ಸಚಿವ ಕೆಎನ್ ರಾಜಣ್ಣ (KN Rajanna) ಅವರ ಹೇಳಿಕೆ ರಾಜ್ಯ ಕಾಂಗ್ರೆಸ್`ನಲ್ಲಿ ಸಂಚಲನ ಸೃಷ್ಟಿಸಿದೆ. ಲಿಂಗಾಯತರಿಗೆ (Lingayath DCM) ಒಂದು, ದಲಿತರಿಗೆ ಒಂದು (Dalith DCM) ಹಾಗೂ ಮುಸ್ಲಿಂ (Muslim DCM) ಅಥವಾ ಅಲ್ಪಸಂಖ್ಯಾತರಿಗೆ ಒಂದು ಡಿಸಿಎಂ ಸೃಷ್ಟಿಸಬೇಕು ಎಂಬ ಹೇಳಿಕೆ ತಳಮಳ ಸೃಷ್ಟಿಸಿದೆ. ಸಹಜವೇ. ಸಿಎಂ ಆಗುತ್ತೇನೆ ಎಂದು ಕನಸು ಕಂಡು, ಪಕ್ಷವನ್ನೂ ಭವ್ಯ ಗೆಲುವಿಗೆ ಕೊಂಡೊಯ್ದ ಡಿಕೆ ಶಿವಕುಮಾರ್ (DK Shiva kumar), ಕೆಪಿಸಿಸಿ ಅಧ್ಯಕ್ಷರಾದರೂ (KPCC President) ಡಿಸಿಎಂ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯ್ತು. ಡಿಸಿಎಂ ಆಗುವಾಗಲೇ ಒಪ್ಪಿಕೊಳ್ಳುವಾಗಲೇ ತಾವೊಬ್ಬರೇ ಡಿಸಿಎಂ ಇರಬೇಕು ಎಂದು ಷರತ್ತು ವಿಧಿಸಿಯೇ ಡಿಸಿಎಂ ಆಗಿದ್ದರು ಡಿಕೆ. ಅಷ್ಟೇ ಅಲ್ಲ, ಸರ್ಕಾರದಲ್ಲಿ ತಾವು ಎಷ್ಟು ಪ್ರಮುಖ ಎಂಬುದನ್ನು ಸಾಬೀತು ಮಾಡುವುದಕ್ಕಾಗಿಯೇ ಸರ್ಕಾರದ ಯಾವುದೇ ಜಾಹೀರಾತುಗಳು, ಯೋಜನೆಗಳಲ್ಲಿ ತಮ್ಮ ಫೋಟೋ ಕಡ್ಡಾಯವಾಗಿರುವಂತೆ ನೊಡಿಕೊಂಡಿದ್ದಾರೆ ಡಿಕೆ. ತಾನು ಮುಂದಿನ ಸಿಎಂ ಕ್ಯಾಂಡಿಡೇಟ್ ಅನ್ನೋದನ್ನಂತೂ ಸಾಬೀತು ಮಾಡುತ್ತಿದ್ದಾರೆ. ಆದರೆ ಆ ಕನಸು ಮತ್ತು ಗುರಿಗೇ ಕೊಳ್ಳಿ ಇಟ್ಟಿದೆ ಕೆಎನ್ ರಾಜಣ್ಣ ಹೇಳಿಕೆ.
ಡಿಸಿಎಂ ಆಗುತ್ತಾರೋ ಬಿಡುತ್ತಾರೋ.. ಹೈಕಮಾಂಡಿಗೆ ಬಿಟ್ಟಿದ್ದು. ಆದರೆ ರೇಸಿನಲ್ಲಂತೂ ಲಿಂಗಾಯತ ಮುಖಂಡ ಸಚಿವ ಎಂಬಿ ಪಾಟೀಲ್ (MB Patil) , ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ (Satheesh Jarakiholi), ದಲಿತ ನಾಯಕ ಕೆಪಿಸಿಸಿಯ ಮಾಜಿ ಅಧ್ಯಕ್ಷ ಪರಮೇಶ್ವರ್ (Parameshwar), ಮುಸ್ಲಿಂ ಸಮುದಾಯದ ಐಕಾನ್ ಜಮೀರ್ ಅಹ್ಮದ್ (Zameer ahmad) ಈಗಾಗಲೇ ತಾವೂ ಆಕಾಂಕ್ಷಿಗಳು ಎಂದು ತೋರಿಸಿಕೊಳ್ಳುತ್ತಿದ್ದಾರೆ.
ಸಂಪುಟದಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಪರಮೇಶ್ವರ್, ಜಾರಕಿಹೊಳಿ ಇಬ್ಬರೂ ಮಾಡಿದರೆ ತಪ್ಪೇನು? ಇದರಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುತ್ತಿದ್ದರೆ, ಆ ವಿಷಯದ ಬಗ್ಗೆ ಮಾತೂ ಬೇಡ, ಚರ್ಚೆಯೂ ಬೇಡ ಎನ್ನುವುದು ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ ಮೊದಲಾದವರ ವಾದ. ಹೈಕಮಾಂಡ್ ಏನೋ ಚರ್ಚೆಯೇ ಬೇಡ ಎನ್ನುತ್ತಿದೆ.
ರಾಜಕೀಯ ಲೆಕ್ಕಾಚಾರವೇ ಬೇರೆ :
ಕಾಂಗ್ರೆಸ್ಸಿನ ಮೂಲಗಳ ಪ್ರಕಾರ ಇದು ಹರಿಪ್ರಸಾದ್ ಬಿಟ್ಟ ಬಾಣಕ್ಕೆ ಸಿದ್ದು ಬಣ ಕೊಟ್ಟಿರುವ ಎದಿರೇಟು. ಹರಿಪ್ರಸಾದ್ ಪದೇ ಪದೇ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿ ಕೆಣಕುತ್ತಲೇ ಹೋದರು. ಅವರು ಡಿಕೆಶಿ ಆಪ್ತರಲ್ಲಿದ್ದ ನಾಯಕ. ಹೀಗಾಗಿ ಸಿದ್ದು ಬಣದವರು ಇನ್ನೂ ಮೂರು ಡಿಸಿಎಂ ಪೋಸ್ಟಿಗೆ ಬೇಡಿಕೆ ಇಟ್ಟು ಡಿಕೆಶಿಯವರನ್ನು ಕಟ್ಟಿ ಹಾಕುವಂತೆ ನೋಡಿಕೊಂಡರು. ಅಂದರೆ ಹರಿಪ್ರಸಾದ್ ಅವರಿಗೆ ಬಿಸಿ ತಟ್ಟಬೇಕೆಂದರೆ ಡಿಕೆಶಿ ಗುರಿಯಾಗಬೇಕು ಅನ್ನೋದು ಅವರ ತಂತ್ರ ಎಂದೇ ಹೇಳಲಾಗುತ್ತಿದೆ. ಆದರೆ ರಾಜಕೀಯ ಪ್ರತಿ ಪಟ್ಟುಗಳನ್ನ ಅರಿತಿರುವ ಡಿಕೆ ಶಿವಕುಮಾರ್, ಯಾವ ಸಮಯದಲ್ಲಿ ಯಾರಿಗೆ ಮತ್ತು ಎಲ್ಲಿ ಏಟು ಕೊಡಬೇಕು ಎನ್ನುವುದನ್ನ ಅರಿತಿದ್ದಾರೆ. ಇದೇ ಕಾರಣಕ್ಕೆ ನನ್ನದು ಒಂದೇ ಬಣ, ಅದು ಕಾಂಗ್ರೆಸ್ ಬಣ ಎನ್ನುವ ಮೂಲಕ ಬಣ ರಾಜಕೀಯ ಮಾಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಎರಡನೇ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಸಿಎಂ ಆಗಲೇಬೇಕು ಎಂಬ ಪಟ್ಟಿನಿಂದ ಹಿಂದೆ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು. ಎದುರಾಳಿಗಳು ತಮ್ಮ ವಿರುದ್ಧ ದಾಳ ಉರುಳಿಸಿದ್ರೆ ಡಿಕೆ. ಶಿವಕುಮಾರ್ ಕೈ ಚೆಲ್ಲಿ ಕುರುವ ಮಾತೇ ಇಲ್ಲ. ಅತ್ತ ಇನ್ನಿತರ ನಾಯಕರು ಸಹ ಪಟ್ಟು ಬಿಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಒಳಗೆ ರಾಜಕೀಯದ ಸುಂಟರಗಾಳಿಯೊಂದು ಸದ್ದಿಲ್ಲದೇ ಸುರಳಿ ಸುತ್ತುತ್ತಿದೆ. ಅಷ್ಟೇ ಅಲ್ಲ, ಕ್ಯಾಬಿನೆಟ್ ಸಭೆಯಲ್ಲಿಯೇ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಎಂ.ಬಿ. ಪಾಟೀಲ್ ಮತ್ತಿತರ ಸಂಪುಟ ಸಹೋದ್ಯೋಗಿಗಳು ಅನಪೇಕ್ಷಿತ ಎಂದು ಆಕ್ಷೇಪಿಸಿದ್ದಾರೆ. ಗೇಮ್ ಶುರುವಾಗಿದೆ. ಅಖಾಡವಷ್ಟೇ ಚೇಂಜ್. ಗುರಿ ಒಂದೇ. ಒಂದು ಬಣಕ್ಕೆ ಸಿದ್ದರಾಮಯ್ಯ. ಇನ್ನೊಂದು ಬಣಕ್ಕೆ ಡಿಕೆ ಶಿವಕುಮಾರ್.



