ವಿನಯ್ ರಾಜ್ ಕುಮಾರ್ ಅವರ ಸಿನಿಮಾಗಳು ಕಳಪೆ ಎಂದು ಹೇಳಿದವರು ಇಲ್ಲ. ಸುಮಾರ್ ಆಗಿದೆ ಎಂದೋ.. ಇನ್ನೂ ಏನೋ ಬೇಕಿತ್ತು ಎಂದೋ.. ಹೇಳಿದವರಿದ್ದಾರೆ. ಕಥೆ ಓಕೆ. ಚಿತ್ರಕಥೆ ಓಕೆ. ಡಿಫರೆಂಟ್ ಪ್ರಯತ್ನ ಅನ್ನೋದೂ ಓಕೆ. ನಟನೆಯೂ ಓಕೆ. ಹೀಗಿದ್ದರೂ ವಿನಯ್ ರಾಜ್ ಕುಮಾರ್ ಅವರಿಗೆ ಸಕ್ಸಸ್ ಸಿಕ್ತಿಲ್ಲ. ಈಗ ನೋಡಿ.. ವಿನಯ್ ಅವರ ಅಂದೊಂದಿತ್ತು ಕಾಲ.. ಚಿತ್ರದ ಕಥೆಯೂ ಅದೇ.
ಅಂದೊಂದಿತ್ತು ಕಾಲ ಚಿತ್ರದ ಕಥೆ ಏನು..?
ಚಿತ್ರದಲ್ಲಿ ಕನ್ನಡ ಮೀಡಿಯಂ ಕುಮಾರ್ ಎಂಬ ಪಾತ್ರ ಮಾಡಿದ್ದಾರೆ ವಿನಯ್ ರಾಜ್ಕುಮಾರ್. ಹಳ್ಳಿಯಲ್ಲಿರುವ ಬಡಕುಟುಂಬದ ಕುಮಾರನಿಗೆ ಸಿನಿಮಾ ಡೈರೆಕ್ಟರ್ ಆಗಬೇಕು ಎಂಬ ಕನಸು. ಬಾಲ್ಯದಲ್ಲಿ ‘ನಾಗರಹಾವು’ ಸಿನಿಮಾ ನೋಡಿದ ಬಳಿಕ ಆತನಿಗೆ ಈ ಕನಸು ಚಿಗುರುತ್ತದೆ. ಪುಟ್ಟಣ್ಣ ಕಣಗಾಲ್ ಅವರನ್ನು ದೇವರ ರೀತಿ ಆರಾಧಿಸುವ ಕುಮಾರನಿಗೆ ತಾನೂ ಕೂಡ ಅವರಂತೆಯೇ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ. ಆದರೆ ದೊಡ್ಡವನಾದ ಬಳಿಕ ಅವಕಾಶ ಅಷ್ಟು ಸುಲಭವಾಗಿ ಸಿಗಲ್ಲ. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಸಿನಿಮಾ ಕನಸು. ಹೀಗೆ ಎರಡು ದೋಣಿಯ ಮೇಲೆ ಕಾಲಿಟ್ಟು ಸಾಗುವ ಕುಮಾರನ ಜೀವನ ಅಂತಿಮವಾಗಿ ಏನಾಗುತ್ತದೆ ಎಂಬುದನ್ನು ‘ಅಂದೊಂದಿತ್ತು ಕಾಲ’ ಚಿತ್ರದಲ್ಲಿ ನೋಡಿ ತಿಳಿಯಬೇಕು.
ಎರಡು ಶೇಡ್ ಇರುವ ಪಾತ್ರದಲ್ಲಿ ನಟ ವಿನಯ್ ರಾಜ್ಕುಮಾರ್ ಅವರು ನಟಿಸಿದ್ದಾರೆ. ಕಾಲೇಜು ಹುಡುಗನಾಗಿ, ಸಹಾಯಕ ನಿರ್ದೇಶಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಫ್ಲ್ಯಾಶ್ ಬ್ಯಾಕ್ ದೃಶ್ಯಗಳ ಮೂಲಕ ವೀಕ್ಷಕರ ಬಾಲ್ಯದ ನೆನಪುಗಳು ಮರುಕಳಿಸುವಂತೆ ಮಾಡಲಾಗಿದೆ. ಅಲ್ಲದೇ ಸಿನಿಮಾದ ಕ್ಲೈಮ್ಯಾಕ್ಸ್ ಕೊಂಚ ಎಮೋಷನಲ್ ಆಗಿದೆ. ಹಳೇ ಸ್ನೇಹಿತರನ್ನು ನೆನಪಿಸುತ್ತದೆ. ರವಿಚಂದ್ರನ್ ಎಂಟ್ರಿ ಕೊಡುವುದೇ ಈ ಕ್ಲೈಮಾಕ್ಸಿನಲ್ಲಿ.
ಬಾಲ್ಯದ ದಿನಗಳಲ್ಲಿ ಆಗುವ ಕ್ರಶ್ ಮತ್ತು ಜವಾಬ್ದಾರಿ ಬಂದ ಮೇಲೆ ಮೂಡುವ ಪ್ರೀತಿ ಎಲ್ಲವನ್ನೂ ಸುಂದರವಾಗಿ ತೋರಿಸಲಾಗಿದೆ. ನಿಶಾ ರವಿಕೃಷ್ಣನ್ ಮತ್ತು ಅದಿತಿ ಪ್ರಭುದೇವ ನಾಯಕಿಯಾಗಿ ಚೆಂದ ಚೆಂದ ಅನಿಸುತ್ತಾರೆ. ಅರುಣಾ ಬಾಲರಾಜ್ ತಾಯಿಯಾಗಿ ವ್ಹಾವ್ ಎನಿಸುತ್ತಾರೆ. ಸಂಗೀತವೂ ಚೆನ್ನಾಗಿದೆ.
ಆದರೆ.. ಚಿತ್ರದಲ್ಲಿ ಮೈನಸ್ ಅನಿಸುವುದು ಹಳೇ ಶೈಲಿಯ ನಿರೂಪಣೆ. ಸ್ಟೋರಿ ಸರಸರ ಹೋಗುವುದಿಲ್ಲ. ಕೆಲವು ಕಡೆ ನೋಡುವವರಿಗೆ ಆಕಳಿಕೆ ಗ್ಯಾರಂಟಿ. ಆದರೆ, ಸಿನಿಮಾ ಕೆಟ್ಟದಾಗಂತೂ ಇಲ್ಲ.
ಬಾಕ್ಸಾಫೀಸ್ ರಿಯಾಕ್ಷನ್ ಹೇಗಿದೆ..?
ಬಾಕ್ಸಾಫೀಸ್ ಪಂಡಿತರ ಪ್ರಕಾರ ಇದು ಫ್ಲಾಪ್ ಸಿನಿಮಾ. ಸಿನಿಮಾ ಚೆನ್ನಾಗಿದ್ದರೂ.. ಚಿತ್ರದ ಪ್ರಚಾರಕ್ಕೆ ಇಡೀ ತಂಡ ಶ್ರಮ ಹಾಕಲೇ ಇಲ್ಲ. ಅಲ್ಲೊಂದು ಇಲ್ಲೊಂದು ಯೂಟ್ಯೂಬ್ ಚಾನೆಲ್ಲುಗಳಿಗೆ ಸಂದರ್ಶನ ಕೊಟ್ಟರಷ್ಟೇ. ಹೀಗಾಗಿ ಎಷ್ಟೋ ಶೋಗಳು ಪ್ರೇಕ್ಷಕರಿಲ್ಲದೆ ಖಾಲಿ ಹೊಡೆದವು. ಸ್ವಲ್ಪ ಮಟ್ಟಿಗೆ ಬೆಂಗಳೂರಿನ ಹೊರಗೆ ಪ್ರೇಕ್ಷಕರು ಬಂದರೇ ಹೊರತು, ಬಿಕೆಟಿ ಏರಿಯಾದಲ್ಲಿ ಅಲ್ಲ. ಚಿತ್ರದ ಹಾಡುಗಳು ಚೆನ್ನಾಗಿದ್ದವು. ಆದರೆ, ಪ್ರಮೋಷನ್ ಇರಲಿಲ್ಲ. ಹಾಡುಗಳೂ ಅಷ್ಟೇ.. ನಿಧಾನವಾಗಿ ಹೃದಯಕ್ಕಿಳಿಯುವಂತಹ ಹಾಡುಗಳು. ಕ್ಯಾಚಿ ಸಾಂಗುಗಳಿರಲಿಲ್ಲ.
ಹಾಗೆ ನೋಡಿದರೆ, ವಿಷ್ಣುವರ್ಧನ್ ಸಿನಿಮಾ ನೋಡಿ ಡೈರೆಕ್ಟರ್ ಆಗುವ ಕನಸು ಕಾಣುವ ಕ್ಯಾರೆಕ್ಟರಿನಲ್ಲಿ ದೊಡ್ಮನೆ ಹುಡುಗ ನಟಿಸಿದ್ದಾನೆ ಎನ್ನುವುದನ್ನೇ ಪ್ರಚಾರ ಮಾಡಬಹುದಾಗಿತ್ತು. ಯಾವುದನ್ನೂ ಮಾಡದೇ.. ಪ್ರೇಕ್ಷಕರು ಬರಲಿಲ್ಲ ಎಂದು ಗೊಣಗುವ ಚಾಳಿ ಇಲ್ಲಿಯೂ ಕಂಟಿನ್ಯೂ ಆಗಿದೆ.



