ನಟ ದರ್ಶನ್ ಕೊಲೆ ಕೇಸಿನಲ್ಲಿ ಫಿಟ್ ಆಗುತ್ತಿದ್ದಂತೆಯೇ, ಹಳೆಯ ಪ್ರಕರಣಗಳು ಜೀವ ಪಡೆದುಕೊಳ್ತಿವೆ. ಕೊಲೆ ಕೇಸಿನಲ್ಲಿ ದರ್ಶನ್ & ಗ್ಯಾಂಗ್ ಜೈಲಿಗೆ ಹೋಗುತ್ತಿದ್ದರೆ, ಇದೇ ಗ್ಯಾಂಗ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಮದ್ದೂರು ಶಾಸಕ ಉದಯ್ ಗೌಡ ಅವರ ಗನ್ ಮ್ಯಾನ್ ಮೇಲೆ ಹಲ್ಲೆ ಮಾಡಿರುವ ಆರೋಪ ಈಗ ಬೆಳಕಿಗೆ ಬಂದಿದೆ. ಇತ್ತೀಚಿನ ಲೋಕಸಭೆ ಚುನಾವಣೆ ಪ್ರಚಾರದ ನಾಗೇಶ್ ಎಂಬ ಪೊಲೀಸ್ ಪೇದೆಯ ಮೇಲೆ ದರ್ಶನ್ ಗ್ಯಾಂಗ್ʻನವರು ಹಲ್ಲೆ ಮಾಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ನಾಗೇಶ್ ಆ ದಿನವೇ ದೂರನ್ನು ಕೂಡಾ ನೀಡಿದ್ದಾರೆ. ಆದರೆ, ಆನಂತರ ರಾಜಿಯಾಗಿದ್ದಾರೆ. ಅಷ್ಟೇ ಅಲ್ಲ, ಗನ್ ಮ್ಯಾನ್ ಕೆಲಸದಿಂದ ಮಾತೃ ಇಲಾಖೆಯ ಡ್ಯೂಟಿಗೆ ಟ್ರಾನ್ಸ್ʻಫರ್ ತೆಗೆದುಕೊಂಡಿದ್ದಾರೆ. ಹಲ್ಲೆಯ ಘಟನೆ ಜರುಗಿರುವುದು ಏಪ್ರಿಲ್ 22ರಂದು. ಆದರೆ, ಘಟನೆಯೇ ನಡೆದಿಲ್ಲ ಎನ್ನುವುದು ಶಾಸಕ ಉದಯ್ ಗೌಡ ಅವರ ವಾದ.
ಮುಖಂಡರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್, ನಾಗರಾಜು (ಇಬ್ಬರೂ ಈಗ ಅರೆಸ್ಟ್ ಆಗಿದ್ದಾರೆ) ಹಾಗೂ ಇತರರು ಡಿಎಆರ್ ಪೇದೆ ನಾಗೇಶ್ ಜೊತೆ ಜಗಳ ಮಾಡಿದ್ದರು. ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಅವರ ಮೇಲೆ ಹಲ್ಲೆ ಮಾಡಿದ್ದರು. ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್ ಅವರು ದೂರು ನೀಡಲು ಹೋಗಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ ಅವರಿಗೆ ಚಿಕಿತ್ಸೆ ಸಹ ನಡೆದಿತ್ತು. ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಇದೆಲ್ಲವನ್ನೂ ನಿರಾಕರಿಸಿರುವ ಉದಯ್ ಗೌಡ ʻʻನನ್ನ ಗನ್ ಮ್ಯಾನ್ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನಿಮಗೆ ಇದೆಲ್ಲಾ ಯಾರು ಹೇಳಿದ್ದು. ಆ ರೀತಿಯ ಘಟನೆ ಆಗೇ ಇಲ್ಲ. ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ ಸುಳ್ಳು ಸೃಷ್ಟಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆʼʼ ಆದರೆ ದಾಖಲೆಗಳಂತೂ ಲಭ್ಯವಿದೆ.
ದರ್ಶನ್ ಒಳ್ಳೆವನು. ಆದರೆ ಸಹವಾಸ ದೋಷದಿಂದ ಹಾಳಾಗಿದ್ದಾನೆ. ಅವನ ಸುತ್ತಾ ಮುತ್ತಾ ಇರುವ ಜನರು ಸರಿಯಿಲ್ಲ. ನನ್ನ ಕಿವಿಮಾತು ದರ್ಶನ್ ಗೆ ಏನಂದ್ರೆ ಸಿನಿಮಾ ಮೇಲೆ ಅಷ್ಟೇ ನಿಮ್ಮ ಗಮನ ಇರಲಿ.ನಾನು, ದರ್ಶನ್ ಬೇಕಾದಷ್ಟು ಪಾರ್ಟಿ ಮಾಡಿದ್ದೇವೆ. ದರ್ಶನ್ ಕುಡಿದಾಗ ಕಂಟ್ರೋಲ್ ತಪ್ಪಲ್ಲ. ಪ್ರಜ್ಞೆ ಇದ್ದೇ ವರ್ತಿಸುತ್ತಾರೆ. ಅವರು ಆಚೆ ಬರ್ತಾರೆ ವೈಟ್ ಮಾಡಿ. 90 ಡೇಸ್ ಅಷ್ಟೇ ಬಂದೆ ಬರ್ತಾರೆ ಎಂದಿದ್ದಾರೆ ಉದಯ್ ಗೌಡ.
ದಾಖಲೆಗಳ ಪ್ರಕಾರ ಕೆಸ್ತೂರು ಠಾಣೆಯಲ್ಲಿ ನಾಗೇಶ್ ಎಂಬ ಪೊಲೀಸ್ ಪೇದೆ ದೂರು ಕೊಡಲು ಹೋಗಿರುವುದು ರಿಜಿಸ್ಟರಿನಲ್ಲಿ ದಾಖಲಾಗಿದೆ. ಆದರೆ, ಆನಂತರ ರಾಜಿಯಾಗಿದೆ. ತಮ್ಮದೇ ಒಬ್ಬ ಗನ್ ಮ್ಯಾನ್ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸುವುದು ಬಿಡಿ, ಬಹಿರಂಗವಾಗಿ ಒಪ್ಪಿಕೊಳ್ಳೋಕೂ ಆಗದ ಶಾಸಕರು ಮದ್ದೂರಿನಲ್ಲಿದ್ದಾರೆ. ಆ ಪೇದೆಗೆ ನೈತಿಕ ಧೈರ್ಯ ತುಂಬಬೇಕಾದವರು, ಹೊಡೆದರು ಎನ್ನಲಾದವರ ಬೆನ್ನಿಗೇ ನಿಂತಿರುವುದು ವಿಪರ್ಯಾಸ.



