ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಹಾರಗಳೇ ಗಮನ ಸೆಳೆದಿದ್ದವು. ಒಂದಕ್ಕಿಂತ ಒಂದು ವಿಭಿನ್ನ..ವಿಶೇಷ..ಕೌತುಕ.. ಇಂತಹವುಗಳಲ್ಲೂ ಹಾರ ಮಾಡ್ತಾರ ಎಂದು ಅಚ್ಚರಿ ಪಡುವಷ್ಟು. ಯಾತ್ರೆ 32 ದಿನ ಪೂರೈಸಿದ್ದು, ಹಳೆ ಮೈಸೂರು ಭಾಗದ 6 ಜಿಲ್ಲೆಗಳ 32 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಚಾರ ಮಾಡಿದೆ. ರಥಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಲಿಕಾಪ್ಟರ್ನಲ್ಲಿ ಪುಷ್ಪವೃಷ್ಟಿ ಜೊತೆಗೆ, ಪ್ರಾದೇಶಿಕ ವೈಶಿಷ್ಟ್ಯತೆ ಸಾರುವ ವಸ್ತುಗಳ ಹಾರಗಳನ್ನು ಕ್ರೇನ್ಗಳ ಮೂಲಕ ಹಾಕಿ ಸ್ವಾಗತ ಕೋರಲಾಗುತ್ತಿದೆ.

ಮದ್ದೂರಿನ ತೂಬಿನಕೆರೆ ಗೇಟ್ನಲ್ಲಿ ಜೋಳದ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಮರಳಗಾಲ, ಮಂಡ್ಯ, ಗುರುದೇವನಹಳ್ಳಿ, ಸಾತನೂರು ವೃತ್ತದಲ್ಲಿ ಕಬ್ಬಿನ ಜಲ್ಲೆ ಹಾರ, ಮೇಲುಕೋಟೆಯ ಸುಂಕಾ ತೊಣ್ಣೂರಿನಲ್ಲಿ ಚೆರ್ರಿ ಹಣ್ಣಿನ ಹಾರ, ಹುಲಿಕೆರೆಯಲ್ಲಿ ಬೃಹತ್ ರುದ್ರಾಕ್ಷಿ ಹಾರ, ಕೆ.ಆರ್.ಪೇಟೆಯ ಹೊಸಹೊಳಲು, ಚಿಂತಾಮಣಿ, ಶಿಡ್ಲಘಟ್ಟ, ಕೋಲಾರದ ಉಪ್ತುಕುಂಟೆಯಲ್ಲಿ ಕನಕಾಂಬರ, ಸೇಬಿನ ಹಾರ, ನಾಗಮಂಗಲದ ಹೊನ್ನಾವರ, ಬಿಂಡಿಗನವಿಲೆ, ಕೆ.ಆರ್.ಪೇಟೆಯಲ್ಲಿ ಕೊಬ್ಬರಿ ಹಾರ, ನಾಗಮಂಗಲದ ಬೆಳ್ಳೂರಿನಲ್ಲಿ ಎಲೆಕೋಸಿನ ಹಾರ, ಮೇಲುಕೋಟೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಭತ್ತದ ಹಾರ, ಚನ್ನಪಟ್ಟಣದಲ್ಲಿ ಬೊಂಬೆಗಳ ಹಾರ, ಕೆ.ಆರ್.ಪೇಟೆ, ಮಳವಳ್ಳಿಯ ಹಲಗೂರು, ಕಿರುಗಾವಲಿನಲ್ಲಿ ಬೆಲ್ಲದ ಹಾರ, ಭಾರತಿನಗರದಲ್ಲಿ ಮೆಕ್ಕೆಜೋಳದ ಹಾರ, ದೊಡ್ಡರಸಿನಕೆರೆಯಲ್ಲಿ ಎಳನೀರು, ನವಿಲುಕೋಸು, ನುಗ್ಗೆಸೊಪ್ಪಿನ ಹಾರ ಹಾಕಿ ಅಭಿಮಾನ ಮೆರೆದಿದ್ದಾರೆ ಕಾರ್ಯಕರ್ತರು.

ಕೋಲಾರದಲ್ಲಿ 3 ಟನ್ ತೂಕದ ಟೊಮೆಟೋ ಹಾರ, ದೇವನಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾರಹಳ್ಳಿಯಲ್ಲಿ ಚಕ್ಕೋತ ಹಾರ, ಹಾರೋಹಳ್ಳಿ, ವೆಂಕಟಗಿರಿಕೋಟೆಯಲ್ಲಿ ದ್ರಾಕ್ಷಿ ಹಾರ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ತಿಪ್ಪೇನಹಳ್ಳಿ, ಬಿಜ್ಜವಾರದಲ್ಲಿ ಬಜ್ಜಿ ಮೆಣಸಿನಕಾಯಿ ಹಾರ, ಮಂಡ್ಯ, ತುಮಕೂರಿನ ಶಿರಾಗೇಟ್ ಬಳಿ ರಾಗಿ ಹಾರ, ತುರುವೇಕೆರೆಯಲ್ಲಿ ಎಳನೀರು, ಸಿಹಿ ಕುಂಬಳಕಾಯಿ, ಹೊಂಬಾಳೆ ಹಾರ, ತುಮಕೂರಿನ ಬಾಣಸಂದ್ರದಲ್ಲಿ ಡ್ರ್ಯಾಗನ್ ಫ್ಮ್ರಟ್ಸ್ ಹಾರ, ದೊಡ್ಡರಸಿನಕೆರೆಯಲ್ಲಿ ನವಿಲುಕೋಸು, ನುಗ್ಗೆಸೊಪ್ಪಿನ ಹಾರ, ಮಧುಗಿರಿ, ಕೊರಟಗೆರೆಯ ಗೊಂದಿಹಳ್ಳಿಯಲ್ಲಿ ಕಡಲೆಕಾಯಿ ಹಾರ, ಕೊರಟಗೆರೆಯಲ್ಲಿ ಉದ್ದಿನವಡೆ ಹಾರ, ಪಾವಗಡದಲ್ಲಿ ಅನಾನಸ್ ಹಾರ, ಶಿರಾದ ಕೆಂಚಗಾನಹಳ್ಳಿಯಲ್ಲಿ ಕೊತ್ತಂಬರಿ ಸೊಪ್ಪಿನ ಹಾರ, ರಾಮನಗರದ ಹಜರತ್ ಫಿರೆನ್ ಷಾ ವಾಲಿ ದರ್ಗಾದಲ್ಲಿ ಬೃಹತ್ ಬಾದಾಮಿ ಹಾರ, ಶಿಡ್ಲಘಟ್ಟ, ಕನಕಪುರದಲ್ಲಿ ರೇಷ್ಮೆಗೂಡಿನ ಹಾರ, ಕನಕಪುರದ ಹೆಬ್ಬಾಗಿಲಿನಲ್ಲಿ ಬಾಳೆಗೊನೆ ಹಾರ ಹಾಕಿ ಸ್ವಾಗತ ಕೋರಲಾಗಿದೆ.

ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣಪತಿ ಸನ್ನಿಧಿಯಲ್ಲಿ ನವೆಂಬರ್ 1ರಂದು ಶುರುವಾಗಿದ್ದ ಪಂಚರತ್ನ ಯಾತ್ರೆ ಮಾಜಿ ಪ್ರಧಾನಿ ದೇವೇಗೌಡ ಅವರ ಆಶೀರ್ವಾದದೊಂದಿಗೆ ಆರಂಭವಾಗಿತ್ತು. ಆದರೆ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಸ್ವಲ್ಪ ದಿನ ಮುಂದೂಡಿದ್ದ ಕುಮಾರಸ್ವಾಮಿ, 18ನೇ ತಾರೀಕು ಶುಭಾರಂಭ ಮಾಡಿದ್ದರು.
ಈ ಹಾರಗಳಲ್ಲಿ ತುಮಕೂರು ಜಿಲ್ಲೆಯ ಕಂಚಿಗಾನಹಳ್ಳಿಯಲ್ಲಿ ಸ್ಕೂಲ್ ಬ್ಯಾಗ್ ಹಾರ ಹಾಕಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿಸಿ, ಬಡವರ ಮಕ್ಕಳಿಗೂ ಕಾನ್ವೆಂಟ್ ಶಿಕ್ಷಣ ಬೇಕ್ರಯ್ಯ.. ಎಂಬ ಟ್ಯಾಗ್‍ಲೈನ್ ಕೊಟ್ಟಿದ್ದುದು ವಿಶೇಷ. ಆಯಾ ಭಾಗದ ಪ್ರಮುಖ ಬೆಳೆಗಳಿಂದಲೇ ಮಾಡಿದ ಹಾರಗಳಿವು.

ಅಂದಹಾಗೆ ಒಂದೊಂದು ಹಾರಕ್ಕೆ 30 ಸಾವಿರದಿಂದ 1 ಲಕ್ಷದವರೆಗೂ ಖರ್ಚಾಗುತ್ತದೆ. ಕೆಲಸವೂ ಸಿಗುತ್ತದೆ. ಎಲ್ಲರೂ ಇದನ್ನು ಮಾಡೋಕೆ ಸಾಧ್ಯವಿಲ್ಲ. ಇಂತಹ ಹಾರಗಳನ್ನು ಮಾಡುವುದಕ್ಕೆಂದೇ ಕುಶಲಕರ್ಮಿಗಳಿದ್ದಾರೆ. ವಿಶೇಷವೆಂದರೆ ರಾಜ್ಯದಲ್ಲಿ ಕ್ರೇನ್ ಮೂಲಕ ಹಾರ ಹಾಕುವ ಸಂಪ್ರದಾಯ ಶುರುವಾಗಿದ್ದು ಕುಮಾರಸ್ವಾಮಿಯವರಿಂದಲೇ. ಈಗ ಅದು ಇನ್ನೂ ಒಂದು ಹಂತ ಮುಂದೆ ಹೋಗಿದೆ. ಯಾರು ಯಾವ ರೀತಿಯ ಹಾರ ಹಾಕಿದ್ರು? ಎಷ್ಟು ಕ್ರಿಯೇಟಿವ್ ಆಗಿ ಯೋಚನೆ ಮಾಡಿ ಹಾರ ಹಾಕಿದ್ರು ಎಂಬ ಯೋಚನೆ ಶುರುವಾಗಿದೆ.



