ಬಾಡಿಗೆ ಮನೆಯವರಿಗೂ ಉಚಿತ. 200 ಯುನಿಟ್ ಅಲ್ಲದೇ ಹೋದರೂ, ತಾವು ವರ್ಷವಿಡೀ ಬಳಸುತ್ತಿದ್ದ ವಿದ್ಯುತ್ ಸರಾಸರಿ ಹಾಗೂ ಅದರ ಜೊತೆ ಶೇ.10ರಷ್ಟು ವಿದ್ಯುತ್ ಬಳಕೆಗೆ ಫ್ರೀ ಎಂದು ಘೋಷಿಸಲಾಗಿತ್ತು. ಹೊಸ ಬಾಡಿಗೆದಾರರು ಹಾಗೂ ಹೊಸ ಮನೆಯವರಿಗೆ ವಿದ್ಯುತ್ ಬಳಕೆ ಮಿತಿ ಬಗ್ಗೆ ಏನು ಎಂಬ ಗೊಂದಲವಿತ್ತು. ಅಲ್ಲದೆ ಜೂನ್ 15ರಿಂದ ಅರ್ಜಿ ತುಂಬಬೇಕಿತ್ತು. ಈ ಹಿನ್ನೆಲೆಯಲ್ಲಿ ಇಂಧನ ಸಚಿವ ಜಾರ್ಜ್ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.
ಹೊಸದಾಗಿ ಮನೆ ನಿರ್ಮಿಸಿದವರಿಗೆ, ಹೊಸ ಬಾಡಿಗೆದಾರರಿಗೆ ಸರಾಸರಿ 53 ಯುನಿಟ್ ಜತೆಗೆ ಹೆಚ್ಚುವರಿಯಾಗಿ ಶೇ.10ರಷ್ಟು ಯುನಿಟ್ ಬಳಕೆಯ ಮಿತಿಯನ್ನು ವಿಧಿಸಲು ನಿರ್ಧರಿಸಲಾಗಿದೆ. ಅದರಂತೆ ಒಟ್ಟು 58 ಯುನಿಟ್ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವರ್ಷದವರೆಗೆ ಲೆಕ್ಕ ಸಿಗದವರಿಗೆ ಇದು ಅನ್ವಯವಾಗಲಿದೆ. 12 ತಿಂಗಳ ನಂತರ ಸರಾಸರಿಯನ್ನು ತೆಗೆದುಕೊಂಡು ಹೊಸ ಸರಾಸರಿ ನಿಗದಿ ಮಾಡಲಾಗುವುದು. ಅಲ್ಲಿಯವರೆಗೆ 53 ಯುನಿಟ್ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಿ ಬಳಕೆಯ ಮಿತಿ ಇರಲಿದೆ. ವರ್ಷದ ಬಳಿಕ ಸರಾಸರಿಯನ್ನು ಗಮನಿಸಿ ಅವರಿಗೂ 200 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದ್ಧಾರೆ ಇಂಧನ ಸಚಿವ ಕೆ.ಜೆ.ಜಾರ್ಜ್.
ಅಲ್ಲಿಗೆ ಹೊಸದಾಗಿ ಮನೆ ಕಟ್ಟಿದವರು ಹಾಗೂ ಹೊಸದಾಗಿ ಬಾಡಿಗೆ ಮನೆಗೆ ಹೋದವರು, ತಮ್ಮ ಹೆಸರಿನಲ್ಲಿ ಬಾಡಿಗೆ ಮನೆ ಕರಾರು ಪತ್ರವನ್ನು ತೋರಿಸಿ ಅರ್ಜಿ ಸಲ್ಲಿಸಬಹುದು. ವಿದ್ಯುತ್ ಬಳಕೆಯ ಮಿತಿಯನ್ನು ರಾಜ್ಯ ಸರ್ಕಾರ 53ಯುನಿಟ್ ಮತ್ತು 10% ಗೆ ಸೀಮಿತ ಮಾಡಿದೆ. ಅಂದಹಾಗೆ ಶೇ.53 ಯುನಿಟ್ ಮಿತಿಯೇ ಏಕೆ ಎಂದರೆ ಅದು, ಇಡೀ ರಾಜ್ಯದ ವಿದ್ಯುತ್ ಬಳಕೆಯ ಸರಾಸರಿ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.



