ರಾಜಕೀಯದಲ್ಲಿ ಯಾವತ್ತೂ ಇದಮಿಥ್ಥಂ ಎಂಬಂತೆ ವಾತಾವರಣ ಇರುವುದಿಲ್ಲ. ೨೦೧೯ರಲ್ಲಿ ಜೋಡೆತ್ತುಗಳಂತಿದ್ದ ಕುಮಾರಸ್ವಾಮಿ-ಡಿಕೆ ಶಿವಕುಮಾರ್.. 2024ರಲ್ಲಿ ಪರಸ್ಪರ ಶತ್ರುಗಳಂತೆ ಕಿತ್ತಾಡುತ್ತಿದ್ಧಾರೆ. 2019ರಲ್ಲಿ ಯಾವ ಕುಮಾರಸ್ವಾಮಿ ಪಡೆಯ ವಿರುದ್ಧ ಗೆದ್ದರೋ.. ಅವರನ್ನೇ ಈಗ ಬೆಂಬಲಿಸಬೇಕಾದ ಅನಿವಾರ್ಯತೆ ಈಗ ಬಿಜೆಪಿ ಸದಸ್ಯೆ ಆಗಿರುವ ಸುಮಲತಾ ಅಂಬರೀಷ್ ಅವರದ್ದು. ಹೀಗಾಗಿಯೇ ರಾಜಕೀಯದಲ್ಲಿ ಸುಮಲತಾ ಅವರು ಈ ಬಾರಿ ವಿಶೇಷ ದಾಳ ಉರುಳಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗ್ತಾ ಇದೆ.
ನಟ ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಸ್ಟಾರ್ ಚಂದ್ರು ಪರವಾಗಿ ದರ್ಶನ್ ಕ್ಯಾಂಪೇನ್ ಮಾಡುತ್ತಿದ್ದಾರೆ. ದರ್ಶನ್ ಅವರು ತಾಯಿ ಎಂದೇ ಗೌರವಿಸುವ ಸುಮಲತಾ ಅಂಬರೀಷ್ ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹೀಗಾಗಿ, ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಕಾರಣ.. ಕಳೆದ ಬಾರಿ ಸುಮಲತಾ ಅವರು ಕುಮಾರಸ್ವಾಮಿ ಅವರ ಮಗನ ವಿರುದ್ಧವೇ ನಿಂತು ಪಕ್ಷೇತರರಾಗಿ ಗೆದ್ದಿದ್ದರು. ಆದರೆ.. ಬದಲಾದ ಸನ್ನಿವೇಶದಲ್ಲಿ ಕುಮಾರಸ್ವಾಮಿಯವರೇ ಈ ಬಾರಿ ಮಂಡ್ಯದಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿ. ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಹೀಗಾಗಿಯೇ ದರ್ಶನ್, ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡುತ್ತಿರುವ ಸ್ಟಾರ್ ಚಂದ್ರು ಅವರ ಪರ ಪ್ರಚಾರ ಮಾಡಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಾನು ಪಕ್ಷದ ಪರ ಬರುವುದಿಲ್ಲ, ನಾನು ವ್ಯಕ್ತಿ ಪರ. ಐದು ವರ್ಷಗಳ ಹಿಂದೆ ನರೇಂದ್ರಣ್ಣ ಮಾಡಿದ ಸಹಾಯ ನೆನಪಿಸಿಕೊಳ್ಳುತ್ತೇನೆ ಎಂದಿರುವ ದರ್ಶನ್ ಸುಮಲತಾಗೆ ಮಂಡ್ಯ ಸೀಟ್ ಸಿಕ್ಕಿಲ್ಲ ಎಂದರೆ ನಮ್ಮ ಪರ ನೀವು ಪ್ರಚಾರ ಮಾಡಬೇಕು ಎಂದು ಉದಯ್ ಗೌಡ್ರು ಕೇಳಿದ್ದರು. ಮೊದಲು ಕರೆದರು ಎನ್ನುವ ಕಾರಣಕ್ಕೆ ಪ್ರಚಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಮಾಧ್ಯಮದವರು ಏನೇನೋ ಹಾಕಿದ್ರೆ ತುಂಬಾ ಕಷ್ಟ ಆಗುತ್ತದೆ ಎಂದು ದರ್ಶನ್ ಅವರು ಸ್ಪಷ್ಟನೆ ಕೊಟ್ಟಿದ್ಧಾರೆ. ಸುಮಲತಾ ಅವರು ಬಿಜೆಪಿ ಸೇರಿದ್ದರೂ.. ಮಂಡ್ಯದಲ್ಲಿ ಪ್ರಚಾರ ನಡೆಸುತ್ತಿಲ್ಲ. ಸದ್ಯ ಅವರು ಸೈಲೆಂಟ್ ಆಗಿದ್ದಾರೆ.
ಹಲಗೂರು, ಹುಸ್ಕೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ದರ್ಶನ್ ಪ್ರಚಾರ ಮಾಡಿದ್ದಾರೆ. ಮಂಡ್ಯದ ಸ್ವಾಭಿಮಾನ ಉಳಿಸಲು ದರ್ಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದಾರೆ. ಅವರ ಪ್ರಚಾರದಿಂದ ಕಾಂಗ್ರೆಸ್‌ಗೆ ವಿಜಯಮಾಲೆ ಮಂಡ್ಯದಲ್ಲಿ ದೊರೆಯಲಿದೆ ಎನ್ನುವುದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಮತ್ತು ಉದಯ್ ಗೌಡರ ಮಾತು. ದರ್ಶನ್ ಅಭಿಮಾನಿಗಳ ಶಕ್ತಿ ಕಾಂಗ್ರೆಸ್‌ಗೆ ಸಿಗಬೇಕು. ಆದ್ದರಿಂದ ನಮ್ಮ ಪಕ್ಷದ ಹಲವಾರು ಗ್ಯಾರಂಟಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎನ್ನುತ್ತಿದ್ದಾರೆ.
ಆದರೆ.. ಸುಮಲತಾ ಅವರೀಗ ಬಿಜೆಪಿಯಲ್ಲಿದ್ದಾರೆ. ಸುಮಲತಾ ಅವರ ಗ್ರೀನ್ ಸಿಗ್ನಲ್ ಇಲ್ಲದೆ ದರ್ಶನ್ ಈ ರೀತಿ ಪ್ರಚಾರ ಮಾಡುವವರಲ್ಲ ಎನ್ನುವುದು ಕೆಲವರ ವಾದ. ದರ್ಶನ್ ಮೊದಲಿನಿಂದಲೂ ಇರುವುದೇ ಹಾಗೆ.. ಎಲ್ಲ ಪಕ್ಷಗಳಲ್ಲಿಯೂ ಅವರಿಗೆ ಸ್ನೇಹಿತರಿದ್ಧಾರೆ. ಸ್ನೇಹಿತರ ಪರವಾಗಿ ಪ್ರಚಾರ ಮಾಡ್ತಾರೆ. ಪಕ್ಷದ ಪರವಾಗಿ ಅಲ್ಲ ಎನ್ನುವುದು ಅಭಿಮಾನಿಗಳ ವಾದ.
ಸ್ಟಾರ್ ಚಂದ್ರು ಗೆದ್ದರೆ.. ಮುಂದಿನ ಕಥೆ ವಿಭಿನ್ನವಾಗಿರಲಿದೆ. ಸೋತರೆ..????



