ಈ ವರ್ಷ ಸೆಪ್ಟೆಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷವಾಗುತ್ತದೆ. ಬಿಜೆಪಿಯಲ್ಲಿ ಒಂದು ಅಲಿಖಿತ ನಿಯಮವಿದ್ದು, 75 ವರ್ಷ ಕಳೆದ ಮೇಲೆ ಸಕ್ರಿಯವಾಗಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುವ ಒಂದು ಸಣ್ಣ ಪರಂಪರೆಯೂ ಇದೆ. ಇದೀಗ ಮೋದಿಗೆ 75 ಆದರೆ.. ಅವರೂ ರಾಜಕೀಯ ನಿವೃತ್ತಿ ತೆಗೆದುಕೊಳ್ತಾರಾ.. ಎಂಬ ಪ್ರಶ್ನೆಗೆ, ಅಮಿತ್ ಶಾ ಅವರೇ ಇಲ್ಲ ಎಂದು ಉತ್ತರ ಕೊಟ್ಟಿದ್ದರು. ಅಕಸ್ಮಾತ್ ಮೋದಿ ರಾಜಕೀಯ ನಿವೃತ್ತಿ ತೆಗೆದುಕೊಂಡರೆ.. ಆಗ ಪ್ರಧಾನಿಯಾಗುವವರ ಲಿಸ್ಟಿನಲ್ಲಿ ಅಮಿತ್ ಶಾ ಹೆಸರೂ ಇದೆ. ಯೋಗಿ ಆದಿತ್ಯ ನಾಥ್ ಹೆಸರೂ ಇದೆ. ಇದೀಗ ನೋಡಿದರೆ.. ಅಮಿತ್ ಶಾ ಸಡನ್ ಆಗಿ ರಾಜಕೀಯ ನಿವೃತ್ತಿಯ ಮಾತು ಹೇಳಿದ್ದಾರೆ.
ಅಹಮದಾಬಾದ್ನಲ್ಲಿನ ಸಹಕಾರಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಮಿತ್ ಶಾ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ. ತಾವು ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಏನ್ಮಾಡಬೇಕು ಅಂದ್ಕೊಂಡಿದ್ದೀನಿ ಅನ್ನೋದನ್ನ ಹಂಚಿಕೊಂಡಿದ್ದಾರೆ.
ತಮ್ಮ ಉಳಿದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಗೆ ಮೀಸಲಿಡಲು ಬಯಸುತ್ತೇನೆ. ಈ ಮೂರು ವಿಚಾರಗಳ ಬಗ್ಗೆ ಅಧ್ಯಯನ ಮಾಡುವೆ ಅನ್ನೋ ಮೂಲಕ ಅಲ್ಲಿ ನೆರದಿದ್ದವರನ್ನೂ ಅಚ್ಚರಿಗೆ ತಳ್ಳಿದ್ದಾರೆ. ಅಮಿತ್ ಶಾ ಈ ನಿವೃತ್ತಿಯ ಮಾತನ್ನು ಉದ್ದೇಶ ಪೂರ್ವಕವಾಗಿಯೇ ಹೇಳಿದ್ದಾರಾ.. ಗೊತ್ತಿಲ್ಲ.
ಮೋದಿಯ ಯಶಸ್ಸಿನ ಹಿಂದೆ ಅಮಿತ್ ಶಾ ಪಾತ್ರವೂ ಇದೆ. ಗುಜರಾತ್ ಸಿಎಂ ಆಗಿದ್ದಾಗ ಗೃಹ ಸಚಿವರಾಗಿ, ಮೋದಿ ಪ್ರಧಾನಿಯಾಗುವ ಹಾದಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ, ಅದಾದ ನಂತರ ಕೇಂದ್ರ ಗೃಹ ಸಚಿವರಾಗಿ ಕೆಲಸ ಮಾಡಿರುವ ಅಮಿತ್ ಶಾ, ಬಿಜೆಪಿ ಮೇಲೆ ಈಗಲೂ ಹಿಡಿತ ಇಟ್ಟುಕೊಂಡಿದ್ದಾರೆ. ಅಧ್ಯಕ್ಷರಾಗಿರುವವರು ಶಾ ಮಾತನ್ನೇ ಕೇಳ್ತಾರೆ.
ಎಲೆಕ್ಷನ್ ಟೈಮಲ್ಲಿ ಈ ಹೆಸ್ರು ಕೇಳಿದ್ರೆ ಸಾಕು ಬಿಜೆಪಿ ಅಭ್ಯರ್ಥಿಗಳಿಗೆ ಭೀಮಬಲ ಸಿಕ್ಕಂತೆ ಆಗುತ್ತೆ. ಏಕೆಂದರೆ ಅಮಿತ್ ಶಾ ಕೈಲಿ ಮತ್ತು ತಲೆಯಲ್ಲಿ ಯಾವ್ಯಾವುದೋ ಚಿತ್ರ ವಿಚಿತ್ರ ಸೂತ್ರಗಳು, ಐಡಿಯಾಗಳು ರೌಂಡ್ ಹೊಡೀತಾನೇ ಇರ್ತವೆ. ಮ್ಯಾಜಿಕ್ ಮಾಡಿಯಾದ್ರೂ ಕಮಲ ಪಾಳಯದ ಚಾಣಕ್ಯ ತಮ್ಮನ್ನ ದಡ ಸೇರಿಸಿ ಬಿಡ್ತಾರೆ ಅನ್ನೋ ಅದಮ್ಯ ಆತ್ಮವಿಶ್ವಾಸ ಕೇಸರಿ ಕಲಿಗಳಿಗೆ ಇರುತ್ತೆ. ಅಮಿತ್ ಶಾ ಎಲ್ಲಿ ಎಂಟ್ರಿಕೊಡ್ತಾರೋ, ಅಲ್ಲಿ ಪ್ರತಿಪಕ್ಷದ ಸ್ಪರ್ಧಿಗಳಿಗೆ ನಡುಕ ಶುರು ಅಂತಲೇ ಅರ್ಥ. ಇತ್ತ ಅಧಿಕಾರದಲ್ಲೂ ಅಮಿತ್ ಶಕ್ತಿ ಪ್ರದರ್ಶನ ನಡೆದಿದೆ. ಚಂಡಮಾರುತವನ್ನ ಎದುರಿಸವಷ್ಟು ಸವಾಲಿದ್ರೂ ಆರ್ಟಿಕಲ್ 370 ರದ್ಧತಿಯನ್ನ ಯಶಸ್ವಿಯಾಗಿಸಿದ್ದು, ಶಾ ನಾಯಕತ್ವದಲ್ಲೇ.. ಇದು ಒಂದು ಲೆಕ್ಕವಷ್ಟೇ ಇಂಥಾ ಹಲವಿದೆ. ಅಮಿತ್ ಶಾ ಸಾಧನೆಯನ್ನ ನೆನೆಯುತ್ತಿರೋದಕ್ಕೆ ಕಾರಣ, ಅವರು ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿರೋದು.
ಪ್ರಧಾನಿ ಮೋದಿ ಬಳಿಕ ಅಮಿತ್ ಶಾ ಆ ದೊಡ್ಡ ಹುದ್ದೆ ಏರಬಹುದು ಅನ್ನೋ ಚರ್ಚೆಯಲ್ಲಿದೆ. ಈ ನಡುವೆ ಅಚ್ಚರಿ ಎಂಬಂತೆ ಅಮಿತ್ ಶಾ, ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡಿರೋದು ಬಹುದೊಡ್ಡ ಸುಂಟರಗಾಳಿ ಎಬ್ಬಿಸಿದೆ.ಆ ಸಮಯವಿನ್ನೂ ದೂರ ಇದೆ. ಆದ್ರೆ, ಚಾಣಕ್ಯನ ಹೆಜ್ಜೆ ಬಲ್ಲವಱರು ಅನ್ನೋ ರೀತಿ ಅಮಿತ್ ಶಾ ಮರ್ಮ ಬಲ್ಲವಱರು ಅಲ್ವಾ? ಅದರೊಳಗೊಂದು ತಂತ್ರ.. ಅದ್ದಕ್ಕೊಂದು ಮಂತ್ರ.. ಒಗ್ಗೂಡಿ ಒಂದು ಸೂತ್ರ ಬಹಿರಂಗವಾಗಲಬಹುದು. ಇದೇ ಚರ್ಚೆಯನ್ನ ರಾಜಕೀಯ ತಜ್ಞರು ಮುಂದಿಡ್ತಿದ್ದಾರೆ.
ಅಂದಹಾಗೆ ಕಾರ್ಯಕ್ರಮದಲ್ಲಿ ಅಮಿತ್ ಶಾ ಆಡಿದ ಮಾತುಗಳು ಇವು. ʻʻರಾಜಕೀಯ ನಿವೃತ್ತಿಯ ನಂತರದ ಜೀವನವನ್ನು ವೇದಗಳು, ಉಪನಿಷತ್ತುಗಳು ಮತ್ತು ನೈಸರ್ಗಿಕ ಕೃಷಿಯ ಅಧ್ಯಯನಕ್ಕೆ ಮೀಸಲಿಡಲು ನಿರ್ಧರಿಸಿದ್ದೇನೆ. ನೈಸರ್ಗಿಕ ಕೃಷಿ ಅನ್ನೋದು ವೈಜ್ಞಾನಿಕ ಪ್ರಯೋಗವಿದ್ದಂತೆ. ರಾಸಾಯನಿಕ ರಸಗೊಬ್ಬರ ಬಳಸಿ ಬೆಳೆದಿರುವ ಗೋಧಿ ಸೇವನೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೈಸರ್ಗಿಕ ಕೃಷಿ ದೇಹವನ್ನು ರೋಗ ಮುಕ್ತವಾಗಿಡಲು ಸಾಧ್ಯವಾಗುತ್ತದೆ. ಹಾಗಾಗಿ ನೈಸರ್ಗಿಕ ಕೃಷಿ ಅನ್ನೋದು ಪ್ರಯೋಗ. ನೈಸರ್ಗಿಕ ಪದ್ದತಿ ಅಳವಡಿಕೆ ಮಾಡಿಕೊಂಡರೆ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತದೆʼ ಎಂದು ಹೇಳಿಕೊಂಡಿದ್ದಾರೆ.



