ಸತೀಶ್ ಜಾರಕಿಹೊಳಿ. ಲೋಕೋಪಯೋಗಿ ಸಚಿವ. ತುಂಬಾ ಓದಿಕೊಂಡಿದ್ದಾರೆ. ಮೌಢ್ಯ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇಂತಹ ಸತೀಶ್ ಜಾರಕಿಹೊಳಿ ಒಂದು ಮೌಢ್ಯದ ಹೇಳಿಕೆ ಕೊಟ್ಟಿದ್ದಾರೆ. ಗೃಹಜ್ಯೋತಿ ಯೋಜನೆ ನೋಂದಣಿ ಕೆಲಸ ನಡೆಯುತ್ತಿದ್ದು, ಹ್ಯಾಂಗ್ ಆಗುತ್ತಿದೆ. ಚಕ್ರ ಸುತ್ತುತ್ತಲೇ ಇರುತ್ತದೆ. ಬ್ರೌಸಿಂಗ್ ಆಗುವುದಿಲ್ಲ. ಎರರ್ ಬರುತ್ತದೆ. ಅದೃಷ್ಟವೂ ನೆಟ್ಟಗಿದ್ದರೆ ಮಾತ್ರ ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಬಹುದು. ಈ ಪರಿಸ್ಥಿತಿ ಇದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಹೇಳಿಕೆ ಕೊಟ್ಟಿದ್ದಾರೆ ಜಾರಕಿಹೊಳಿ.
ಸಚಿವ ಸತೀಶ್ ಜಾರಕಿಹೊಳಿ ಪ್ರಕಾರ ಗೃಹಜ್ಯೋತಿ ವೆಬ್`ಸೈಟ್`ನ್ನು ಹ್ಯಾಕ್ ಮಾಡಲಾಗಿದೆ. ಇದರಿಂದಾಗಿ ನೋಂದಣಿ ಕೆಲಸ ಚುರುಕಾಗಿ ನಡೆಯುತ್ತಿಲ್ಲ. ಯೋಜನೆಯ ಆಪ್, ವೆಬ್`ಸೈಟ್, ಪೋರ್ಟಲ್`ನ್ನು ಕೇಂದ್ರದವರು ಹ್ಯಾಕ್ ಮಾಡಿದ್ದಾರೆ. ಹೀಗೆ ಹೇಳಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ.
ಈಗಾಗಲೇ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರ ಮೋಸ ಮಾಡಿದೆ. ನಮಗೆ ಅಕ್ಕಿ ಕೊಡುತ್ತಿಲ್ಲ ಎಂದು ವಾದ ಮಾಡುತ್ತಿದೆ ರಾಜ್ಯ ಸರ್ಕಾರ. ಈ ಮಧ್ಯೆ ಗೃಹಜ್ಯೋತಿ ವೆಬ್`ಸೈಟ್ ಹ್ಯಾಕ್ ಮಾಡಿದ್ದಾರೆ ಎನ್ನುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳೋಕೆ ಕಾಂಗ್ರೆಸ್ ಯತ್ನ ಮಾಡುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ. ನಿಮ್ಮ ಬಳಿಯೇ ಸರ್ಕಾರ ಇದೆ. ಸೈಬರ್ ಕ್ರೈಮಿನವರಿಗೆ ದೂರು ಕೊಡಿ. ಇಂತಹ ಬೇಜವಾಬ್ದಾರಿ ಹೇಳಿಕೆ ಕೊಡಬೇಡಿ ಎಂದಿದ್ದಾರೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.
ಇಷ್ಟಕ್ಕೂ ಕಾರಣ ಏನು ಎಂದು ಹುಡುಕಿದರೆ ಸರ್ವರ್ ಸಮಸ್ಯೆ ಎನ್ನುವ ರಿಯಲ್ ಕಾರಣ ತೆರೆದುಕೊಳ್ಳುತ್ತದೆ. ಈಗಿರುವ ಸರ್ವರ್, ಗ್ರಾಹಕರ ಓವರ್ ಫ್ಲೋ ತಡೆದುಕೊಳ್ಳಲು ಆಗುತ್ತಿಲ್ಲ. ಸರಳವಾಗಿ ಹೇಳಬೇಕೆಂದರೆ 40 ಅಡಿ ಅಗಲದ ರಸ್ತೆಯಲ್ಲಿ ಎರಡು ವಾಹನಗಳು ಸರಾಗವಾಗಿ ಸಂಚರಿಸಬಹುದು. ಮೂರು ವೆಹಿಕಲ್ಸ್ ಬಂದರೆ ಅಷ್ಟೊಂದು ಕಷ್ಟವೇನೂ ಆಗುವುದಿಲ್ಲ. ಆದರೆ ಅದೇ 40 ಅಡಿ ಅಗಲದ ರಸ್ತೆಯಲ್ಲಿ ಏಕ್`ದಂ 100 ವಾಹನಗಳು ಬಂದರೆ.. ಟ್ರಾಫಿಕ್ ಜಾಮ್ ಆಗಿಯೇ ಆಗುತ್ತೆ. ಗೃಹಜ್ಯೋತಿ ಸರ್ವರ್ ಕಥೆಯೂ ಇಷ್ಟೆ.
ಸೇವಾಸಿಂಧು ಪೋರ್ಟಲ್ ಕಥೆ ಏನೆಂದು ನೋಡಿದರೆ ಈ ಪೋರ್ಟಲ್ ಕಳೆದ 5 ವರ್ಷಗಳಲ್ಲಿ ಸ್ವೀಕರಿಸಿದ ಅರ್ಜಿಗಳ ಒಟ್ಟಾರೆ ಸಂಖ್ಯೆಯೇ ಸುಮಾರು ಮೂರೂವರೆ ಕೋಟಿ. ಮತ್ತೊಮ್ಮೆ ಓದಿಕೊಳ್ಳಿ, ಇದು ಕಳೆದ 5 ವರ್ಷಗಳಲ್ಲಿನ ಒಟ್ಟಾರೆ ಅರ್ಜಿಗಳ ಸಂಖ್ಯೆ. ಈ ಸೇವಾಪೋರ್ಟಲ್‍ಗೆ ದಿನಕ್ಕೆ 7ರಿಂದ 8 ಸಾವಿರ ಅರ್ಜಿಗಳನ್ನು ಸ್ವೀಕರಿಸುವ ಸಾಮಥ್ರ್ಯ ಇದೆ. ಒಮ್ಮೆಗೇ.. ಏಕಕಾಲಕ್ಕೆ 500 ಜನ ಲಾಗ್ ಇನ್ ಮಾಡಬಹುದು. ಆ ಕೆಪಾಸಿಟಿಯನ್ನು 5 ಪಟ್ಟು ಹೆಚ್ಚಿಸುತ್ತೇವೆ ಎಂದರೂ ಈಗಿರುವ ಅರ್ಜಿಗಳ ಪ್ರವಾಹದ ಎದುರು ಏನೇನೂ ಅಲ್ಲ.
ದಿನಕ್ಕೆ 10 ಲಕ್ಷ ಜನ ಅರ್ಜಿ ಸಲ್ಲಿಸಿದರೂ 20 ದಿನಗಳಲ್ಲಿ ಅದು 4 ಕೋಟಿ ಅಪ್ಲಿಕೇಷನ್ ರೀಚ್ ಆಗುವುದು ಸಾಧ್ಯವಿಲ್ಲ. ಹೀಗಿರುವಾಗ ಅರ್ಜಿಗಳ ಸಂಖ್ಯೆ ದಿನಕ್ಕೆ ಲಕ್ಷದ ಗಡಿಯಲ್ಲಿಯೇ ಕುಂಟುತ್ತಿದೆ. ಸರ್ವರ್ ಸಮಸ್ಯೆ ಎದ್ದು ಕಾಣುತ್ತಿದೆ. ಕೊನೆಯ ದಿನಾಂಕ ಮೆನ್ಷನ್ ಮಾಡಿಲ್ಲ ಎನ್ನುವುದು ಸರ್ಕಾರದ ವಾದ. ಆದರೆ ತಮ್ಮಲ್ಲೇ ಹುಳುಕು ಇಟ್ಟುಕೊಂಡು ಸರ್ಕಾರ ವರ್ಸಸ್ ಸರ್ಕಾರ ವಿವಾದ/ವಾದ ಹುಟ್ಟುಹಾಕಬಾರದಷ್ಟೆ.



