ಒಂದು ಸಿನಿಮಾ ಗೆಲ್ಲುವುದೇ ಅಪರೂಪವಾಗಿರುವ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಸದ್ದು ಮಾಡಿದ ಸಿನಿಮಾ ಕಾಟೇರ. ಕಾಟೇರ. ಕಳೆದ ಡಿಸೆಂಬರ್ʻನಲ್ಲಿ ರಿಲೀಸ್ ಆಗಿ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ಇದೀಗ 100 ಡೇಸ್ ಸಂಭ್ರಮ ಮಾಡಿದೆ.
ದರ್ಶನ್ ವೃತ್ತಿ ಜೀವನದಲ್ಲೊಂದು ಅಪರೂಪದ ಸಿನಿಮಾ ಆಗಿ ದಾಖಲಾಗಿರುವ ಕಾಟೇರ, ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್ ಅವರಿಗೆ ಒಳ್ಳೆಯ ಹೆಸರು ಮತ್ತು ಹಣವನ್ನು ಕೊಟ್ಟಿತು. ಇದೀಗ ಕಾಟೇರ ಗೆಲ್ಲಿಸಿದವರಿಗೆ ಕಾರೊಂದನ್ನು ಬಹುಮಾನ ಕೊಟ್ಟಿದ್ಧಾರೆ ರಾಕ್ ಲೈನ್ ವೆಂಕಟೇಶ್. ಹೌದು.. ಇದು ಸಂಭಾವನೆಯನ್ನು ಹೊರತು ಪಡಿಸಿ ನೀಡುತ್ತಿರುವ ಪ್ರೀತಿಯ ಕಾಣಿಕೆ.
ಕಾಟೇರ ಸಿನಿಮಾ 100 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಖುಷಿ ಹಂಚಿಕೊಂಡಿತಷ್ಟೇ ಅಲ್ಲ.. 100 ದಿನ ಪೂರೈಕೆ ಹಿನ್ನಲೆಯಲ್ಲಿ ಚಿತ್ರತಂಡದ ಕೆಲವರಿಗೆ ಭರ್ಜರಿ ಗಿಫ್ಟ್ ಕೊಟ್ಟಿತು. ಕಾಟೇರ ಚಿತ್ರಕಥೆ ಬರೆದ ಜಡೇಶ್ ಹಂಪಿ, ಸಂಭಾಷಣೆಗಾರ ಮಾಸ್ತಿ, ಹಾಗೂ ನಟ ಸೂರಜ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿ ಧನ್ಯವಾದ ಹೇಳಿದ್ಧಾರೆ ರಾಕ್ ಲೈನ್ ವೆಂಕಟೇಶ್.
ಕಾಟೇರ ಚಿತ್ರದಲ್ಲಿ ನಟಿಸಿದ್ದ ಸೂರಜ್ ಅವರಿಗೆ ಸಿನಿಮಾ ರಿಲೀಸ್ ಆಗುವ ವೇಳೆಗೆ ಆಕ್ಸಿಡೆಂಟ್ ಆಗಿತ್ತು. ಅಪಘಾತದಲ್ಲಿ ನಟ ಕಾಲು ಕಳೆದುಕೊಂಡಿದ್ದ ಸೂರಜ್ ಅವರಿಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರ್ ಗಿಫ್ಟ್ ಮಾಡಿದ್ದಾರೆ. ಇನ್ನು ಚಿತ್ರದ ಬೆನ್ನೆಲುಬಾಗಿದ್ದು ಕಥೆ. ಹೀಗಾಗಿ ಕಥೆಗಾರ ಜಡೇಶ್ ಹಂಪಿ ಹಾಗೂ ಆ ಕಥೆಯ ಶಕ್ತಿಯನ್ನು ಹೆಚ್ಚಿಸುವಂತೆ ಸಂಭಾಷಣೆ ಬರೆದಿದ್ದ ಮಾಸ್ತಿ ಅವರಿಗೂ ಕಾರು ಗಿಫ್ಟ್ ಕೊಟ್ಟಿದ್ಧಾರೆ ರಾಕ್ ಲೈನ್.
ಕಾಟೇರ ಚಿತ್ರ 100 ದಿನ ಪೂರೈಸಿದ್ದು, 100 ಕೋಟಿ ಸಮೀಪ ಗಳಿಕೆ ಮಾಡಿದೆ ಎನ್ನಲಾಗಿದೆ. ಅಧಿಕೃತವಾಗಿ ರಾಕ್ ಲೈನ್ ಹೇಳಿಕೊಳ್ಳಲ್ಲ. ಒಟಿಟಿಯಲ್ಲೂ ಮೋಡಿ ಮಾಡಿರುವ ಕಾಟೇರ ಸಿನಿಮಾ, ನಿರ್ದೇಶಕ ತರುಣ್ ಸುಧೀರ್ ಅವರಿಗೂ ದೊಡ್ಡ ಹೆಸರು ತಂದುಕೊಟ್ಟಿದೆ.
ಕಾಟೇರ ಚಿತ್ರದಲ್ಲಿ ದರ್ಶನ್ ಹೀರೋ ಆಗಿದ್ದರೆ, ಮಾಲಾಶ್ರೀ ಮಗಳು ಆರಾಧನಾ ಮೊದಲ ಬಾರಿಗೆ ನಟಿಸಿದ್ದರು. ಅಚ್ಯುತ್ ಕುಮಾರ್, ಕುಮಾರ್ ಗೋವಿಂದ್, ಶೃತಿ, ಅವಿನಾಶ್, ಶ್ರೀನಿವಾಸ ಮೂರ್ತಿ, ವೈಜನಾಥ ಬಿರಾದಾರ್, ಜಗಪತಿ ಬಾಬು, ವಿನೋದ್ ಆಳ್ವಾ, ಪದ್ಮಾ ವಾಸಂತಿ, ದೊಡ್ಡಣ್ಣ, ಡಿಂಗ್ರಿ ನಾಗರಾಜ್.. ಸೇರಿದಂತೆ ಬೃಹತ್ ತಾರಾಗಣ ಕಾಟೇರದಲ್ಲಿ ನಟಿಸಿತ್ತು. ಹರಿಕೃಷ್ಣ ಅವರು ಸಂಯೋಜನೆ ಮಾಡಿದ್ದ ಹಾಡುಗಳು ಚಿತ್ರದ ಗೆಲುವಿಗೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದವು.
ಸುಮಾರು 30 ಕೋಟಿಯಲ್ಲಿ ತಯಾರಾಗಿದ್ದ ಸಿನಿಮಾ 100 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿತ್ತು. ಈ ಚಿತ್ರದ ನಂತರ ದರ್ಶನ್ ಮತ್ತು ತರುಣ್ ಸುಧೀರ್ ಮತ್ತೊಮ್ಮೆ ಜೊತೆಯಾಗಿದ್ದು, ಸಿಂಧೂರ ಲಕ್ಷ್ಮಣ ಸಿನಿಮಾ ತಯಾರಿಯಲ್ಲಿದ್ಧಾರೆ.



