ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಜಗಳ ಮುಗಿಯುವ ಲಕ್ಷಣಗಳಿಲ್ಲ. ಹೈಕಮಾಂಡಿಗೂ ಇದಕ್ಕೆ ಫುಲ್ ಸ್ಟಾಪ್ ಇಡುವ ಮನಸ್ಸಿದ್ದಂತೆ ಕಾಣುತ್ತಿಲ್ಲ. ಒಂದು ವಾರ್ನಿಂಗಿನಲ್ಲಿ ಮುಗಿಸಬಹುದಾಗಿದ್ದ ವಿವಾದವನ್ನು ಅದು ಎಳೆಯುತ್ತಲೇ ಬಂದಿದೆ. ಕಡ್ಡಿಯಲ್ಲಿ ಮುಗಿಯ ಬಹುದಾಗಿದ್ದ ವಿವಾದ, ಗಲಾಟೆಯನ್ನು ಹೈಕಮಾಂಡ್ ಬೆಟ್ಟದಂತೆ ಮಾಡಿಕೊಂಡಿದೆ. ಅದನ್ನು ಸರಿಪಡಿಸುವುದಕ್ಕೆ ಈಗ ಹೈಕಮಾಂಡಿಗೂ ಆಗುತ್ತಿಲ್ಲ. ಅದು ಮಿತಿ ಮೀರಿದೆ. ಈ ನಡುವೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿದ್ದಾರೆ.
ಕೆಲವೇ ಕೆಲವು ಗಂಟೆಗಳ ಕಾರ್ಯಕ್ರಮಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಧಾನಿಗೆ ಆಗಮಿಸಿದ್ದ ಅಮಿತ್ ಶಾ, ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಮೆಮೋರಿಯಲ್ ಹಾಸ್ಪಿಟಲ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಹದೇವಪುರ ಅಸೆಂಬ್ಲಿ ವ್ಯಾಪ್ತಿಯ ಕುಂದಲಹಳ್ಳಿ ಗೇಟ್ ಬಳಿಯ ಈ ಆಸ್ಪತ್ರೆಯ ಉದ್ಘಾಟನೆ ವೇಳೆ ಅಮಿತ್ ಶಾ, ಯಡಿಯೂರಪ್ಪನವರಿಗೆ ಆದ್ಯತೆ ನೀಡಿದ್ದಾರೆ. ವೇದಿಕೆಯಲ್ಲಿ ತಮ್ಮ ಹೆಸರು ಕೂಗಿದರೂ ಕೂಡಾ, ಯಡಿಯೂರಪ್ಪನವರು ಮೊದಲು ಮಾತನಾಡಲಿ ಎಂದು ವೇದಿಕೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿಂದ ಶುರುವಾಗಿರುವುದೇ ಈ ನಾಟಕ.
ಲಿಂಬಾವಳಿಗೆ 5 ಸೆಕೆಂಡ್.. ಮಾತ್ರ..!
ಕಾರ್ಯಕ್ರಮದಲ್ಲಿ ಅಮಿತ್ ಶಾ ಮಧ್ಯದಲ್ಲಿ ಕೂತಿದ್ದರು, ಅವರ ಒಂದು ಕಡೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಕುಳಿತಿದ್ದರು. ಇನ್ನೊಂದು ಕಡೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅರವಿಂದ ಲಿಂಬಾವಳಿ ಕೂತಿದ್ದರು. ಶ್ರೀಗಳ ಇನ್ನೊಂದು ಪಕ್ಕ ವಿಜಯೇಂದ್ರ ಕೂತಿದ್ದರು. ಯಡಿಯೂರಪ್ಪ ಭಾಷಣ ಮಾಡಲು ಹೋಗುತ್ತಿದ್ದಂತೆಯೇ, ಲಿಂಬಾವಳಿ ದಢಕ್ಕನೆ ಎದ್ದು ಅಮಿತ ಶಾ ಪಕ್ಕಕ್ಕೆ ಬಂದಿದ್ದಾರೆ. ಸುಮಾರು 5 ಪುಟಗಳ ದೂರು ಕೊಟ್ಟಿದ್ದಾರೆ. ಮತ್ತೇನನ್ನೋ ಮಾತನಾಡುವುದಕ್ಕೆ ಹೋದ ಲಿಂಬಾವಳಿ ಅವರನ್ನು ಅಲ್ಲಿಯೇ ತಡೆದಿದ್ದಾರೆ ಅಮಿತ್ ಶಾ. ಚೀಟಿಯನ್ನು ತಮ್ಮ ಬೆಂಗಾವಲಿನವರ ಕೈಗೆ ಕೊಟ್ಟಿದ್ದಾರೆ. ಇದೆಲ್ಲವೂ ನಡೆದಿರುವುದು ಕೇವಲ 5 ಸೆಕೆಂಡಿನಲ್ಲಿ. ಇದರಿಂದ, ಲಿಂಬಾವಳಿಗೆ ನಿರಾಸೆಯಾಗಿರಬಹುದು ಎನ್ನುವುದು ಬಾಡಿ ಲಾಂಗ್ವೇಜ್ ಮೂಲಕ ವ್ಯಾಖ್ಯಾನಿಸಲಾಗುತ್ತಿದೆ.
ವಿಜಯೇಂದ್ರ, ಯಡಿಯೂರಪ್ಪ ಜೊತೆ ಅರ್ಧ ಗಂಟೆ..!
ಕಾರ್ಯಕ್ರಮ ಮುಗಿದ ನಂತರ, ವಾಪಸ್ ವಿಮಾನ ನಿಲ್ದಾಣಕ್ಕೆ, ವಿಜಯೇಂದ್ರ ಅವರ ಜೊತೆ ಪ್ರಯಾಣಿಸಿದ್ದರು. ಆ ವೇಳೆ, ರಾಜಕೀಯ ಚರ್ಚೆ ನಡೆಯದೇ ಇರುತ್ತದೆಯೇ ಎಂದು ವಿಶ್ಲೇಷಿಸಲಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಕಾಣಿಸಿಕೊಳ್ಳುತ್ತಿರುವ ಅರವಿಂದ ಲಿಂಬಾವಳಿಯವರ ಮೇಲೆ ಅಮಿತ್ ಶಾ ಸಿಟ್ಟಾಗಿರಬಹುದು. ಮೂಲತಃ ಆರ್ ಎಸ್ ಎಸ್ ಮೂಲದವರಾಗಿ ಬಹಿರಂಗವಾಗಿ ಭಿನ್ನಮತ ಚಟುವಟಿಕೆ ನಡೆಸುವುದು ಸರಿಯೇ ಎನ್ನುವ ಆಕ್ರೋಶ ಶಾ ಅವರಿಗೆ ಇದೆ. ಆದರೆ ಪ್ರಯಾಣದ ಮಧ್ಯೆ ಅಮಿತ್ ಶಾ ಅವರು ವಿಜಯೇಂದ್ರ ಜೊತೆಯಲ್ಲೂ ಸರಿಯಾಗಿ ಮಾತನಾಡಿಲ್ಲವಂತೆ. ಹೀಗಂತ ಹೇಳ್ತಿರೋದು ಯತ್ನಾಳ್ ಟೀಂ.
ವೇದಿಕೆಯಲ್ಲೇ ಶಾ ಕೊಟ್ಟ ಸಂದೇಶ..!
ಅಮಿತ್ ಶಾ ಅವರು ಕಾರ್ಯಕ್ರಮದ ತಮ್ಮ ಭಾಷಣದಲ್ಲಿ ವಿಜಯೇಂದ್ರ ಅವರ ಹೆಸರನ್ನು ಹೇಳಿಲ್ಲ. ಕೇವಲ ರಾಜ್ಯಾಧ್ಯಕ್ಷರು ಎಂದು ಉಲ್ಲೇಖಿಸಿದ್ದಾರೆ. ತಮ್ಮ ಭಾಷಣ ಮುಗಿದ ಕೂಡಲೇ, ಅಮಿತ್ ಶಾ ಕಾರ್ಯಕ್ರಮದಿಂದ ಹೊರಟಿದ್ದಾರೆ. ವಿಜಯೇಂದ್ರ ಹೆಸರು ಗೊತ್ತಿಲ್ಲ ಎಂದೇನಲ್ಲ. ಆದರೆ ಅಮಿತ್ ಶಾ ಅವರು ಬೇಕೆಂದೇ ವಿಜಯೇಂದ್ರ ಹೆಸರು ಹೇಳಿಲ್ಲ. ರಾಜಕೀಯದಲಿ ಸಣ್ಣ ಸಣ್ಣ ಘಟನೆ ಕೊಡುವ ಸಂದೇಶವೂ ದೊಡ್ಡದು.



