ಒಂದು ಸಮರ್ಪಕ ಸಿದ್ಧತೆಯೇ ಇಲ್ಲದೆ ಹೊಸ ಹೊಸ ಯೋಜನೆ ತಂದರೆ ಏನಾಗುತ್ತದೆ ಎನ್ನವುದುಕ್ಕೆ ಇ-ಖಾತಾ ಕಡ್ಡಾಯ ಮಾಡಿರುವ ಸರ್ಕಾರದ ಕ್ರಮವೇ ಸಾಕ್ಷಿ. ರಾಜ್ಯಾದ್ಯಂತ ಸ್ಥಿರಾಸ್ತಿ ದಸ್ತಾವೇಜು ನೋಂದಣಿ ಅಥವಾ ಆಸ್ತಿ ನೋಂದಣಿಗೆ ಸರ್ಕಾರ ಇ-ಖಾತಾ ಕಡ್ಡಾಯಗೊಳಿಸಿದ್ದೇನೋ ಹೌದು, ಆದರೆ ಸಮರ್ಪಕ ಸಿದ್ಧತೆಯಿಲ್ಲದೆ ಜಾರಿಗೆ ತಂದ ನೀತಿಯಿಂದಾಗಿ ರಿಜಿಸ್ಟ್ರೇಷನ್ ಆಗುವುದಕ್ಕೇ ಅಡ್ಡಿಯಾಗಿದೆ. ಇ-ಖಾತಾ ದೊರೆಯದೆ ಆಸ್ತಿ ಮಾಲೀಕರು ಪರದಾಡುವಂತಾಗಿದೆ. ಅತ್ತ ಅಡಮಾನ ಇಟ್ಟು ಸಂಕಷ್ಟಕ್ಕೆ ಸಾಲಸೋಲ ಮಾಡಿಸಲೂ ಆಗುತ್ತಿಲ್ಲ. ಬ್ಯಾಂಕ್ ಲೋನ್ ತೆಗೆದುಕೊಳ್ಳಲೂ ಆಗುತ್ತಿಲ್ಲ.
ಏನಿದು ಇ ಖಾತಾ ನಿಯಮ..?
ರಾಜ್ಯಾದ್ಯಂತ ಬಿಬಿಎಂಪಿ, ಬಿಡಿಎ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಹಾಗೆಂದು ಈ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ಇಲ್ಲ ಎಂದರ್ಥವಲ್ಲ. ಗ್ರಾಮೀಣ ಭಾಗದಲ್ಲಿ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾ ಕಡ್ಡಾಯ. ಇ-ಖಾತಾ ಪಡೆಯಲು ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮ ಪಾಲನೆ ಮಾಡಬೇಕು. ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮದ ಪ್ರಕಾರ ಆಧಾರ್ ಇ-ಕೆವೈಸಿ, ಆಸ್ತಿಯ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ಅಧಿಕಾರಿಗಳು ಪರಿಶೀಲಿಸಿ ಇ-ಖಾತಾ ವಿತರಿಸುತ್ತಾರೆ.
ಸಮಸ್ಯೆ ಸೃಷ್ಟಿಯಾಗಿದ್ದು ಏಕೆ..?
ನೋಂದಾಯಿತ ಶುದ್ಧ ಕ್ರಯ ಪತ್ರ, ಇ.ಸಿ, ಅನುಮೋದಿತ ಖಾತಾ ಸೇರಿದಂತೆ ಸೂಕ್ತ ದಾಖಲೆಗಳ ಕೊರತೆಗಳಿವೆ. ಇದರಿಂದಾಗಿ ಇ-ಖಾತಾ ದೊರೆಯುತ್ತಿಲ್ಲ. ವಿಚಿತ್ರ ಎಂದರೆ ರಾಜ್ಯಾದ್ಯಂತ ಜಾರಿಗೆ ತಂದಿರುವ ಇ-ಖಾತಾ ಸರ್ವರ್, ಸರ್ಕಾರಿ ಕಚೇರಿಗಳಲ್ಲಿ ಕನೆಕ್ಟ್ ಆಗುತ್ತಿಲ್ಲ. ಅಧಿಕಾರಿಗಳಿಗೆ ಸಿಗುತ್ತಿಲ್ಲ. ಅಂದರೆ ಯಾರು ಸಮಸ್ಯೆ ಬಗೆಹರಿಸಬೇಕಿತ್ತೋ.. ಅವರಿಗೇ ಇ-ಖಾತ್ ಸರ್ವರ್ ಕನೆಕ್ಟಿವಿಟಿ ಇಲ್ಲ. ಮತ್ತೊಂದೆಡೆ ಆನ್‌ಲೈನ್ ಸರ್ವರ್ ಸಮಸ್ಯೆ, ಕರಡು ದೋಷಗಳು.. ಎಲ್ಲವೂ ಸೇರಿವೆ. ಗ್ರಾಮೀಣ ಭಾಗದಲ್ಲಿ ಶೇ.90ರಷ್ಟು ಮನೆ-ನಿವೇಶನಕ್ಕೆ ಕಂದಾಯ ನಿಯಮಗಳಡಿ ಇ-ಖಾತಾ ದೊರೆಯುವುದಿಲ್ಲ. ಇನ್ನು ಸರ್ವರ್ ಸಮಸ್ಯೆ ಹೇಗಿದೆ ಎಂದರೆ, ಎಲ್ಲ ದಾಖಲೆ, ನಂಬರುಗಳನ್ನೂ ನಮೂದಿಸಿದರೂ, ದಾಖಲೆ ಲಭ್ಯವಾಗುವುದಿಲ್ಲ. ತಾಂತ್ರಿಕ ದೋಷಗಳಿವೆ, ಆದರೆ ಅವುಗಳ ಬಗ್ಗೆ ವಿವರಣೆ ಕೊಡುವ ಶಕ್ತಿ, ಪಾಂಡಿತ್ಯ ಅಧಿಕಾರಿಗಳಿಗೆ ಇಲ್ಲ.
ಸಮಸ್ಯೆ ಏನು..?
ಇ-ಖಾತಾ ಇಲ್ಲದವರಲ್ಲಿ ತಾವು ಇರುವ ಜಾಗ, ಸೈಟಿನ ಮಾಲೀಕರು ತಾವೇ ಹೌದೋ ಅಲ್ಲವೋ ಎಂಬ ಅನುಮಾನ ಸೃಷ್ಟಿಯಾಗಿದೆ. ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ. ಆದರೆ ಬೆಂಗಳೂರಿನಲ್ಲಿ ಬಿ-ಖಾತಾ, ಕಂದಾಯ ನಿವೇಶನ ಸೇರಿ ಬಹುತೇಕ ಆಸ್ತಿಗಳಿಗೆ ಇ-ಖಾತಾ ಇಲ್ಲ. ಇಂತಹ ಆಸ್ತಿಗಳಿಗೆ ಹಲವುಸಹಕಾರಬ್ಯಾಂಕ್ ಹಾಗೂ ಸೊಸೈಟಿಗಳು ಸಾಲ ಮಂಜೂರು ಮಾಡಿವೆ. ಅಡಮಾನ ನೋಂದಣಿ (ಡಿಟಿಡಿ-ಡಿಪಾಸಿಟ್ ಆಫ್ ಟೈಟಲ್ಸ್) ಗೆ ಇ-ಖಾತಾ ಕಡ್ಡಾಯದಿಂದ ಅವಕಾಶ ದೊರೆಯುತ್ತಿಲ್ಲ. ಇದರಿ೦ದಾಗಿ ಮಂಜೂರಾದ ಸಾಲ ಬಿಡುಗಡೆ ಮಾಡಿಸಿಕೊಳ್ಳಲೂ ಗ್ರಾಹಕರು ಪರದಾಡುವಂತಾಗಿದೆ.
ಏನೇನೆಲ್ಲ ತೊಂದರೆಯಾಗಿದೆ ಗೊತ್ತೇ..?
ಮೊದಲೆಲ್ಲ ಸ್ಥಿರಾಸ್ತಿ ಖರೀದಿ, ದಖ್ ಖರೀದಿ, ಬ್ಯಾಂಕ್ ಸಾಲ, ಬೋಜಾ ಏರಿಸುವುದು, ಬೋಜಾ ಕಡಿಮೆಗೊಳಿಸು ವುದು, ಹಕ್ಕುಬಿಟ್ಟ ಪತ್ರ, ಭಕ್ಷೀಸ್ ಪತ್ರ ಸೇರಿ ಹಲವು ವಹಿವಾಟುಗಳು ಪಹಣಿ ಹಾಗೂ ಪಾಲಿಕೆಯಿಂದ ನೀಡಲಾಗುತ್ತಿದ್ದ ನಮೂನೆ-2 (ಪಾಲಿಕೆ ಪಹಣಿ)ಯಿಂದ ನಡೆಯುತ್ತಿದ್ದವು. ಈಗ ಆ ಎಲ್ಲ ವ್ಯವಹಾರಗಳಿಗೆ ಬ್ರೇಕ್ ಬಿದ್ದಿದೆ. ಇ-ಖಾತಾ ಕಡ್ಡಾಯದಿಂದಾಗಿ ಸ್ಥಗಿತವಾಗಿವೆ. ಇ-ಖಾತಾ ಆದ ನಂತರವಷ್ಟೇ ಉಪ ನೋಂದಣಾಧಿಕಾರಿಗಳ ಕಚೇರಿಯ ಕಾವೇರಿ 2.0 ತಂತ್ರಾಂಶದಲ್ಲಿ ಆಸ್ತಿ ವಿವರಗಳು ಗೋಚರವಾಗುತ್ತಿವೆ. ಅಲ್ಲಿವರೆಗೂ ಈ ಎಲ್ಲ ಲೇವಾದೇವಿಗಳು ನಿಂತುಬಿಟ್ಟಿವೆ. ಅಂದರೆ ಸಾಲ ಬೇಕು ಎನ್ನುವವರಿಗೆ ಸಾಲ ಕೊಡುವವರು ರೆಡಿ ಇದ್ದರೂ ಸಾಲ ಸಿಗುತ್ತಿಲ್ಲ. ಒಂದು ರೀತಿಯಲ್ಲಿ ಭೂಮಿ ಆಧರಿಸಿದ ಆರ್ಥಿಕ ವ್ಯವಹಾರ ಎಲ್ಲವೂ ಸ್ಥಗಿತಗೊಂಡಿದೆ.



