ಹೆಚ್.ಡಿ.ರೇವಣ್ಣ ಕುಟುಂಬದ ಗ್ರಹಗತಿ ಸರಿ ಇಲ್ಲ. ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಕೇಸಿನಲ್ಲಿ ಜೈಲಿನಲ್ಲಿದ್ಧಾರೆ. ಹೆಚ್.ಡಿ.ರೇವಣ್ಣ ಜೈಲಿಗೆ ಹೋಗಿ ವಾಪಸ್ ಬಂದಿದ್ದಾರೆ. ಭವಾನಿ ರೇವಣ್ಣ ಜೈಲು ಸೇರುವ ಹಂತಕ್ಕೆ ಹೋಗಿ ಬಚಾವ್ ಆಗಿದ್ದಾರೆ. ಇದೀಗ ಸೂರಜ್ ರೇವಣ್ಣ ಜೈಲು ಸೇರುವ ಸಮಯ ಬರುತ್ತಿದೆ. ಏಕೆಂದರೆ ಸೂರಜ್ ವಿರುದ್ಧ ಕೇಳಿ ಬರುತ್ತಿರುವ ಆರೋಪ ಸಣ್ಣದಲ್ಲ. ಅಸಹ್ಯದ ಆರೋಪ.
ಡಾ. ಸೂರಜ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಚೇತನ್ ಎಂಬ ವ್ಯಕ್ತಿ ದೂರು ನೀಡಿದ್ದಾರೆ. ʻಇದೊಂದು ಸುಳ್ಳು ಆರೋಪ’ ಎಂದು ಸೂರಜ್ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಇನ್ನು, ಲೈಂಗಿಕ ದೌರ್ಜನ್ಯ ಆಗಿದೆ ಎಂದು ಆರೋಪಿಸಿರುವ ಚೇತನ್, ‘ನನಗೆ ಕೆಲಸ ಬೇಕಿದೆ. ದಯಮಾಡಿ ಸೂರಜ್ ರೇವಣ್ಣನ ಬಳಿ ಕರೆದುಕೊಂಡು ಹೋಗಿ ಒಂದು ಕೆಲಸ ಕೊಡಿಸಿ’ ಎಂದು ನನಗೆ ದುಂಬಾಲು ಬಿದ್ದಿದ್ದ. ನಂತರ ಜೂನ್ 16ರಂದು ಚನ್ನರಾಯಪಟ್ಟಣ ತಾಲೂಕಿನ ಗನ್ನಿಗಡದ ತೋಟದ ಮನೆಗೆ ಹೋಗಲು ಹೇಳಿದ್ದೆ. ಅಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಕೆಲಸ ಬೇಕು ಎಂದು ಕೇಳಿದ್ದ. ಆಗ, ಸೂರಜ್ ರೇವಣ್ಣ ಅವರು ‘ಈಗ ಯಾವುದೂ ಇಲ್ಲ. ನಂತರ ನೋಡೋಣ’ ಎಂದು ಹೇಳಿ ಕಳಿಸಿದ್ದರು ಎನ್ನುವುದು ಶಿವಕುಮಾರ್ ಕೊಟ್ಟಿರುವ ಸ್ಪಷ್ಟನೆ.
ನಂತರ ಆತ, “ನನಗೆ ಏನೂ ಕೆಲಸ ಕೊಡಿಸಲ್ಲ. ನಿಮ್ಮ ಬಾಸ್ ಕೆಲಸ ಕೊಡಿಸಲ್ಲ. ನನಗೆ ತುಂಬಾ ಕಷ್ಟ ಇದೆ. ನನಗೆ ಹಣ ಬೇಕು. ನೀನು ನಿಮ್ಮ ಬಾಸ್‌ರಿಂದ ನನಗೆ ಐದು ಕೋಟಿ ರೂ. ಹಣ ಕೊಡಿಸದಿದ್ದರೆ ಅವರ ವಿರುದ್ಧ ಲೈಂಗಿಕ ದೌರ್ಜನದ ದೂರು ಕೊಡ್ತೀನಿ,” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ ಶಿವಕುಮಾರ್.
ಜೂನ್ 18ರಂದು ಹಾಸನದ ಜಿಲ್ಲಾ ಆಸ್ಪತ್ರೆಯ ಖಾಲಿ ಎಂಎಲ್‌ಸಿ ಸೀಲ್ ಇರುವ ಖಾಲಿ ಆಸ್ಪತ್ರೆಯ ಚೀಟಿಯನ್ನು ಕಳಿಸಿದ್ದ. ಈ ಮೂಲಕ ಬೆದರಿಕೆ ಹಾಕಿದ್ದಾನೆ.
ಹೀಗಾಗಿ, ಇದೊಂದು ಸುಳ್ಳು ಆರೋಪವಾಗಿದ್ದು ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದಾಗಿ ದೂರಿನಲ್ಲಿ ಸುದೀರ್ಘವಾಗಿ ಬರೆದು ಹೊಳೆನರಸೀಪುರ ಠಾಣೆಗೆ ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಚೇತನ್ ಕೆಎಸ್ ಹಾಗೂ ಆತನ ಅಳಿಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಅರಕಲಗೂಡು ಜೆಡಿಎಸ್ ಕಾರ್ಯಕರ್ತನ ಮೇಲೆ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಲಕ್ಷಣ ಆರೋಪದಿಂದ ರೇವಣ್ಣ ಕುಟುಂಬ ಮತ್ತೆ ಮುಜುಗರಕ್ಕೀಡಾದಂತಾಗಿದೆ.
ಸೂರಜ್ ರೇವಣ್ಣ ಅವರು ಜೂನ್ 16ರ ರಾತ್ರಿ ತಮ್ಮ ಪಕ್ಷದ ಕಾರ್ಯಕರ್ತನಿಗೆ ಸಹಾಯ ಮಾಡುವುದಾಗಿ ಚನ್ನಪಟ್ಟಣ ತಾಲ್ಲೂಕಿನ ಗನ್ನಿಕಡದ ತೋಟದ ಮನೆಗೆ ಕರೆಯಿಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಾರ್ವಜನಿಕ ಅಭಿಪ್ರಾಯ ಏನೇ ಇರಲಿ, ಕಾನೂನು ಪ್ರಕಾರ ಸಲಿಂಗ ಕಾಮ ತಪ್ಪೇನಲ್ಲ. ಅಪರಾಧವೂ ಅಲ್ಲ. ಆದರೆ, ಬಲವಂತವಾಗಿ ಮಾಡುವುದನ್ನು ಅಸಹ್ಯ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಸೂರಜ್ ರೇವಣ್ಣ ಕೂಡಾ ಅರೆಸ್ಟ್ ಆಗುವ ಭಯದಲ್ಲಿದ್ದಾರೆ.



