ನನಗೆ ಬಾದಾಮಿ ಬೇಡ. ಬೇರೆ ಕ್ಷೇತ್ರದಲ್ಲಿ ನಿಲ್ಲುತ್ತೇನೆ. ಅದು ಬೆಂಗಳೂರಿಗೆ ಹತ್ತಿರದಲ್ಲಿರಬೇಕು ಎಂದು ಹೇಳುತ್ತಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಾದಾಮಿಯಲ್ಲಂತೂ ನಿಲ್ಲೋದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸಾರಿ ಸಾರಿ ಹೇಳಿದ್ದಾರೆ. ಕಳೆದ ಬಾರಿಯ ಎಲೆಕ್ಷನ್ನಿನಲ್ಲಿ ಸಿದ್ದರಾಮಯ್ಯ ಸೋತು ಹೋಗಿದ್ದರೆ ಇಷ್ಟು ಹೊತ್ತಿಗೆ ಸಿದ್ದು ಅವರ ರಾಜಕೀಯ ಜೀವನವೂ ಎಂಡ್ ಆಗಿರುತ್ತಿತ್ತು. ಸಿದ್ದು ಅವರನ್ನು ಪೊಲಿಟಿಕಲ್ ಆಗಿ ಜೀವಂತವಾಗಿಟ್ಟಿದ್ದು ಬಾದಾಮಿಯಲ್ಲಿ ಸಿಕ್ಕ ಗೆಲುವು. ಬಾದಾಮಿಯಲ್ಲಿ ಗೆಲ್ಲದಿದ್ದರೆ ಇಷ್ಟು ಹೊತ್ತಿಗೆ ಸಿದ್ದರಾಮಯ್ಯ ಅಪ್ರಸ್ತುತರಾಗುತ್ತಿದ್ದರೇನೋ.. ಆದರೆ ಈ ಬಾರಿ ಸಿದ್ದರಾಮಯ್ಯ ಬನಶಂಕರಿ ತಾಯಿಯ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ ಎನ್ನುವುದಂತೂ ಸತ್ಯ.

ಸುಮಾರು 3 ವರ್ಷಗಳಿಂದಲೂ ಈ ಬಗ್ಗೆ ಸಿಗ್ನಲ್ ಕೊಡುತ್ತಿರುವ ಸಿದ್ದರಾಮಯ್ಯ ಕಳೆದ ಒಂದು-ಒಂದೂವರೆ ವರ್ಷದಿಂದ ಸ್ಪಷ್ಟವಾಗಿ ಹೇಳಿ ಹೊಸ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಕುರುಬರು, ಮುಸ್ಲಿಮರು ನಿರ್ಣಾಯಕರಾಗಿರುವ ಕೋಲಾರದಲ್ಲಿ ನಿಲ್ಲುವ ಬಗ್ಗೆ ದೊಡ್ಡ ಡ್ರಾಮಾ ನಡೆದು ಮುಗಿದಿದೆ. ಕೊಪ್ಪಳ, ಕುಷ್ಟಗಿ.. ಹೀಗೆ ಸುಮಾರು ಏಳೆಂಟು ಕ್ಷೇತ್ರಗಳ ಪರಿಶೀಲನೆಯಾಗಿದೆ. ಚಾಮುಂಡೇಶ್ವರಿಯಲ್ಲಿ ಇನ್ನೆಂದೂ ನಿಲ್ಲಲ್ಲ ಎಂದು ಘೋಷಿಸಿ ಆಗಿದೆ. ಮಗನಿಗೆ ಬಿಟ್ಟು ಕೊಟ್ಟ ವರುಣಾದಿಂದಲೇ ನಿಂತ್ರೆಗೆ ಹೇಗೆ..?ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಬೆಂಬಲಿಗ ಪರಮಾಪ್ತ ಜಮೀರ್ ಅಹ್ಮದ್ ಕೊಟ್ಟಿರುವ ಹೇಳಿಕೆ ಇದು.
ಸಿದ್ದರಾಮಯ್ಯ ಅವರನ್ನು ಬಿಟ್ಟು ಕೊಡೋಕೆ ಬಾದಾಮಿ ಜನ ತಯಾರಿಲ್ಲ. ಶಾಸಕರಾದವರು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿ ಕೊಡಬೇಕು. ಆದರೆ ಸಿದ್ದರಾಮಯ್ಯ ಅವರಿಗೆ ಅದು ಆಗುತ್ತಿಲ್ಲ ಎಂಬ ಕಾರಣಕ್ಕೆ ಬಾದಾಮಿ ಬಿಡುತ್ತಿದ್ದಾರೆ. ಆದರೆ ಬಾದಾಮಿಯಲ್ಲಿ ಇಷ್ಟು ವರ್ಷ ಆಗದಷ್ಟು ಅಭಿವೃದ್ಧಿ, 60 ವರ್ಷಗಳಲ್ಲಿ ಆಗದಷ್ಟು ಕೆಲಸ ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಎಂಎಲ್‍ಎ ಆದ ಮೇಲೆ ಆಗಿದೆ. ಹೀಗಾಗಿ ಸಿದ್ದರಾಮಯ್ಯಗೆ ಚಂದಾ ಸಂಗ್ರಹಿಸಿ ಅದರಿಂದ ಹೆಲಿಕಾಪ್ಟರ್ ಕೊಡುಗೆ ನೀಡಲು ಮುಂದಾಗಿದ್ದಾರೆ ಎನ್ನುವುದು ಜಮೀರ್ ಅಹ್ಮದ್ ಹೇಳಿಕೆಯ ಸಾರ.

25 ಕೋಟಿಯಾದರೂ ಸರಿ, ಹೆಲಿಕಾಪ್ಟರ್ ಒದಗಿಸಿ ಕೊಡುತ್ತೇವೆ. ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಲಿ. ಸಿದ್ದರಾಮಯ್ಯ ಹೆಲಿಕಾಪ್ಟರ್‍ನಲ್ಲೇ ಓಡಾಡಲಿ ಎಂದು ಕ್ಷೇತ್ರದ ಜನ ಹೇಳುತ್ತಿದ್ದಾರೆ ಎಂದು ಹೇಳಿರೋದು ಜಮೀರ್ ಅಹ್ಮದ್. ಸಿದ್ದರಾಮಯ್ಯನವರು ನಿಲ್ಲೋದಾದ್ರೆ ನಾನೂ ನನ್ನ ಕ್ಷೇತ್ರ ಬಿಟ್ಟುಕೊಡೋಕೆ ಸಿದ್ಧ ಎಂದಿರುವ ಜಮೀರ್, 224 ಕ್ಷೇತ್ರಗಳಲ್ಲೂ ಸಿದ್ದುಗೆ ಡಿಮ್ಯಾಂಡ್ ಇದೆ ಎಂದಿದ್ದಾರೆ ಜಮೀರ್.
ಆದರೆ.. ಜಮೀರ್ ಅಹ್ಮದ್ ಖಾನ್‍ರ ಹೇಳಿಕೆ ಸ್ವತಃ ಪಕ್ಷದ ನಾಯಕರಿಗೇ ಪಥ್ಯವಾಗಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನುವ ಭರದಲ್ಲಿ ಅದಕ್ಕೂ ಮುನ್ನ ಇದ್ದ ಶಾಸಕರನ್ನು ಕೆಲಸಕ್ಕೆ ಬಾರದವರು ಎಂಬಂತೆ ಜಮೀರ್ ಬಿಂಬಿಸಿದ್ದಾರೆ ಎನ್ನುವುದು ಬಾದಾಮಿಯ ಕಾಂಗ್ರೆಸ್ ನಾಯಕರ ಆಕ್ರೋಶ. ಅಲ್ಲದೆ ಸಿದ್ದರಾಮಯ್ಯ ಸರ್ಕಾರದಲ್ಲೂ ಕಾಂಗ್ರೆಸ್ ಬಾದಾಮಿಯಲ್ಲಿ ಕೆಲಸ ಮಾಡಿಲ್ಲ ಎಂಬ ಸಂದೇಶ ಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಗೆ ಸಿದ್ದು ಮತ್ತು ಜಮೀರ್ ಬೆಂಬಲಿಗರು ಉತ್ತರ ಕೊಟ್ಟಿಲ್ಲ.



