

ಆತುರದಗಂಡನಿಗೆ ಹೆಂಡತಿ ಕಾಯಿಸಿ ಎರೆಯುವುದು ವಾಡಿಕ
ಊಟಕ್ಕಿಡೋ ಗಂಡನ ಹೆಂಡತಿ ಮಾತಿನಜೇನಿಡುವುದು ವಾಡಿಕೆ
ಜೇನೆರವ ಹೆಂಡತಿಯಗಂಡನೂ ಕಿನ್ನರಿ ಎನ್ನವುದು ವಾಡಿಕೆ”
ಹುಟ್ಟುಡುಗೆ ಹೆಂಡತಿಯ ಗಂಡನು ದೇವತೆಎನ್ನುವುದು ವಾಡಿಕೆ
ಪೂಜೆ ಮಾಡೋ ಗಂಡನಿಗೆ ಹೆಂಡತಿ ದರುಶನ ನೀಡುವುದು ವಾಡಿಕೆ
ಇದು ಮನೆದೇವ್ರು ಚಿತ್ರದ ಸುಂದರಿ ಸುಂದರಿ ಹಾಡಿನ ಸಾಲುಗಳು. ಇದೇ ಹಾಡಿನ ಮುಂದುವರೆದ ಭಾಗದಲ್ಲಿ ಬರುವ ಸಾಲುಗಳನ್ನೂ ನೋಡಿಕೊಂಡರೆ ಮುಟ್ಟು ಮತ್ತು ಮೂಡು ಎರಡರ ಕಥೆಯೂ ಗೊತ್ತಾಗಿಬಿಡುತ್ತೆ. ಮನೆದೇವ್ರು ಚಿತ್ರದ ಈ ಹಾಡಿಗೂ ಮುನ್ನ ಗಂಡ ರಾತ್ರಿಯ ಪ್ರೇಮಪೂಜೆಗೆ ಪ್ರೀತಿಯ ಹಾಸಿಗೆ ಹಾಸಿರುತ್ತಾನೆ. ಆದರೆ ಹೆಂಡತಿ ಮುಟ್ಟಾಗಿಬಿಡುತ್ತಾಳೆ. ಅವಳಿಗೆ ರಜೆ. ಆ ಸಂದರ್ಭದಲ್ಲಿ ಮೂಡು ಕೆಡಿಸಿಕೊಂಡ ಗಂಡನ ಕಾಮಕ್ಕೆ ಹೆಂಡತಿಯೂ ಸಿಟ್ಟಾದಾಗ ಬರುವ ಹಾಡಿನ ಮೊದಲ ಸಾಲುಗಳು ಇವಾದರೆ.. ರಜೆ ಮುಗಿದ ಮೇಲಿನ ಕಥೆಯೇಬೇರೆ.


ತಾಳಿ ಕಟ್ಟಿ ಬಾಗಿಲು ತಟ್ಟಿ ಕಾಯೋದೆಲ್ಲ ನಿಮಗೆ ಬೆಲ್ಲ
ವಿರಹದ ನಡುವೆ ಪತಿಇರಲು ಸತಿಯದು ಬರೀ ಮಾತೇ
ಕೋಪದ ನಡುವೆ ಹಾಡುವುದೆ ಅಂತಃಪುರ ಗೀತೆ
ಚಂದ್ರ ಕಾದ ಚಂದ್ರ ಕಾದ ಹೆಣ್ಣಿಮೆಗಾಗಿ ಶಿವನೂ ಕಾದ
ಹೆಣ್ಣು ಕೊಟ್ಟ ಆಸೆ ಕೊಟ್ಟ ಅಯ್ಯೋ ಬ್ರಹ್ಮ ನಡುವೆ ಈ ಗಡುವು ಇಟ್ಟ
ನಿಮಗೆ ಗೊತ್ತಿರಲಿ.. ಇಡೀ ಹಾಡಿನಲ್ಲಿರೋದು ಮುಟ್ಟಾದ ಹೆಂಡತಿಯನ್ನು ಗಂಡ ಆರೈಕೆ ಮಾಡುವುದು ಹೇಗೆ ಎಂಬ ದಾಂಪತ್ಯ ಗೀತೆಯ ಸಾಲುಗಳೇ. ವಿಪರೀತವೆಂದರೆ ನಮ್ಮಲ್ಲಿ ಅದೇಕೋ ಮುಟ್ಟು ಅನ್ನೋದನ್ನ ಕೆಟ್ಟದಾಗಿ ನೋಡೋ ಪದ್ಧತಿ ಇದೆ. ಆದರೆ ಆ ಸಂದರ್ಭದಲ್ಲಿ ಹೆಣ್ಣು ಅನುಭವಿಸೋ ಮಾನಸಿಕ ಮತ್ತು ದೈಹಿಕ ನೋವನ್ನ ಗಂಡನಾದವನು ಅರ್ಥ ಮಾಡಿಕೊಳ್ಳಲೇಬೇಕು. ಹಾಗಾದರೆ ಹೆಂಡತಿ ಮುಟ್ಟಾದಾಗ ಗಂಡ ಏನೇನೆಲ್ಲ ಮಾಡಬೇಕು? ಆಕೆಯ ನೋವಿಗೆ ಹೇಗೆ ಸ್ಪಂದಿಸಬೇಕು..?
ಆಕೆಗೋ ಒಂದು ಕಡೆ ರಕ್ತ ಹರಿದು ಹೋಗುತ್ತಿರುತ್ತದೆ. ಹಾಗೆ ಹೊರಹೋಗುವ ರಕ್ತ ತೊಡೆಯ ಸಂದುಗಳಲ್ಲಿ ಒಂದು ರೀತಿಯ ಕಿರಿಕಿರಿ ಸೃಷ್ಟಿಸುತ್ತಿರುತ್ತದೆ. ಕ್ಲೀನ್ ಕೂಡಾ ತಪ್ಪಿದರೆ ತುರಿಕೆಯೂ ಇರುತ್ತದೆ. ತಲೆನೋವು, ವಾಂತಿ, ಖಿನ್ನತೆ, ಕೋಪ ಇವೆಲ್ಲವೂ ಹೆಣ್ಣಿಗೆ ಆ ಸಂದರ್ಭದಲ್ಲಿ ಸಾಮಾನ್ಯ. ಆ ಸಮಯದಲ್ಲಿ ಗಂಡಸಾದವರು ಕೊಡಬೇಕಿರುವ ಅತಿ ದೊಡ್ಡ ಔಷಧಿ ಪ್ರೀತಿ.
ಆಕೆಗೆ ಕೆಲಸ ಮಾಡುವ ಉತ್ಸಾಹ ಇರಲ್ಲ. ನಿದ್ರೆ ಬೇಡವೆಂದರೂ ಎಳೆಯುತ್ತಿರುತ್ತೆ. ಹಾಸಿ ಹೊದ್ದು ಮಲಗಬೇಕು ಎನ್ನಿಸುತ್ತಿರುತ್ತೆ. ಮೂಡ್ ಸ್ವಿಂಗ್. ಅತಿಯಾದ ಸಂತೋಷ, ಅತಿಯಾದ ದುಃಖ. ಆತಂಕ, ಖಿನ್ನತೆ, ಅತಿಯಾದ ಕೋಪ ಇವೆಲ್ಲ ಆ ಸಂದರ್ಭದಲ್ಲಿ ಪ್ರಕೃತಿ ಮಹಿಳೆಗೆ ಕೊಡುವ ಶಾಪ.
ಮೂರು ದಿನದ ಆ ನೋವಿನಲ್ಲಿ ಆಕೆಗೆ ಕಾಡುವುದು ಬೆನ್ನು ನೋವು. ಹಿತವಾಗಿ ಮಸಾಜ್ ಮಾಡಿ. ಬಿಸಿನೀರಿನ ಶಾಖ ಕೊಡಿ. ಅದು ಕೊಡೋ ನೆಮ್ಮದಿಯೇ ಬೇರೆ. ಅಡುಗೆ ನೀವೇ ಮಾಡಿ. ಕ್ಲೀನಿಂಗ್ ನೀವೇ ಮಾಡಿ. ಆಕೆಯನ್ನು ಆರಾಮಾಗಿ ಕೂರಲು ಬಿಡಿ. ಭೀಮಸೇನ ನಳಮಹರಾಜರೂ ಗಂಡಸರೇ ಅಲ್ಲವೇ. ಅಡುಗೆ ಹೆಣ್ಣು ಮಕ್ಕಳ ಆಸ್ತಿಯೇನಲ್ಲ.


ಮಹರಾಣಿಯ ಹಾಗೆ..
ಆಯಾಸ ಪಡದಿರು ನೀನು ನೋಯುತ ಹೀಗೆ..
ಎಂದು ಎಲ್ಲ ಕೆಲಸ ಮಾಡಿಬಿಡಿ. ಮುಟ್ಟಿನ ಸಮಯದಲ್ಲಿ ಸಂಗಾತಿ ನಿಮ್ಮಿಂದ ಪ್ರೀತಿಯನ್ನು ಬಯಸ್ತಾಳೆ. ಆಕೆಯನ್ನು ತಬ್ಬಿಕೊಂಡು, ಚುಂಬಿಸುವಂತಹ ಪ್ರೀತಿ ತೋರಿಸಿ. ಸಂಭೋಗ ನಿರೀಕ್ಷಿಸುವ ಪ್ರೀತಿ ಬೇಡ.
ಅಪ್ಪಿತಪ್ಪಿಯೂ ವಾದ ಮಾಡಬೇಡಿ. ಅದು ಆಕೆಯ ಮನಸ್ಥಿತಿಯನ್ನ ನೋಯಿಸುತ್ತದೆ. ಅಷ್ಟೆಲ್ಲ ಮಾಡಿದ ಮೇಲೆ 3 ದಿನದ ರಜೆಯೂ ಮುಗಿದ ಮೇಲೆ ಆಕೆಯೇ ಹಾಡುತ್ತಾಳೆ..
ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು ಅಂಥಾ..
ಕೊನೆಗೆ
ಹುಟ್ಟುಡುಗೆ ಹೆಂಡತಿಯ ಗಂಡನು ದೇವತೆಎನ್ನುವುದು ವಾಡಿಕೆ
ಪೂಜೆ ಮಾಡೋ ಗಂಡನಿಗೆ ಹೆಂಡತಿ ದರುಶನ ನೀಡುವುದು ವಾಡಿಕೆ
ಎಂದು ಹಾಡುತ್ತಿರುವಾಗ ಅಂತಃಪುರ ಗೀತೆ ನಿಮಗಾಗಿ ಕಾಯುತ್ತಿರುತ್ತೆ.



