ಬಸನಗೌಡ ಪಾಟೀಲ್ ಯತ್ನಾಳರ ನಂತರ ಶಿವರಾಂ ಹೆಬ್ಬಾರ್ ಮತ್ತು ಎಸ್ ಟಿ ಸೋಮಶೇಖರ್ ಅವರನ್ನು ಬಿಜೆಪಿ, ಪಕ್ಷದಿಂದ ಹೊರಹಾಕಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಅವಧಿಗೆ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಉಚ್ಚಾಟನೆಗೊಂಡಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿಯ ಸ್ಥಾನ ಈಗ 62ಕ್ಕೆ ಕುಸಿದಿದೆ. 66 ಸ್ಥಾನ ಗೆದ್ದಿದ್ದ ಬಿಜೆಪಿಯ ಮೂವರು ಶಾಸಕರು ಪಕ್ಷದಿಂದ ಉಚ್ಚಾಟನೆಗೊಂಡಿದ್ದರೆ, ಒಬ್ಬ ಶಾಸಕ ಬಸವರಾಜ ಬೊಮ್ಮಾಯಿ ಸಂಸದರಾಗಿದ್ದಾರೆ. ಅವರ ಕ್ಷೇತ್ರ ಶಿಗ್ಗಾಂವಿಗೆ ನಡೆದ ಉಪಚುನಾವಣೆಯಲ್ಲಿ ಬೊಮ್ಮಾಯಿ ಮಗ ಸೋತು, ಆ ಕ್ಷೇತ್ರವೂ ಹೋಗಿದೆ. ಹೀಗಾಗಿ ಈಗ ಬಿಜೆಪಿಗೆ ಅಧಿಕೃತವಾಗಿ ಇರುವುದು 62 ಸ್ಥಾನ ಮಾತ್ರ.
ಹೆಬ್ಬಾರ್, STSಗೆ ನಷ್ಟವಾಯ್ತಾ..?
ಇಬ್ಬರು ಶಾಸಕರ ಮುಂದಿನ ರಾಜಕೀಯ ಭವಿಷ್ಯದ ಮೇಲೆ ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂದು ನೋಡಿದರೆ, ಅವರಿಬ್ಬರ ಹಾದಿ ಕ್ಲಿಯರ್ ಆಗಿದೆ. ಅಸಲಿಗೆ ಉಚ್ಚಾಟನೆ ಶಿಕ್ಷೆಯಿಂದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರಿಗೆ ವೈಯಕ್ತಿಕವಾಗಿ ಯಾವುದೇ ನಷ್ಟವಾಗಿಲ್ಲ. ಅನುಕೂಲವೇ ಆಗಿದೆ. ಎಸ್ ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್, ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಡಿಕೆ ಶಿವಕುಮಾರ್ ಜೊತೆಯಲ್ಲೂ ಒಳ್ಳೆಯ ಬಾಂಧವ್ಯ ಇದೆ. ಈ ಬಾರಿ ಎಲೆಕ್ಷನ್ ಆದ ಮೇಲೆ, ಗೆದ್ದರೂ.. ಇಬ್ಬರೂ ಕೂಡಾ ಬಹಿರಂಗವಾಗಿಯೇ ಕಾಂಗ್ರೆಸ್ ಜೊತೆಯಲ್ಲೇ ಇದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಎಸ್‌ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರ ವರಸೆ ಬದಲಾಗಿ, ಬಿಜೆಪಿಯವರಿಂದ ಅಂತರ ಕಾಯ್ದುಕೊಂಡಿದ್ದಷ್ಟೇ ಅಲ್ಲದೆ, ಸಿದ್ದು, ಡಿಕೆ ನಿವಾಸದಲ್ಲಿ ಕಾಣಿಸಿಕೊಳ್ಳೋಕೆ ಶುರು ಮಾಡಿದರು. ಬಿಜೆಪಿಯ ವಿರುದ್ಧ ಅಸಮಾಧಾವನ್ನು ಹೊರಹಾಕುತ್ತಿದ್ದರು. ರಾಜ್ಯಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಿಂತಿದ್ದರು. ಅಷ್ಟೇ ಅಲ್ಲದೆ ಗ್ಯಾರಂಟಿ ಯೋಜನೆಗಳ ಪರವಾಗಿ ತಮ್ಮ ಹೇಳಿಕೆಗಳನ್ನು ನೀಡಲು ಶುರುಮಾಡಿದರು. ಎಸ್ ಟಿ ಸೋಮಶೇಖರ್ ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿ ಪರವಾಗಿ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದರು. ಕೊನೆಗೂ ಅವರನ್ನು ಹೊರಹಾಕಲಾಗಿದೆ.
ಹೆಬ್ಬಾರ್, STSಗೆ ಉಚ್ಚಾಟನೆಯಿಂದ ಲಾಭವೇನು..?
ಇಬ್ಬರು ಶಾಸಕರಿಗೆ ಈಗಾಗಲೇ ತಮ್ಮ ಕ್ಷೇತ್ರ ಇತರ ಬಿಜೆಪಿ ಶಾಸಕರಿಗೆ ಹೋಲಿಕೆ ಮಾಡಿದರೆ ಹೆಚ್ಚಿನ ಅನುದಾನ ಸಿಕ್ಕಿದೆ. ಮುಂದಿನ ದಿನಗಳಲ್ಲೂ ಇಬ್ಬರು ಶಾಸಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆದುಕೊಳ್ಳುತ್ತಾರೆ. ಮುಂದಿನ ಮೂರು ವರ್ಷಗಳ ಕಾಲ ಇವರಿಗೆ ಅನುಕೂಲಗಳೇ ಆಗಲಿದೆ.
ಉಚ್ಚಾಟಿತ ಶಾಸಕರು ಫುಲ್ ಹ್ಯಾಪಿ
ಹೆಬ್ಬಾರ್, STS ಇಬ್ಬರೂ ಕೂಡಾ ಉಚ್ಚಾಟನೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಅವರನ್ನೇಕೆ ಉಚ್ಚಾಟನೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈಗ ನಿರ್ಬಯವಾಗಿ ಓಡಾಡಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇನ್ನೂ 10-12 ಶಾಸಕರು ಬಿಜೆಪಿ ಬಿಡುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ ಹೆಬ್ಬಾರ್, STS.
ಗೆದ್ದರಾ ವಿಜಯೇಂದ್ರ..?
ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಇದರಿಂದ ಗೆದ್ದರಾ ಎಂದರೆ ಹೌದು ಎನ್ನಬಹುದು. ಹಾಗೆ ನೋಡಿದರೆ ಹೆಬ್ಬಾರ್ ಆಗಲೀ, ಎಸ್ ಟಿ ಸೋಮಶೇಖರ್ ಅವರಾಗಲೀ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದವರಲ್ಲ. ಯತ್ನಾಳ್ ಅವರ ಬಣದ ಜೊತೆ ಹೋದವರೂ ಅಲ್ಲ. ಆದರೆ, ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದರು. ವಿಜಯೇಂದ್ರ-ಯಡಿಯೂರಪ್ಪ ಅವರನ್ನು ಟೀಕೆ ಮಾಡುತ್ತಿದ್ದವರನ್ನು ಉಚ್ಚಾಟಿಸಿ, ಪಕ್ಷದ ವಿರುದ್ಧ ಮಾತನಾಡಿದವರನ್ನು ಪಕ್ಷದಲ್ಲಿಟ್ಟುಕೊಂಡರೆ ಏನಾಗಬೇಕಿತ್ತೋ.. ಅದರಂತೆಯೇ ಮುಜುಗರ ಎದುರಿಸುತ್ತಿದ್ದರು ವಿಜಯೇಂದ್ರ. ಅದಕ್ಕೆ ತಕ್ಕಂತೆ ವಿಜಯೇಂದ್ರ ಈಗ ನಿಟ್ಟುಸಿರು ಬಿಟ್ಟಿದ್ದಾರೆ.



