ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 60% ಕಮಿಷನ್ ವ್ಯವಹಾರ ನಡೀತಿದ್ಯಾ..? ಹೌದು ಅಂತಿದ್ದಾರೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ. ರಾಜ್ಯದಲ್ಲಿ ಕಮಿಷನ್ ವ್ಯವಹಾರದ ಆರೋಪ ಚುನಾವಣೆಗಳು ಹತ್ತಿರ ಬಂದಾಗ ಶುರುವಾಗುತ್ತವೆ. ಸಿದ್ದರಾಮಯ್ಯ ಅವರ ಹಳೆ ಸರ್ಕಾರ ಇದ್ದಾಗ ನರೇಂದ್ರ ಮೋದಿ 20% ಕಮಿಷನ್ ಆರೋಪ ಮಾಡಿದ್ದರು. ಅದಾದ ಮೇಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಮಾಡಿತ್ತು. ಈಗ ಕುಮಾರಸ್ವಾಮಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ 60% ಕಮಿಷನ್ ಆರೋಪ ಮಾಡ್ತಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಶೇ 60 ರಷ್ಟು ಕಮಿಷನ್ ಇದೆ ಎಂದು ಅವರ ಕಾಂಗ್ರೆಸ್ ಗುತ್ತಿಗೆದಾರರೇ ಹೇಳುತ್ತಿದ್ದಾರೆ. ವಿಧಾನಸೌಧದಲ್ಲೇ ಮಂತ್ರಿಗಳಿಗೆ ಕಮಿಷನ್ ಹೋಗುತ್ತಿದೆ.ಪ್ರತಿ ಇಲಾಖೆಯಲ್ಲೂ ಸಚಿವರಿಗೆ ಮೊದಲು ಪರ್ಸೆಂಟೇಜ್ ಕೊಟ್ಟು ಆಮೇಲೆ ಹಣ ಬಿಡುಗಡೆ ಮಾಡುವ ಕೆಲಸ ಆಗುತ್ತಿದೆ ಎಂದು ಕುಮಾರಸ್ವಾಮಿ ಸ್ಫೋಟಕ ಆರೋಪ ಮಾಡಿದ್ದಾರೆ.
ಈಗ ಈ ಆರೋಪಗಳಿಗೆಲ್ಲ ಉತ್ತರ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬೀತು ಮಾಡಿ ನೋಡೋಣ. ಸಾಕ್ಷಿಗಳಿದ್ದರೆ ಕೊಡಿ ಎಂದು ತಿರುಗೇಟು ಕೊಟ್ಟಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಂಚ ಶೇ.60ಕ್ಕೆ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ.ಮನೆಗಳ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ. ಮೊದಲು ಪಿಡಿಒಗಳು ಲಂಚ ಪಡೆಯುತ್ತಿದ್ದರು, ಈಗ ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ.ಹಣ ಲೂಟಿ ಮಾಡುವುದಕ್ಕೂ ಇತಿಮಿತಿ ಎಂಬುದು ಇಲ್ಲವಾ?. ಈಗಿನ ಸರ್ಕಾರದ ಲಂಚಾವತಾರ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಮಾತನಾಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ ಕುಮಾರಸ್ವಾಮಿ.
ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು ಸಾಬೀತು ಪಡಿಸಬೇಕು. ಆಧಾರವಿಲ್ಲದೆ ಆರೋಪಗಳನ್ನು ಮಾಡಬಾರದು ಎನ್ನುವುದು ಸಿದ್ದರಾಮಯ್ಯ ಮತ್ತು ಅವರ ಸಹೋದ್ಯೋಗಿ ಸಚಿವರ ವಾದ.
ಕೊನೆ ಕುಟುಕು : ರಾಜ್ಯದಲ್ಲಿ ಸರ್ಕಾರಗಳು ಬದಲಾಗಿವೆ. ಕಮಿಷನ್ ಆರೋಪ ನಿಂತಿಲ್ಲ. ವಿರೋಧ ಪಕ್ಷದಲ್ಲಿದ್ದವರು ಆರೋಪಿಸುವುದು, ಆಡಳಿತದಲ್ಲಿದ್ದವರು ಸಾಕ್ಷಿ ಕೊಡಿ ಎಂದು ಸವಾಲು ಹಾಕುವುದು ಎರಡೂ ಕಾಮನ್ ಆಗಿರುತ್ತವೆ. ಬದಲಾಗಿರುವುದು ಕೇವಲ ಕಮಿಷನ್ ಪರ್ಸೆಂಟೇಜ್, ಅಷ್ಟೇ.



