ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೊಂದು ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಚುನಾವಣೆ ಹೊತ್ತಿನಲ್ಲೇ ಅನಿವಾರ್ಯವಾಗಿ ಆಪರೇಷನ್ʻಗೆ ಒಳಗಾಗುತ್ತಿರುವ ಕುಮಾರಸ್ವಾಮಿ, ಚೆನ್ನೈಗೆ ತೆರಳಲಿದ್ದಾರೆ. ಮಾರ್ಚ್ 21ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಗುರುವಾರದ ಆಪರೇಷನ್ನಿಗೆ ಕುಮಾರಸ್ವಾಮಿ ಮಂಗಳವಾರ ಚೆನ್ನೈಗೆ ತೆರಳಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಮಂಗಳವಾರ ಆರೋಗ್ಯ ತಪಾಸಣೆ ನಡೆಸಲಾಗುವುದು. ಕೆಲವು ಪರೀಕ್ಷೆ ನಡೆಸಿದ ಬಳಿಕ 21ರಂದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇದೇ 24ರವರೆಗೆ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
25ರಂದು ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆದು ನಂತರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆರೋಗ್ಯದ ದೃಷ್ಟಿ ಯಿಂದ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆಯಾದರೂ ಶಸ್ತ್ರಚಿಕಿತ್ಸೆ ಬಳಿಕವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಅವರಿಗೆ ಈಗಾಗಲೇ ಒಮ್ಮೆ ಬೈಪಾಸ್ ಹಾರ್ಟ್ ಸರ್ಜರಿಯಾಗಿದೆ. ಆಗಾಗ್ಗೆ ಆರೋಗ್ಯ ಕೈಕೊಡುತ್ತಲೂ ಇರುತ್ತೆ. ಕಳೆದ ಆಗಸ್ಟ್ ತಿಂಗಳಲ್ಲಿ ಕುಮಾರಸ್ವಾಮಿ ಅವರನ್ನು ಮಧ್ಯರಾತ್ರಿಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬ್ರೈನ್ ಸ್ಟ್ರೊಕ್ ಅಟ್ಯಾಕ್ ಆಗಿ ದೂರವಾಗಿತ್ತು. ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದ ಡ್ರೈವರ್, ಕುಮಾರಸ್ವಾಮಿ ಅವರನ್ನು ಅಪಾಯದಿಂದ ಪಾರು ಮಾಡಿದ್ದರು.
ಕುಮಾರಸ್ವಾಮಿ ಅವರ ಆರೋಗ್ಯ ಯಾವ ಮಟ್ಟಿಗೆ ಹದಗೆಟ್ಟಿತ್ತೆಂದರೆ.. ಕುಮಾರಸ್ವಾಮಿ ಸಂಪೂರ್ಣ ಗುಣಮುಖರಾಗಿ ವಾಪಸ್ ಬರುವವರೆಗೂ ಕುಟುಂಬದವರು ಸೀರಿಯಸ್ ಆಗಿಯೇ ನೋಡಿಕೊಂಡಿದ್ದರು. ಐಸಿಯು ಬಿಟ್ಟು ಕದಲಿರಲಿಲ್ಲ.
ಆಗ.. ಹೆಚ್.ಡಿ ಕುಮಾರಸ್ವಾಮಿಯವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಭೇಟಿ ನೀಡಬೇಕಿತ್ತು. ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಹೆಚ್ಡಿ ಕುಮಾರಸ್ವಾಮಿಯವರು ಮಾತುಕತೆ ನಡೆಸಲಿದ್ದರು. ಆದರೆ, ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಶ್ರೀನಿವಾಸಪುರ ಭೇಟಿ ರದ್ದಾಗಿತ್ತು. ಅಷ್ಟೇ ಅಲ್ಲ, ಸುಮಾರು ಒಂದು ತಿಂಗಳ ಕಾಲ ಕುಮಾರಸ್ವಾಮಿ ಅವರನ್ನು ಕುಟುಂಬದವರು ಹೊರಗಡೆ ಓಡಾಡದಂತೆ ನೋಡಿಕೊಂಡಿದ್ದರು. ಅದಾದ ಮೇಲೆ.. ಎಂದಿನಂತೆ ಕುಮಾರಸ್ವಾಮಿ ಮನೆಯವರ ಮಾತನ್ನು ಲೆಕ್ಕಿಸದೆ ಓಡಾಡಿಕೊಂಡಿದ್ದರು.
ಈಗ ಮತ್ತೊಮ್ಮೆ ಹಾರ್ಟ್ ಆಪರೇಷನ್ ನಡೆಯುತ್ತಿದೆ. ಇದು ಮೈನರ್ ಆಪರೇಷನ್ ಎಂದು ಹೇಳಲಾಗಿದೆಯಾದರೂ.. ಈಗಾಗಲೇ ಒಮ್ಮೆ ಬೈಪಾಸ್ ಸರ್ಜರಿ ಆಗಿರುವ ಕಾರಣ ಆಪರೇಷನ್ ಬಗ್ಗೆ ಅಭಿಮಾನಿಗಳು ಆತಂಕದಲ್ಲಿಯೇ ಇದ್ದಾರೆ.
ಈ ನಡುವೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ಇನ್ನೂ ಫೈನಲ್ ಆಗಿಲ್ಲ. ಮತ್ತೊಂದೆಡೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ನ ಹೆಚ್ಡಿ ಕುಮಾರಸ್ವಾಮಿ ಅವರೇ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಜೆಡಿಎಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ. ಕುಮಾರಸ್ವಾಮಿ ಸ್ಪರ್ಧೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಜೆಡಿಎಸ್ ಹಾಕಿಕೊಂಡಿದೆ.
ಮತ್ತೊಂದೆಡೆ, ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ಆದರೆ ಸುಮಲತಾ ಕೂಡ ಹೆಚ್ಚು ವಿರೋಧ ಮಾಡಲಾರರು ಎಂಬ ಅಂದಾಜು ಜೆಡಿಎಸ್ ನಾಯಕರದ್ದಾಗಿದೆ. ಈ ಎಲ್ಲ ಕಾರಣಗಳನ್ನು ಅಳೆದು ತೂಗಿ ಕುಮಾರಸ್ವಾಮಿಯೇ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ..



