ಯಾ ಗೌಡ ಮಾಡಿದ್ದಾರೆ ಎನ್ನಲಾದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ನಾನು ಡಿಕೆ ಬ್ರದರ್ಸ್ ತಂಗಿ.. ಗೊತ್ತಲ್ವಾ.. ಹುಷಾರ್ ಎಂದು ಹೆದರಿಸಿದ್ದಾರಂತೆ ಐಶ್ವರ್ಯಾ ಗೌಡ. ಆರ್.ಆರ್. ನಗರದ ಡಾ.ಮಂಜುಳಾ ಎ ಪಾಟೀಲ್ ಎಂಬುವವರು ದೂರು ಕೊಟ್ಟಿದ್ದಾರೆ.
ಮೊದಲಿಗೆ ಡಿಕೆ ಬ್ರದರ್ಸ್ ತಂಗಿ ಎಂದು ಪರಿಚಯಿಸಿಕೊಂಡಿದ್ದರಂತೆ ಐಶ್ವರ್ಯಾ. ನಂತರ ಒಮ್ಮೆ ತುರ್ತಾಗಿ ಹಣ ಬೇಕು ಎಂದು ಪಡೆದು ವಾಪಸ್ ಕೊಟ್ಟಿದ್ದರಂತೆ. ವಂಚನೆ ಆಗಿದೆ ಎನ್ನಲಾಗಿರುವ ಕೋಟಿಗಳಿಗೆ ಹೋಲಿಸಿದರೆ, ಅದು ಲಕ್ಷದ ಲೆಕ್ಕದಲ್ಲಿದೆ. ಲಕ್ಷ ಕೊಟ್ಟಾಗ ಆರಾಮ್ ಆಗಿ ವಾಪಸ್ ಕೊಟ್ಟಿದ್ದ ಐಶ್ವರ್ಯಾ, ನಂಬಿಕೆ ಹುಟ್ಟಿಸಿದ್ದರಂತೆ. ನಂತರ ಮಾಡಿದ್ದು ಮೋಸ ಎನ್ನುತ್ತಾರೆ ಡಾ.ಮಂಜುಳಾ.
ಚಿನ್ನದಲ್ಲಿ ಹೂಡಿಕೆ ಮಾಡಿದರೆ, ಒಳ್ಳೆಯ ಲಾಭ ಎಂದು ಆಸೆ ಹುಟ್ಟಿಸಿದ್ದ ಐಶ್ವರ್ಯಾ ಗೌಡರ ಮಾತು ನಂಬಿ ಕೋಟಿ ಕೋಟಿ ಕಳೆದುಕೊಂಡರಂತೆ ಡಾ.ಮಂಜುಳಾ. 2.52 ಕೋಟಿ ಹಣ, 2 ಕೆಜಿ 350 ಗ್ರಾಂ ಬಂಗಾರ ಪಡೆದು ವಾಪಸ್ ಕೊಟ್ಟಿಲ್ಲ ಹಣ, ಚಿನ್ನ ವಾಪಸ್ ಕೇಳಿದಾಗ ನಾನು ಗೊತ್ತಲ್ಲ, ಡಿಕೆ ಬ್ರದರ್ಸ್ ತಂಗಿ ಎಂದು ಬೆದರಿಸಿದ್ದರಂತೆ ಐಶ್ವರ್ಯಾ ಗೌಡ.
ಜ.1ರಂದು ಸಂಜೆ ಸುಮಾರು 7 ಗಂಟೆಗೆ ಐಶ್ವರ್ಯ ಗೌಡರ ಕಾರು ಚಾಲಕ ಧನಂಜಯ, ಮಂಜುಳಾ ಅವರ ಮನೆಗೆ ಬಂದು, ಐಶ್ವರ್ಯ ಗೌಡ ಮಾತನಾಡಲಿದ್ದಾರೆ ಎಂದು ಮೊಬೈಲ್ ನೀಡಿದ್ದಾರೆ. ಈ ವೇಳೆ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಹರೀಶ್ ಇಬ್ಬರೂ ಮಾತನಾಡಿದ್ದಾರೆ. ‘ನಿನಗೆ ಕೊಡಬೇಕಾಗಿರುವ ಹಣ ಮತ್ತು ಚಿನ್ನಾಭರಣದ ವಿಚಾರವಾಗಿ ನನ್ನ ವಿರುದ್ಧ ಯಾವುದೇ ಪೊಲೀಸ್ ಠಾಣೆಗೆ ದೂರು ನೀಡಬಾರದು. ಯಾವುದೇ ಸಾಕ್ಷಿ ಹೇಳಿಕೆ ನೀಡಬಾರದು. ಹಾಗೆ ಮಾಡಿದರೆ, ನಿಮ್ಮ ಯಾವುದೇ ಹಣ ಮತ್ತು ಚಿನ್ನಾಭರಣ ಕೊಡುವುದಿಲ್ಲ. ಆ ಮೇಲೆ ನಾನು ಏನು ಮಾಡುತ್ತೇನೋ ನನಗೇ ಗೊತ್ತಿಲ್ಲ. ನಾನು ಯಾರೆಂದು ನಿನಗೆ ಗೊತ್ತಿದೆ. ನಾನು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ತಂಗಿ. ಗೊತ್ತಿದೆಯಲ್ಲಾ’ ಎಂದು ಬೆದರಿಕೆ ಹಾಕಿದ್ದಾರೆ.ಬಳಿಕ ಹಣ ಹಾಗೂ ಚಿನ್ನಾಭರಣ ಕೇಳಲು ಐಶ್ವರ್ಯ ಗೌಡ ಮನೆ ಬಳಿ ಮಂಜುಳಾ ಹೋದಾಗ ಕಾರು ಚಾಲಕರಾದ ಧನಂಜಯ ಮತ್ತು ಅಶ್ವತ್ಥ್‌ನಿಂದ ಬೆದರಿಕೆ ಹಾಗೂ ಧಮ್ಕಿ ಹಾಕಿಸಿದ್ದಾರೆ. ತನಗೆ ವಂಚಿಸಿ, ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಐಶ್ವರ್ಯ ಗೌಡ ದಂಪತಿ ಹಾಗೂ ಕಾರು ಚಾಲಕರಾದ ಧನಂಜಯ ಮತ್ತು ಅಶ್ವತ್ಥ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವೈದ್ಯೆ ಮಂಜುಳಾ ದೂರಿನಲ್ಲಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಐಶ್ವರ್ಯ ಗೌಡ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಎರಡು ಪ್ರತ್ಯೇಕ ವಂಚನೆ ಪ್ರಕರಣಗಳಲ್ಲಿ ಜಾಮೀನು ಪಡೆದಿರುವ ಐಶ್ವರ್ಯ ಗೌಡ ದಂಪತಿ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ. ಈಗ ಕೊಟ್ಟಿರುವ ಹೊಸ ದೂರಿನ ಮೇಲೆ ಐಶ್ವರ್ಯ ಗೌಡ, ಆಕೆಯ ಪತಿ ಕೆ.ಎನ್.ಹರೀಶ್, ಕಾರು ಚಾಲಕರಾದ ಅಶ್ವತ್ಥ್ ಮತ್ತು ಧನಂಜಯ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಬೆದರಿಕೆ ಸೇರಿದಂತೆ ವಿವಿಧ ಆರೋಪಗಳ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



