ನಟ ದರ್ಶನ್ ಅವರು ವಿವಾದಗಳನ್ನು ಅಟ್ಟಿಸಿಕೊಂಡು ಹೋಗ್ತಾರೋ.. ಅಥವಾ ವಿವಾದಗಳೇ ಅವರನ್ನು ಹುಡುಕಿಕೊಂಡು ಬರ್ತವೋ.. ಹೇಳೋಕಾಗಲ್ಲ. ಟಿವಿ ಮಾಧ್ಯಮಗಳ ಜೊತೆ ಸಲ್ಲದ ರಗಳೆ ಮಾಡಿಕೊಂಡಿದ್ದ ದರ್ಶನ್ ಆಮೇಲೆ ಕ್ಷಮೆ ಯಾಚಿಸಿದ್ದು ಹಳೆ ಕಥೆ. ಆ ಸಂದರ್ಭದಲ್ಲಿ ನಟ ದರ್ಶನ್ ಅವರ ಪಾಸಿಟಿವ್ ಆಗಲೀ ನೆಗೆಟಿವ್ ಸ್ಟೋರಿಯಾಗಲೀ ಗೊತ್ತೇ ಆಗುತ್ತಿರಲಿಲ್ಲ. ಚಿತ್ರರಂಗದವರಂತೂ ದರ್ಶನ್ ಅವರು ಬರದೇ ಇದ್ದರೆ ಒಳ್ಳೆಯದು ಎಂಬಂತಿದ್ದರು. ಈಗ ಸಮಸ್ಯೆ ಪರಿಹಾರವಾಗಿರುವ ಕಾರಣ ದರ್ಶನ್ ಹಲವು ಚಿತ್ರಗಳ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ಧಾರೆ. ಈ ನಡುವೆ ಹುಲಿ ಉಗುರು ಕೇಸ್, ನಾಯಿ ಕಚ್ಚಿದ ಕೇಸ್ ಸುದ್ದಿಯಾಗಿವೆ. ಅವುಗಳು ಕ್ಲೋಸ್ ಆಗುವ ಮೊದಲೇ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ನಟ ದರ್ಶನ್.
ದರ್ಶನ್ ಅವರು ಇತ್ತೀಚೆಗೆ ಜಯನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದರು. ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ಜಯನಗರ 4ನೇ ಬ್ಲಾಕ್‌ನಲ್ಲಿ 15ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ಅದು. ನಟ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಅವರನ್ನು ಮುಖ್ಯ ಅತಿಥಿಗಳು. ಈ ವೇಳೆ ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದ ವೇಳೆ ದರ್ಶನ್ ಅವರ ಕೈಗೆ ಲಾಂಗ್ ಕೊಟ್ಟರು ಎನ್ನುವುದು ಆರೋಪ.
ಕಾನೂನಿನ ಪ್ರಕಾರ ಲಾಂಗ್ ಸೇರಿದಂತೆ ಯಾವುದೇ ಮಾರಕಾಸ್ತ್ರ ಪ್ರದರ್ಶನ ಮಾಡುವುದು ಅಪರಾಧ. ಸಾರ್ವಜನಿಕವಾಗಿ ಈ ರೀತಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಶಸ್ತ್ರಾಸ್ತ್ರ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವ ಅವಕಾಶವೂ ಇರುತ್ತದೆ. ಹಾಗಾದರೆ ದರ್ಶನ್ ಅವರಿಗೆ ಹೊಸ ಸಮಸ್ಯೆ ಎದುರಾಯಿತಾ ಎಂಬ ಪ್ರಶ್ನೆಗೆ ಅಭಿಮಾನಿಗಳೇ ಉತ್ತರ ಕೊಟ್ಟಿದ್ದಾರೆ. ಅದೂ ದಾಖಲೆ ಸಮೇತ.
ಮಾಧ್ಯಮದಲ್ಲಿ ಬರುತ್ತಿರುವ ಹಾಗೆ ಅದು ನಿಜವಾದ ಲಾಂಗ್ ಅಲ್ಲ. ‘ಕಾಟೇರ’ ಚಿತ್ರದ ಪ್ರಚಾರಕ್ಕಾಗಿ ಚಿತ್ರದಲ್ಲಿ ಡಿ ಬಾಸ್ ಹಿಡಿದಿರುವ ಮಚ್ಚನ್ನು ಹೋಲುವ ರೀತಿ ಬೆಳ್ಳಿಯಲ್ಲಿ ಮಾಡಿಸಿ ಅಭಿಮಾನಿಗಳು ಕೊಟ್ಟ ಉಡುಗೊರೆ ಅಷ್ಟೆ ಎನ್ನುವುದು ಅಭಿಮಾನಿಗಳ ವಾದ. ಬೆಳ್ಳಿ ಕಿರೀಟ, ಬೆಳ್ಳಿ ಕತ್ತಿಯನ್ನು ಖರೀದಿಸಿದ ಚಿನ್ನಾಭರಣ ಅಂಗಡಿಯ ರಶೀದಿ ಪತ್ರವನ್ನು ಹಂಚಿಕೊಂಡಿದ್ದಾರೆ.
ಎಲ್ಲ ಓಕೆ, ಆದರೆ ಸಿನಿಮಾಗಳಲ್ಲಿ ಮಚ್ಚು ಲಾಂಗು ಹಿಡಿದು ನಟಿಸುವುದೇ ಬೇರೆ.. ರಿಯಲ್ ಲೈಫಿನಲ್ಲಿ ಹಾಗೆ ಮಾಡುವುದೇ ಬೇರೆ. ಎರಡಕ್ಕೂ ವ್ಯತ್ಯಾಸ ಇರುವುದಿಲ್ಲವೇ.. ಇಷ್ಟಕ್ಕೂ ರಾಜ್ಯೋತ್ಸವ ಸಂಭ್ರಮದಲ್ಲಿ ಆಯುಧಗಳ ಪ್ರದರ್ಶನ ಏಕೆ ಬೇಕು ಅನ್ನೋ ಪ್ರಶ್ನೆಗೆ ದರ್ಶನ್ ಮತ್ತು ಅವರ ಅಭಿಮಾನಿಗಳೇ ಉತ್ತರಿಸಬೇಕು.



