ಮಿಸ್ಟರ್ 420. (Mr.420) ಈ ಸೆಕ್ಷನ್ ಎಷ್ಟರಮಟ್ಟಿಗೆ ಜನಮಾನಸದಲ್ಲಿ ಬೇರೂರಿದೆ ಅಂದ್ರೆ.. ಕಳ್ಳತನ, ವಂಚನೆ, ಮೋಸ ಮಾಡುವವರನ್ನ ಜನರೂ 420 ಅಂತಾ ಕರೀತಾರೆ. ಅಷ್ಟರಮಟ್ಟಿಗೆ : ಐಪಿಸಿ ಸೆಕ್ಷನ್ 420 (IPC Section 420) ಎಂಬುದು ಜನರಿಗೆ ಅತ್ಯಂತ ಚಿರಿಪರಿಚಿತವಾದ ಪದ. ವಂಚಕರನ್ನು ‘420’ ಎಂದು ಕರೆಯುವಷ್ಟುಈ ಪದ ಜನಪ್ರಿಯವಾಗಿದೆ. ಬಾಲಿವುಡ್ನಲ್ಲಿ ‘ಶ್ರೀ 420’ ಹಾಗೂ ಕನ್ನಡದಲ್ಲಿ ‘ಮಿಸ್ಟರ್ 420’ ಎಂಬ ಸಿನಿಮಾ ಕೂಡ ತೆರೆ ಕಂಡಿವೆ. ವಂಚಕರ ವಿರುದ್ಧ ಇದೇ ಸೆಕ್ಷನ್ ಅಡಿ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಆದರೆ ಉದ್ದೇಶಿತ ಭಾರತೀಯ ನ್ಯಾಯ ಸಂಹಿತೆಯಲ್ಲಿ 420 ಎಂಬ ಸೆಕ್ಷನ್ನೇ ಇಲ್ಲ. ವಂಚನೆಯನ್ನು 316ನೇ ಸೆಕ್ಷನ್ಗೆ ಸೇರಿಸಲಾಗಿದೆ. ಹೀಗಾಗಿ ಇನ್ನು ಮುಂದೆ 420 ಅನ್ನೋ ಹಾಗಿಲ್ಲ. 316 ಅಂತಾ ಕರೆದ್ರೆ.. ಏನಾಗುತ್ತೆ. ಪ್ರಾಕ್ಟೀಸ್ ಆದರೆ ಜನ ಕರೆಯಬಹುದೇನೋ.. ಆದರೆ 420 ಅನ್ನೋ ಪದದಲ್ಲಿರೋ ಮೋಡಿ ಇದಕ್ಕೆ ಸಿಕ್ಕದೇ ಹೋಗಬಹುದು. ಹಾಗಂತ ಕೇವಲ ನಂಬರ್`ಗಳು, ಸೆಕ್ಷನ್ ಸಂಖ್ಯೆಗಳಷ್ಟೇ ಬದಲಾಗಿಲ್ಲ. ಶಿಕ್ಷೆ, ವಿಚಾರಣೆ ಸ್ವರೂಪವೂ ಬದಲಾಗಿದೆ.
ಅಪರಾಧಿಗಳನ್ನು ದಂಡಿಸಲು ಬ್ರಿಟಿಷರು 160 ವರ್ಷಗಳ ಹಿಂದೆ ರೂಪಿಸಿದ್ದ ಮೂರು ಕಾಯ್ದೆಗಳನ್ನು ರದ್ದುಗೊಳಿಸಿ, ಮೂರು ಹೊಸ ಶಾಸನಗಳನ್ನು ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿರುವುದರಿಂದ ಈವರೆಗೆ ದೇಶದ ಜನರಿಗೆ ಚಿರಪರಿಚಿತವಾಗಿದ್ದ ಬಹುತೇಕ ಕಾಯ್ದೆಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ.
ಕೊಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302ರಡಿ (Section 302) ಪ್ರಕರಣ ದಾಖಲು ಮಾಡಲಾಗುತ್ತದೆ. (BNS) ಭಾರತೀಯ ನ್ಯಾಯ ಸಂಹಿತೆಯಲ್ಲಿ (Bharatheeya nyaya samhithe) ಸೆಕ್ಷನ್ 302 ಎಂದರೆ ಅದು ಸರಗಳ್ಳತನ ಎಂದಾಗುತ್ತದೆ. ಸೆಕ್ಷನ್ 99 ಕೊಲೆಗಳಿಗೆ ಸಂಬಂಧಿಸಿದ ಕಾಯ್ದೆಯಾಗಿದೆ. ಕೊಲೆ ಯತ್ನ ನಡೆದಾಗ ಪೊಲೀಸರು ಐಪಿಸಿ ಸೆಕ್ಷನ್ 307ರಡಿ ಎಫ್ಐಆರ್ ದಾಖಲು ಮಾಡುತ್ತಾರೆ. ಆದರೆ ಭಾರತೀಯ ನ್ಯಾಯ ಸಂಹಿತೆಯಲ್ಲಿ (BNS) ಸೆಕ್ಷನ್ 307 ಕಳ್ಳತನಕ್ಕೆ ಸಂಬಂಧಿಸಿದ್ದಾಗಿದೆ. ಕೊಲೆ ಯತ್ನವನ್ನು ಸೆಕ್ಷನ್ 107 ಎಂದು ಪರಿಗಣಿಸಲಾಗಿದೆ.
ಅತ್ಯಾಚಾರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 375 ಹಾಗೂ 376ರಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 376 ಇಲ್ಲವೇ ಇಲ್ಲ. ಸೆಕ್ಷನ್ 63ರಡಿ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಐಪಿಸಿ ಸೆಕ್ಷನ್ 499 ಮಾನನಷ್ಟಪ್ರಕರಣಗಳಿಗೆ ಸಂಬಂಧಿಸಿದ ಕಾಯ್ದೆಯಾಗಿದೆ. ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 499 ಇಲ್ಲ. 354ನೇ ಸೆಕ್ಷನ್ನಡಿ ಮಾನನಷ್ಟಮೊಕದ್ದಮೆ ಹೂಡಲು ಅವಕಾಶವಿದೆ.
ಭಾರತದಲ್ಲಿ ಅಪರಾಧಗಳಿಗೆ ಶಿಕ್ಷೆಯನ್ನು ವ್ಯಾಖ್ಯಾನಿಸುವ ಮತ್ತು ಸೂಚಿಸುವ ಕಾನೂನುಗಳ ನೀತಿ ನಿಯಮಾವಳಿಯಾದ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿದೆ. ಭಾರತೀಯ ದಂಡ ಸಂಹಿತೆ (BNS), ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಮತ್ತು ಭಾರತೀಯ ಎವಿಡೆನ್ಸ್ ಕಾಯ್ದೆಯನ್ನು ಭಾರತೀಯ ನ್ಯಾಯ ಸಂಹಿತೆ (Indian Evidence act) ಬದಲಿಸುತ್ತದೆ
ಐಪಿಸಿ ಕಾಯ್ದೆಗಳಲ್ಲಿ ಈ ಮೊದಲು ಇಲ್ಲದ ಕೆಲವು ನಿಯಮಗಳನ್ನು ಸೇರಿಸಲಾಗಿದೆ. ಹೊಸ ಭಾರತೀಯ ದಂಡ ಸಂಹಿತೆ ಪ್ರಕಾರ
ಗುಂಪು ಹತ್ಯೆಗೆ ಗಲ್ಲು ಶಿಕ್ಷೆ ವಿಧಿಸಬಹುದು : ಐದು ಅಥವಾ ಹೆಚ್ಚಿನ ವ್ಯಕ್ತಿಗಳು ಜನಾಂಗ, ಜಾತಿ ಅಥವಾ ಸಮುದಾಯ, ಲಿಂಗ, ಜನ್ಮಸ್ಥಳ, ಭಾಷೆ, ವೈಯಕ್ತಿಕ ನಂಬಿಕೆ ಅಥವಾ ಬೇರೆ ಯಾವುದೇ ಹಿನ್ನೆಲೆಯಲ್ಲಿ ಜತೆಗೂಡಿ ನಡೆಸುವ ಕೊಲೆ ಪ್ರಕರಣಗಳಲ್ಲಿ, ಅಂತಹ ಗುಂಪಿನ ಪ್ರತಿ ಸದಸ್ಯನಿಗೂ ಮರಣದಂಡನೆ ಅಥವಾ ಜೀವಾವಧಿ ಅಥವಾ ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಜೈಲು ವಾಸ ಶಿಕ್ಷೆ ವಿಧಿಸಲಾಗುತ್ತದೆ. ಹಾಗೆಯೇ ಅವರು ದಂಡವನ್ನೂ ತೆರಬೇಕಾಗುತ್ತದೆ.
ಅತ್ಯಾಚಾರ ಕಾನೂನು ಚೇಂಜ್ : ಅಪ್ತಾಪ್ತರನ್ನು ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ, ಜೀವಾವಧಿ ಶಿಕ್ಷೆ ವಿಧಿಸುವ ನಿಯಮ ಸಿದ್ಧವಾಗಿದೆ. ಅತ್ಯಾಚಾರ ಸಂತ್ರಸ್ತೆಯ ಹೆಸರು, ಗುರುತು ಬಹಿರಂಗಪಡಿಸಿದವರಿಗೂ ಶಿಕ್ಷೆ ಇದೆ.
ವಿಚಾರಣೆ, ಶಿಕ್ಷೆಗೆ ಕಾಲಾವಧಿ ಫಿಕ್ಸ್ : ಈ ಹೊಸ ಕಾನೂನುಗಳು ಜಾರಿಗೆ ಬಂದರೆ, ಕ್ರೈಂ ಕೇಸ್`ಗಳನ್ನು 180 ದಿನಗಳ ಒಳಗೆ ಚಾರ್ಜ್ ಶೀಟ್ ಸಲ್ಲಿಸಬೇಕು. 3 ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳಬೇಕು. 30 ದಿನಗಳ ಒಳಗೆ ಶಿಕ್ಷೆ ಜಾರಿ ಪ್ರಕ್ರಿಯೆ ಆರಂಭವಾಗಬೇಕು. ಎಂಬ ಹೊಸ ನಿಯಮಗಳೂ ಇವೆ.
ಸಣ್ಣ ಶಿಕ್ಷೆಗೆ ಬೇರೆಯದೇ ಶಿಕ್ಷೆ : ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ, ಮೊದಲ ಅಪರಾಧ ಪ್ರಕರಣ, ಕ್ಷುಲ್ಲುಕ ಕಾರಣಕ್ಕೆ ಹೊಡೆದಾಟ.. ಇಂತಹ ಪ್ರಕರಣಗಳಲ್ಲಿ ಗಿಡ ನೆಡುವ, ಟ್ರಾಫಿಕ್ ನಿಯಂತ್ರಿಸುವ, ಸಮಾಜ ಸೇವೆಯ ಶಿಕ್ಷೆಗಳನ್ನೂ ನೀಡುವ ಅವಕಾಶ ಹೊಸ ಕಾನೂನುಗಳಲ್ಲಿದೆ.



