ಸಂಕ್ರಾಂತಿಗೆ ರವಿಚಂದ್ರನ್ ಸಿನಿಮಾಗಳು ನಿಂತಿದ್ದೇ ನಿಂತದ್ದು. ಅದಾದ ಮೇಲೆ ಸಂಕ್ರಾಂತಿಯನ್ನು ಕನ್ನಡ ಚಿತ್ರರಂಗ ಪರಭಾಷೆಯವರಿಗೆ ಬಿಟ್ಟು ಕೊಟ್ಟು ದಶಕಗಳೇ ಆಗಿ ಹೋಗಿವೆ. ಈ ಬಾರಿಯೂ ಅಷ್ಟೆ, ಕಾಟೇರ ಇಲ್ಲದೇ ಹೋಗಿದ್ದರೆ ತೆಲುಗು, ತಮಿಳಿನ ಎದುರು ನಿಂತು ಹೂಂಕರಿಸುವ ತಾಕತ್ತಿನ ಒಂದು ಚಿತ್ರವೂ ಇರುತ್ತಿರಲಿಲ್ಲ.
ಈ ಬಾರಿಯ ಸಂಕ್ರಾಂತಿಗೆ ರಿಲೀಸ್ ಆಗಿದ್ದ ಚಿತ್ರಗಳಲ್ಲಿ ತೆಲುಗಿನ ಚಿತ್ರಗಳು ಹೆಚ್ಚು. ಮಹೇಶ್ ಬಾಬು-ಶ್ರೀಲೀಲಾ ನಟನೆಯ ಗುಂಟೂರು ಖಾರಂ, ನಾಗಾರ್ಜುನ-ಅಶಿಕಾ ರಂಗನಾಥ್ ನಟನೆಯ ನಾ ಸಾಮಿ ರಂಗ, ತಮಿಳಿನಲಿ ಧನುಷ್-ಶಿವಣ್ಣ ಕಾಂಬಿನೇಷನ್ನಿನ ಕ್ಯಾಪ್ಟನ್ ಮಿಲ್ಲರ್, ಶಿವಕಾರ್ತಿಕೇಯನ್ ಅಭಿನಯಿಸಿದ್ದ ಅಯಾಲನ್ ಸಿನಿಮಾಗಳು ರಿಲೀಸ್ ಆಗಿದ್ದವು. ಇವುಗಳನ್ನೆಲ್ಲ ಒಂದೇ ವಾಕ್ಯದಲ್ಲಿ ಹೇಳಬೇಕೇಂದರೆ.. ಕಾಟೇರ ವಂಡರ್.. ಗುಂಟೂರು ಖಾರಂ ಢಮಾರ್.. ಕ್ಯಾಪ್ಟನ್ ಮಿಲ್ಲರ್ ಸುಮಾರ್.. ಹನುಮಾನ್ ಆಹಾ..ಓಹೋ.. ಸೂಪರ್ ಮ್ಯಾನ್.
ತೆಲುಗಿನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಮಹೇಶ್ ಬಾಬು, ತ್ರಿವಿಕ್ರಂ ಹಾಗೂ ಶ್ರೀಲೀಲಾ ನಟನೆಯ ಗುಂಟೂರು ಖಾರಂ ಎರಡನೇ ದಿನವೇ ಢಮಾರ್ ಎನ್ನುವ ಸುದ್ದಿ ಬಂದಿದೆ. ಸಿನಿಮಾ ಏನೊ 100 ಕೋಟಿ ಕ್ಲಬ್ ಸೇರಿದ್ದರೂ ಮೊದಲ ದಿನ 70 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ಸಿನಿಮಾ ಎರಡನೇ ದಿನವೇ 13 ಕೋಟಿಗೆ ಕುಸಿದಿದೆ. 3ನೇ ದಿನದ ಕಲೆಕ್ಷನ್ ಇನ್ನೂ ಡಲ್ಲು ಹೊಡೆದು, ಢಮಾರ್ ಆಗುವ ಎಲ್ಲ ಸೂಚನೆಯೂ ಸಿಕ್ಕಿದೆ.
ಸಿನಿಮಾ ನೋಡಲು ಶಾರೂಕ್ ಖಾನ್ ಮುಂದಾಗಿದ್ದು, ಚಿತ್ರದ ಪ್ರಮೋಷನ್ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಚಿತ್ರದ ಕಲೆಕ್ಷನ್ ಎದ್ದೇಳುತ್ತಿಲ್ಲ. ಆಂಧ್ರ ಮತ್ತು ತೆಲಂಗಾಣದಲ್ಲಿಯೇ ಒಂದಷ್ಟು ಶೋಗಳನ್ನು ಕಟ್ ಮಾಡಲಾಗಿದೆ. ಕರ್ನಾಟಕದಲ್ಲಂತೂ ಭಾನುವಾರ ವೀಕೆಂಡ್ ಇದ್ದರೂ ಒಂದೇ ಒಂದು ಶೋ ಹೌಸ್ʻಫುಲ್ ಆಗಿಲ್ಲ ಎನ್ನುವ ಮಾತಿದೆ.
ಇದೇ ವೇಳೆ ಕರ್ನಾಟಕದಲ್ಲಿ ಕಾಟೇರನ ಅಬ್ಬರ ಕಂಟಿನ್ಯೂ ಆಗಿದೆ. ರಾಜ್ಯಾದ್ಯಂತ 400ಕ್ಕೂ ಹೆಚ್ಚು ಶೋಗಳಲ್ಲಿ ಸಿನಿಮಾ ರನ್ ಆಗುತ್ತಿದೆ. ಬೆಂಗಳೂರಿನಲ್ಲೇ 176 ಸ್ಕ್ರೀನ್ʻಗಳಲ್ಲಿ ಕಾಟೇರ ಪ್ರದರ್ಶನವಾಗುತ್ತಿದೆ. 3ನೇ ವಾರ ಹೌಸ್ʻಫುಲ್ ಅಬ್ಬರವಿಲ್ಲವಾದರೂ ಡೀಸೆಂಟ್ ಕಲೆಕ್ಷನ್ ಇದೆ. ವೀಕೆಂಡ್ ಕಲೆಕ್ಷನ್ ಜೋರಾಗಿದೆ. ಟೋಟಲ್ ಕಲೆಕ್ಷನ್ ಆಗಲೇ 160 ಕೋಟಿ ದಾಟಿದೆ.
ಇದರ ಮಧ್ಯೆ ಹನುಮಾನ ಸಿನಿಮಾ ವ್ಹಾವ್ ಎನ್ನುವಂತೆ ಕಲೆಕ್ಷನ್ ಮಾಡುತ್ತಿದೆ. ಸ್ಟಾರ್ ನಟ, ನಟಿಯರಿಲ್ಲದೇ ಬಂದ ಸಿನಿಮಾ ಪ್ರೊಡಕ್ಷನ್ ಕ್ವಾಲಿಟಿ, ವಿಭಿನ್ನ ಕಥೆ, ನಿರೂಪಣೆ ಹಾಗೂ ಅದ್ಧೂರಿತನದಿಂದ ಗಮನ ಸೆಳೆಯುತ್ತಿದೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಿಲೀಸ್ ಅದ ಚಿತ್ರವನ್ನು ಪ್ರೇಕ್ಷಕ ನೋಡಿದರೆ, ಆ ಹಣದಲ್ಲಿನ 5 ರೂಪಾಯಿ ರಾಮನ ಸೇವೆಗೆ ಹೋಗುತ್ತಿದೆ. ಇದೂ ಕೂಡಾ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಗಲು ಕಾರಣವಾಗಿದೆ. ಆದರೆ ಚಿತ್ರದ ಮೇಕಿಂಗ್ ಮತ್ತು ಕ್ವಾಲಿಟಿ, ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುವಂತಹ ಸೂಪರ್ ಮ್ಯಾನ್ ಹನುಮಾನ್ ಕಥೆ ಇಷ್ಟವಾಗಿದೆ.



