ಯುವ ಚಿತ್ರವನ್ನು ದೊಡ್ಮನೆ ಫ್ಯಾನ್ಸ್ ಅದ್ಧೂರಿಯಾಗಿಯೇ ಸ್ವಾಗತಿಸಿದ್ಧಾರೆ. ವಿಶೇಷವೆಂದರೆ.. ಧಾಂಧೂಂ ಎಂಬಂತೆ ಅಲ್ಲ.. ಸೈಲೆಂಟ್ ಆಗಿ.. ಆದರೆ.. ನಿರಂತರವಾಗಿ ಸಿನಿಮಾ ನೋಡಿದ್ಧಾರೆ. ಮೆಚ್ಚಿಕೊಂಡಿದ್ಧಾರೆ. ಹೀಗಾಗಿಯೇ.. ಯುವ ರಾಜ್ ಕುಮಾರ್ ನಟಿಸಿರುವ ಮೊದಲ ಸಿನಿಮಾ ಯುವ ಯಶಸ್ವಿಯಾಗಿ 4ನೇ ವಾರಕ್ಕೆ ಕಾಲಿಟ್ಟಿದೆ.
ವಿಶೇಷವೆಂದರೆ.. ಚಿತ್ರದ ಕಲೆಕ್ಷನ್ ನಿರಂತರವಾಗಿ ಸ್ಥಿರತೆ ಕಾಯ್ದುಕೊಂಡಿರುವುದು. 3ನೇ ವಾರಾಂತ್ಯಕ್ಕೂ ಕೂಡಾ ಚಿತ್ರದ ಕಲೆಕ್ಷನ್ ಸುಮಾರು 10 ಕೋಟಿಯ ಆಸುಪಾಸಿನಲ್ಲಿಯೇ ಇದೆ. ಮೊದಲ ಎರಡು ವಾರವೂ ಹೀಗೆಯೇ ಕಲೆಕ್ಷನ್ ಸ್ಥಿರತೆ ಕಾಯ್ದುಕೊಂಡಿತ್ತು. ಮೊದಲ ವಾರದ ಕಲೆಕ್ಷನ್ 10 ಕೋಟಿಗಿಂತ ಹೆಚ್ಚಿತ್ತು. 2ನೇ ವಾರದ ಕಲೆಕ್ಷನ್ ಕೂಡಾ 8ರಿಂದ 9 ಕೋಟಿಯಷ್ಟಿತ್ತು.
ಯುವ ರಾಜ ಕುಮಾರ್ ಎದುರು ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ಸುಧಾರಾಣಿ ತಂದೆ-ತಾಯಿಯಾಗಿ ನಟಿಸಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶನಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ಧಾರೆ. ಹೊಂಬಾಳೆ ಫಿಲಮ್ಸ್ ಬ್ಯಾನರ್ʻನಲ್ಲಿ ವಿಜಯ್ ಕಿರಗಂದೂರು ಯುವ ಚಿತ್ರವನ್ನು ನಿರ್ಮಾಣ ಮಾಡಿದ್ಧಾರೆ.
ಆರಂಭದಲ್ಲಿ ಹಾಸ್ಟೆಲ್ ಹುಡುಗರ ಗಲಾಟೆಯಿಂದ ಶುರುವಾಗುವ ಕಥೆಯಲ್ಲಿ.. ಮಗ ಮತ್ತು ಅಪ್ಪನ ಬಾಂಧವ್ಯ, ಕಿಕ್ ಬಾಕ್ಸಿಂಗ್, ಡೋಪಿಂಗ್, ಸಂಚು, ಜೀವನದ ಪಾಠಗಳು.. ನಡುವೆ ಚೆಂದದ ಪ್ರೇಮಕಥೆಯೂ ಇದೆ. ಇದೆಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿರುವುದು ಚಿತ್ರದ ಕಲೆಕ್ಷನ್ʻನಲ್ಲಿ ಗೊತ್ತಾಗುತ್ತಿದೆ. ಫಸ್ಟ್ ಹಾಫ್ ಯುವ ಪ್ರೇಕ್ಷಕರಲ್ಲಿ ಥ್ರಿಲ್ ಮೂಡಿಸಿದರೆ.. ಸೆಕೆಂಡ್ ಹಾಫ್ ಫ್ಯಾಮಿಲಿ ಆಡಿಯನ್ಸ್ʻಗೆ ಹೃದಯ ಮುಟ್ಟಿದೆ. ಚಿತ್ರದಲ್ಲಿ ಬರುವ ತಂದೆ ಮಗನ ಸೆಂಟಿಮೆಂಟ್ ದೊಡ್ಮನೆ ಅಭಿಮಾನಿಗಳ ಹೃದಯ ಗೆದ್ದಿದೆ.
ವಿಶೇಷವೆಂದರೆ.. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಮೋಟ್ ಮಾಡಲಿಲ್ಲ. ಯುವ ಚಿತ್ರದ ಬಗ್ಗೆ ಖುದ್ದು ದೊಡ್ಡಪ್ಪ ಶಿವಣ್ಣ ಸೇರಿದಂತೆ ಚಿತ್ರರಂಗದ ಬಹುತೇಕ ಸ್ಟಾರ್ ನಟರು ಬಹಿರಂಗವಾಗಿ ಸೋಷಿಯಲ್ ಮೀಡಿಯಾಗಳ ಮೂಲಕವೂ ಸ್ವಾಗತ ಹೇಳಲಿಲ್ಲ. ಸಿನಿಮಾದವರಿಗಾಗಿಯೇ ಚಿತ್ರದ ಪ್ರೀಮಿಯರ್ ಶೋ ನಡೆಯಲಿಲ್ಲ. ಅದ್ಧೂರಿ ಭರ್ಜರಿ ಎನ್ನುವಂತಹ ಪ್ರಚಾರವೂ ಇರಲಿಲ್ಲ. ಕೇವಲ ಚಿತ್ರತಂಡದವರು ಪ್ರಚಾರ ಮಾಡಿದರು. ತಂದೆ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಕೂಡಾ ಪ್ರಚಾರದಲ್ಲಿದ್ದರು. ಶಿವಣ್ಣ ಕೂಡಾ ಮಗನ ಜೊತೆ ಒಂದು ಪುಟ್ಟ ಡ್ಯಾನ್ಸ್ ವಿಡಿಯೋ ಮಾಡಿ ಸುಮ್ಮನಾಗಿದ್ದರು. ಯಾಕೆ..?
ಇದರ ಹಿಂದೆ ಒಂದು ಕಾರಣವೂ ಇದೆ. ಚಿತ್ರ ಮಾತನಾಡಬೇಕೇ ಹೊರತು.. ನಾವು ಮಾತನಾಡಬಾರದು. ಹಾಗೂ.. ಹೆಚ್ಚು ಮಾತನಾಡಿದ್ದಷ್ಟೂ ನಿರೀಕ್ಷೆ ಗಗನ ಮುಟ್ಟುತ್ತವೆ. ಪ್ರೇಕ್ಷಕರು ಬಂದು ಹೊಸ ನಟ ಎಂಬ ರೀತಿಯಲ್ಲಿ ಸಿನಿಮಾ ನೋಡಿ.. ಮೆಚ್ಚಿಕೊಳ್ಳಲಿ ಎಂದು ಅಭಿಪ್ರಾಯ ಪಟ್ಟಿತ್ತು ಹೊಂಬಾಳೆ. ಹೊಂಬಾಳೆಯವರ ನಿರೀಕ್ಷೆ ನಿಜವಾಗಿದೆ. ಚಿತ್ರವನ್ನು ಪ್ರೇಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ.
ಚಿತ್ರತಂಡದವರನ್ನು ಬಿಟ್ಟರೆ ಸ್ಟಾರ್ ನಟರಲ್ಲಿ ಕಿಚ್ಚ ಸುದೀಪ್ ಒಬ್ಬರೇ ಸಿನಿಮಾವನ್ನು ನೋಡಿದ.. ದೊಡ್ಮನೆಯವರೂ ಅಲ್ಲದ ಸ್ಟಾರ್ ಹೀರೋ. ಅಷ್ಟರಮಟ್ಟಿಗೆ ಡೌನ್ ಪ್ಲೇ ಮಾಡಿ ಗೆದ್ದಿದ್ದಾರೆ ಯುವ ರಾಜಕುಮಾರ್.



