1998ನೇ ಇಸವಿ. ಅರ್ಥವಾಗದ ರೀತಿಯಲ್ಲಿ ಕಾಣುತ್ತಿದ್ದ ಚಿತ್ರ ವಿಚಿತ್ರ ಪೋಸ್ಟರುಗಳು. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನು. ಒಂದ್ಸಲ ನೋಡಿದ್ರೆ ಅರ್ಥ ಆಗಲ್ಲ ಕಣ್ರಿ ಎನ್ನುವವರು ಒಂದ್ ಕಡೆ ಆದರೆ.. ಅರ್ಥ ಆಗಲಿಲ್ಲ ಅಂದ್ರೆ.. ಬುದ್ದಿವಂತರೇ ಅಲ್ಲ ಎಂಬ ಭಾವನೆ ಇನ್ನೂ ಕೆಲವರದ್ದು. ತಲೆಗ್ ಹುಳ ಬಿಡ್ತಾನೆ.. ಕಥೆ ಹೆಂಗೆಂಗೋ ಹೋಗುತ್ತೆ ಅನ್ನೋ ಪ್ರೇಕ್ಷಕರು.. ಮತ್ತೆ ಮತ್ತೆ ಹೋಗಿ ಸಿನಿಮಾ ನೋಡಿದರು.
ಆಗಿನ್ನೂ ಥಿಯೇಟರುಗಳಲ್ಲಿ ಟಿಕೆಟ್ ರೇಟು ಬೆಂಗಳೂರಿನಲ್ಲೂ 100 ರೂ. ಇರಲಿಲ್ಲ. ಬೆಂಗಳೂರಿನಲ್ಲಿ ಆಗ ಬಾಲ್ಕನಿ ಟಿಕೆಟ್ ದರ ಗರಿಷ್ಠ 70-80 ರೂ. ಇತ್ತು. ಆದರೆ.. ಆ ಸಿನಿಮಾ ದುಡಿದದ್ದು 20 ಕೋಟಿ. ಬಜೆಟ್ಟು ಜಸ್ಟ್ 1 ಕೋಟಿ. ಅಂದರೆ.. ಒಂದಕ್ಕೆ 20 ಪಟ್ಟು ಲಾಭ.
ಎ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ದಿ ಎಂಡ್ ಟೈಟಲ್, ಗಣೇಶನನ್ನೇ ಬಾವಿಗೆ ಹಾಕಿ ಐ ಆಮ್ ಗಾಡ್.. ಗಾಡ್ ಈಸ್ ಗ್ರೇಟ್ ಡೈಲಾಗ್, ಸೋಮಾರಿಗಳಿಗೆಲ್ಲ ಗುಂಡಿಟ್ಟು ಕೊಲ್ಲೋ ಹೀರೋ, ಚಿತ್ರ ವಿಚಿತ್ರ ಪೋಸ್ಟರುಗಳು.. ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್.. ಎ ಚಿತ್ರವನ್ನು ಕನ್ನಡ ಪ್ರೇಕ್ಷಕ ಎಂದೆಂದಿಗೂ ಮರೆಯೋಕೆ ಸಾಧ್ಯವಿಲ್ಲ. ಆ ಚಿತ್ರ ಇದೀಗ ರಿ-ರಿಲೀಸ್ ಆಗುತ್ತಿದೆ.
ಚಿತ್ರದ ಹೀರೋಯಿನ್ ಚಾಂದಿನಿ. ಆರಂಭದಲ್ಲಿ ಮುಗ್ಧೆಯಾಗಿ ನಟಿಸುವ ಚಾಂದಿನಿ, ಹೆಂಗಿತ್ತು ಸರ್ ನನ್ ಆಕ್ಟಿಂಗ್ ಎಂದು ಕೇಳಿದಾಗ ಪ್ರೇಕ್ಷಕ ಶಾಕ್ ಆಗುತ್ತಾನೆ. ಆದರೆ.. ಅದೇ ಚಾಂದಿನಿ ಡೈರೆಕ್ಟರ್ ಸೂರ್ಯ (ಉಪೇಂದ್ರ ಪಾತ್ರದ ಹೆಸರು)ನ ದಿಕ್ಕು ತಪ್ಪಿಸಲು ಬಂದ ಹುಡುಗಿ ಎಂದಾಗ ಮತ್ತೊಂದು ಶಾಕ್. ಅದಾದ ಮೇಲೆ ಆಕೆ ಸೂರ್ಯನ ಮೇಲೆ ನಡೆಸುವ ದೌರ್ಜನ್ಯ ನೋಡುವ ಪ್ರೇಕ್ಷಕ ಚಾಂದಿನಿಯನ್ನೂ ಛೀಥೂ ಎಂದು ಬೈದುಕೊಳ್ಳುತ್ತಾನೆ. ಆದರೆ.. ಕ್ಲೈಮಾಕ್ಸ್ ಹೊತ್ತಿಗೆ ಅದೇ ಚಾಂದಿನಿ ದುಷ್ಟರ ಬಲಿಪಶು. ತಾನು ಮನಸಾರೆ ಪ್ರೀತಿಸಿದ್ದ ಸೂರ್ಯನನ್ನು ದುಷ್ಟರ ಸಂಚಿನಿಂದ ಹೊರ ತರುವುದಕ್ಕೆಂದೇ ಇಷ್ಟೆಲ್ಲ ನಾಟಕ ಮಾಡಿದಳು ಎಂದು ಗೊತ್ತಾದಾಗ ಅದೇ ಚಾಂದಿನಿಯ ಬಗ್ಗೆ ಅಯ್ಯೋ ಪಾಪ ಎಂದುಕೊಳ್ತಾನೆ ಪ್ರೇಕ್ಷಕ.
ಚಿತ್ರದ ಒಂದೊಂದು ದೃಶ್ಯವೂ ನಟಿಸುವುದಕ್ಕೆ ಚಾಲೆಂಜ್ ಆಗಿದ್ದ ಸಿನಿಮಾದಲ್ಲಿ ನಟಿಸಿದ್ದ ಚಾಂದಿನಿಗೆ ಅದು ಮೊದಲ ಸಿನಿಮಾ. ಚಾಂದಿನಿ ಈಗ ಇರೋದು ಅಮೆರಿಕದಲ್ಲಿ. ಪಿಹೆಚ್ʻಡಿ ಮಾಡಿರುವ ಚಾಂದಿನಿ, ಅಲ್ಲೀಗ ಉಪನ್ಯಾಸಕಿಯಾಗಿದ್ದಾರೆ. ಸಿನಿಮಾಗಳಿಂದ ದೂರ ದೂರ.
ಎ ಚಿತ್ರದ ನಂತರ ನನ್ನ ಗ್ರಾಫ್ ಹೇಗೆಲ್ಲ ಚೇಂಜ್ ಆಯಿತು ಎನ್ನುವುದೇ ಒಂದು ಅಚ್ಚರಿ. ಸ್ಕೂಲಿನಲ್ಲಿ ಓದುತ್ತಿದ್ಧಾಗ ಬ್ಯೂಟಿ ಸ್ಪರ್ಧೆಗೆ ನನ್ನ ಫೋಟೋಗಳನ್ನು ಕೊಟ್ಟಿದ್ದೆ. ಪ್ರಶಸ್ತಿಯನ್ನೂ ಗೆದ್ದೆ. ಆ ಎರಡು ಫೋಟೋಗಳು ಎ ಚಿತ್ರದ ನಾಯಕಿಯ ಪಾತ್ರಕ್ಕೆ ಹುಡುಕುತ್ತಿದ್ದ ಉಪೇಂದ್ರರ ಕೈಗೆ ಸಿಕ್ಕವು. ಫೋಟೋ ನೋಡಿದವರೇ.. ಇವರೇ ನನ್ನ ಚಿತ್ರಕ್ಕೆ ಹೀರೋಯಿನ್ ಎಂದು ಸೆಲೆಕ್ಟ್ ಮಾಡಿದರು.
ಪ್ರೀತಿಯನ್ನೇ ಪರೀಕ್ಷೆಗೆ ಒಡ್ಡುವ ಆ ಲವ್ ಸ್ಟೋರಿ ಇವತ್ತಿಗೂ ಹೊಸದಾಗಿಯೇ ಕಾಣುತ್ತೆ. ಎ ರೀ-ರಿಲೀಸ್ ಆಗುತ್ತಿರುವುದನ್ನು ನಾನು ಸೆಲಬ್ರೇಟ್ ಮಾಡುತ್ತಿದ್ಧೇನೆ. ಎ ನಂತರ ನಾನು ಬೇರೆ ಬೇರೆ ಭಾಷೆಯಲ್ಲಿನ ಚಿತ್ರಗಳೂ ಸೇರಿ ಒಂದಿಪ್ಪತ್ತು ಸಿನಿಮಾಗಳಲ್ಲಿ ನಟಿಸಿರಬಹುದು. ಆದರೆ.. ಅಭಿಮಾನಿಗಳು ಇವತ್ತಿಗೂ ನನ್ನನ್ನು ಗುರುತಿಸುವುದು ಎ ಚಿತ್ರದ ಚಾಂದಿನಿ ಪಾತ್ರದ ಮೂಲಕ. ಸಿನಿಮಾ ಬಂದು ಹೋಗಿ ಇಷ್ಟು ವರ್ಷಗಳಾಗಿದ್ದರೂ.. ಜನ ನೆನಪಿಸಿಕೊಳ್ತಾರೆ. ಬೆಂಗಳೂರಿನಲ್ಲಿ ಯಾರಾದರೂ ಎದುರಿಗೆ ಸಿಕ್ಕಾಗ ಎ ಚಿತ್ರದ ಒಂದೊಂದು ಡೈಲಾಗ್ʻನ್ನೂ ಹೇಳ್ತಾರೆ. ಅಭಿಮಾನಿಗಳು ಹಾಗೆಲ್ಲ ಹೇಳುವಾಗ ಒಮ್ಮೊಮ್ಮೆ ಕಣ್ಣೀರು ಬಂದಿದ್ದೂ ಇದೆ ಎಂದೆಲ್ಲ ಹೇಳಿಕೊಂಡಿರುವ ಚಾಂದಿನಿ, ಚಿತ್ರಲೋಕ ವೀರೇಶ್ ಅವರು ನನ್ನ ಮೊದಲ ಫೋಟೋ ಸೆಷನ್ ಮಾಡಿದ್ದ ಕ್ಷಣಗಳನ್ನೂ ನೆನಪಿಸಿಕೊಂಡಿದ್ಧಾರೆ.
ಅವತ್ತು ಹೇಗಿದ್ದೇನೋ.. ಇವತ್ತಿಗೂ ಹಾಗೆಯೇ ಇದ್ದೇನೆ. ಇಷ್ಟೆಲ್ಲ ಅಭಿಮಾನಿಗಳ ಪ್ರೀತಿಯನ್ನು ನೋಡಿದಾಗ.. ಎ ಚಿತ್ರದ ಫೇಮಸ್ ಡೈಲಾಗ್ ಗಾಡ್ ಈಸ್ ಗ್ರೇಟ್ ಎನ್ನುವುದು ನೆನಪಾಗುತ್ತದೆ. ದೇವರು ಪ್ರತಿಯೊಬ್ಬರಿಗೂ ಒಂದೊಂದು ಪ್ಲಾನ್ ಮಾಡಿದ್ಧಾನೆ. ನಾವು ದೇವರು ಹೇಳಿದ್ದನ್ನು ಕೇಳಿಸಿಕೊಳ್ಳಬೇಕಷ್ಟೆ ಎಂದಿದ್ದಾರೆ ಚಾಂದಿನಿ.
ಎ ಚಿತ್ರ ರಿಲೀಸ್ ಆಗಿದ್ದು 1998ರ ಫೆಬ್ರವರಿ 12ನೇ ತಾರೀಕು. ಇದೇ ಮೇ 17ಕ್ಕೆ ರೀ-ರಿಲೀಸ್ ಆಗುತ್ತಿರುವ ಎ ಚಿತ್ರಕ್ಕೆ ಖರ್ಚಾಗಿದ್ದುದು 1 ಕೋಟಿ. ಆಗಿನ ಕಾಲಕ್ಕೆ 20 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದ್ದ ಸಿನಿಮಾ. ಉಪ್ಪಿ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಸಿನಿಮಾಗೆ ಬಿ.ಜಗನ್ನಾಥ್ ಮತ್ತು ಬಿಜಿ ಮಂಜನಾಥ್ ಎಂಬುವವರು ನಿರ್ಮಾಪಕರಾಗಿದ್ಧರು. ಯಶ್ ರಾಜ್ ವಿತರಣೆ ಮಾಡಿದ್ದರು. ಆ ಚಿತ್ರದ ಮೂಲಕವೇ ಗುರುಕಿರಣ್ ಮ್ಯೂಸಿಕ್ ಡೈರೆಕ್ಟರ್ ಆಗಿ ಬಂದು ಖ್ಯಾತರಾದರು.



