ಭಾರತದಲ್ಲಿ ಚಿತ್ರ ವಿಚಿತ್ರ ಕಥೆಗಳಿರೋ ಸಿನಿಮಾಗಳಾಗುತ್ತವೆ. ಬಾಂಬ್ ದಾಳಿ, ಭಯೋತ್ಪಾದಕರ ಅಟ್ಟಹಾಸ ನಡೆದಾಗ ಆ ಘಟನೆಯ ಒಳಗಿನ ʻಮಾನವೀಯ ಮುಖʼಗಳನ್ನು ಅನಾವರಣ ಮಾಡುವ, ದಲಿತರ ಮೇಲೆ ನಡೆದ ದೌರ್ಜನ್ಯದ ಕಥೆ ಹೇಳುವ, ಹಿಂದೂ-ಮುಸ್ಲಿಂ ಭಾವೈಕ್ಯತೆ, ಪ್ರೀತಿಯ ಕಥೆ ಹೇಳೋ ಸಿನಿಮಾಗಳು, ಮುಸ್ಲಿಮರ ಮೇಲೆ ವಿನಾಕಾರಣ ನಡೆದ ದೌರ್ಜನ್ಯದ ಕಥೆ ಹೇಳುವ ಸಿನಿಮಾಗಳೂ ಬಂದಿವೆ. ಆದರೆ.. ಮುಸ್ಲಿಮರು ಇತಿಹಾಸದಲ್ಲಿ ನಡೆಸಿದ ನರಮೇಧದ ಕಥೆಗಳನ್ನು ಹೇಳುವ ಸಿನಿಮಾಗಳು ಮಾತ್ರ ಬಂದಿಲ್ಲ.
ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದಿದ್ದು, 3 ದಶಕಗಳ ನಂತರ. ಕೇರಳ ಸ್ಟೋರಿ ಸಿನಿಮಾ ಬಂದಿದ್ದು ಇತ್ತೀಚೆಗೆ. ಈಗ ರಜಾಕಾರ್ ಸಿನಿಮಾ ಬರುತ್ತಿದೆ.. ಘಟನೆ ನಡೆದ 75 ವರ್ಷಗಳ ನಂತರ. ಹೌದು.. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆಗಸ್ಟ್ 15, 1947ರಲ್ಲಾದರೆ, ನಮ್ಮದೇ ಕರ್ನಾಟಕದ ಹೃದಯವಾಗಿರುವ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1948ರ ಸೆಪ್ಟೆಂಬರ್ 17ರಂದು. ಹಾಗಾದರೆ.. ಆ ಸುದೀರ್ಘ ಅವಧಿಯ ನಡುವೆ ನಡೆದದ್ದೇನು ಎಂಬ ರಕ್ತಸಿಕ್ತ ಇತಿಹಾಸವನ್ನು ಹೇಳೋಕೆ ಹೊರಟಿರುವ ಸಿನಿಮಾ ರಜಾಕಾರ್. ಆ ಸಿನಿಮಾ ಕೋರ್ಟ್ ಮೆಟ್ಟಿಲೇರಿ, ಕೊನೆಯ ಕ್ಷಣದಲ್ಲಿ ಸಿನಿಮಾ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇಷ್ಟಕ್ಕೂ ರಜಾಕಾರ್ ಚಿತ್ರದ ಕಥೆ ಏನು..?
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಹಲವು ರಾಜರು ಭಾರತದ ಒಕ್ಕೂಟಕ್ಕೆ ಸೇರಲು ಒಪ್ಪಿದರು. ಆದರೆ, ಕೆಲವೇ ಕೆಲವರು ವಿರೋಧಿಸಿದ್ದರು. ಅದರಲ್ಲಿ ಹೈದರಾಬಾದ್ ನಿಜಾಮರೂ ಇದ್ಧಾರೆ. ನಿಜಾಮರಿಗೆ ಭಾರತಕ್ಕೆ ಸೇರುವುದು ಇಷ್ಟವಿರಲಿಲ್ಲ. ಪಾಕಿಸ್ತಾನಕ್ಕೆ ಸೇರುವ ಮನಸ್ಸು ಹೊಂದಿದ್ದರು. ಹೀಗಾಗಿಯೇ.. ಸ್ಥಳೀಯ ಮಟ್ಟದಲ್ಲಿ ವಿರೋಧವೂ ಎದ್ದಿತ್ತು. ಆ ವಿರೋಧವನ್ನು ಮಟ್ಟ ಹಾಕಲು ರಕ್ತಸಿಕ್ತ ಇತಿಹಾಸವನ್ನೇ ಬರೆಸಿದ ಹೈದರಾಬಾದ್ ನಿಜಾಮ. ರಜಾಕಾರರ ಸೇನೆಯನ್ನು ಹಳ್ಳಿ ಹಳ್ಳಿಗಳಿಗೆ ನುಗ್ಗಿಸಿದ.
ಜನಮತಗಣನೆ ನಡೆದರೆ ಹಿಂದೂಗಳಿದ್ದರೆ ಗೆಲ್ಲುವುದು ಸಾಧ್ಯವಿಲ್ಲ ಎಂದರಿತ ನಿಜಾಮ, ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡಿಸಿದ. ಸಾವಿರಾರು ಕೊಲೆಗಳಾದವು. ಅತ್ಯಾಚಾರಗಳಾದವು. ಪುಟ್ಟ ಪುಟ್ಟ ಮಕ್ಕಳನ್ನೂ ಬಿಡಲಿಲ್ಲ. ಲೂಟಿಗಳಾದವು. ವಿರೋಧಿಸಿದ ಜನರಿಗೆ ಜೀವಂತವಾಗಿ ಬೆಂಕಿಯಿಟ್ಟರು. ನೇಣು ಹಾಕಿದರು. ಕೊನೆಗೆ ಸರ್ದಾರ್ ವಲ್ಲಭಬಾಯಿ ಪಟೇಲರು ಸೈನ್ಯವನ್ನು ನುಗ್ಗಿಸಿ ರಜಾಕಾರರನ್ನು ಸದೆಬಡಿದರು. ಹೈದರಾಬಾದ್ ಕರ್ನಾಟಕದಲ್ಲಿದ್ದ ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ವಿಜಯನಗರ ಜಿಲ್ಲೆಯ 50ಕ್ಕೂ ಹೆಚ್ಚು ತಾಲೂಕುಗಳು ಭಾರತಕ್ಕೆ ಸೇರಿದ್ದು ಹಾಗೆ. ಆದರೆ.. ಹೈದರಾಬಾದ್ ಕರ್ನಾಟಕ ವಿಮೋಚನೆಯ ದಿನಾಚರಣೆ ಮಾಡುತ್ತಾರದರೂ.. ಇತಿಹಾಸದ ರಜಾಕಾರರು ಸೃಷ್ಟಿಸಿದ್ದ ರಕ್ತಸಿಕ್ತ ಇತಿಹಾಸವನ್ನು ಹೇಳುವುದಿಲ್ಲ. ಅದೇಕೋ ಗೊತ್ತಿಲ್ಲ. ಇತಿಹಾಸದ ಅರ್ಧ ಸತ್ಯವನ್ನೇ ಇವತ್ತಿಗೂ ಹೇಳಲಾಗುತ್ತಿದೆ. ಆ ಕಥೆಯನ್ನು ಹೇಳಲು ಬಂದಿರುವ ಸಿನಿಮಾ ರಜಾಕಾರ್.
ರಜಾಕಾರರ ದಾಳಿಯಲ್ಲಿ ನಲುಗಿ ಜೀವಿ ಉಳಿಸಿಕೊಂಡಿರುವ ಪ್ರಮುಖರಲ್ಲಿ ಒಬ್ಬರು ಈಗಿನ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ.
ಅಂತಹ ರಜಾಕಾರ್ ಸಿನಿಮಾ ರಿಲೀಸ್ ಮಾಡದಂತೆ ತಡೆ ಕೋರಿ ಹೈದರಾಬಾದ್ ಹೈಕೋರ್ಟ್ ನಲ್ಲಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಮನವಿ ಸಲ್ಲಿಸಿತ್ತು. ಭಾರತ ಸ್ವಾತಂತ್ರ್ಯ ನಂತರ ರಜಾಕಾರರು ನಡೆಸಿದ ದೌರ್ಜನ್ಯವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಮುಸ್ಲಿಂ ಮತ್ತು ಹಿಂದುಗಳ ಭಾವನೆಗೆ ಧಕ್ಕೆ ತರಬಹುದು. ಎರಡೂ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಬಹುದು. ಹಾಗಾಗಿ ಚಿತ್ರ ಪ್ರದರ್ಶನವನ್ನು ತಡೆಯುವಂತೆ ಎಪಿಸಿಆರ್ ನ ತೆಲಂಗಾಣ ಚಾಪ್ಟರ್ ನ ಉಪಾಧ್ಯಕ್ಷ, ಅಡ್ವೋಕೇಟ್ ಅಫ್ಸರ್ ಜಹಾನ್ ಹೈಕೋರ್ಟ್ ನಲ್ಲಿ ಸಂಘಟನೆಯ ಹಿತಾಸಕ್ತಿಗಳನ್ನು ಪ್ರತಿನಿಧಿಸಿದ್ದರು.
ಇದೀಗ ಹೈಕೋರ್ಟ್ ತಡೆ ನೀಡುವುದಕ್ಕೆ ನಿರಾಕರಿಸಿದ್ದು, ಚಿತ್ರದ ಬಗ್ಗೆ ಸಿಬಿಎಫ್ʻಸಿಯಲ್ಲೇ ಮೇಲ್ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.



