ನಮ್ಮ ವರ್ತನೆ ʻನಮ್ಮ ಡಿ ಬಾಸ್ʼಗೆ ತೊಂದರೆ ಆಗುವುದು ಬೇಡ. ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅನಾರೋಗ್ಯದ ಸಮಸ್ಯೆಯೂ ಇದೆ. ಅವರು ತಮ್ಮ ಕುಟುಂಬದೊಂದಿಗೆ ಖುಷಿಯಾಗಿರಲಿ, ಆಪರೇಷನ್ ಆಗಲಿ.. ನಾವು ತೊಂದರೆ ಕೊಡುವುದು. ಇಂತಾದ್ದೊಂದು ನಿರ್ಧಾರ ತೆಗೆದುಕೊಂಡಿರೋ ಅಭಿಮಾನಿಗಳು.. ತಮ್ಮಂತೆಯೇ ಇರುವ ಸಾವಿರಾರು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ದರ್ಶನ್ ವಿಚಾರದಲ್ಲಿ ಅಭಿಮಾನಿಗಳು ಒಂದು ರೀತಿಯಲ್ಲಿ ಅತಿರೇಕದಿಂದಲೇ ಇರುತ್ತಾರೆ. ಯಾರು ಏನು ಅಂದ್ರು.. ತಡೆದುಕೊಳ್ಳೋ ಮಾತೇ ಇಲ್ಲ. ಆದರೆ ಈ ಬಾರಿ ದರ್ಶನ್ ಫ್ಯಾನ್ಸ್ ಕೂಲ್ ಆಗಿದ್ದಾರೆ. ಸಂಭ್ರಮಕ್ಕೆ ಕೊರತೆ ಇಲ್ಲ. ಮಾತಿನಲ್ಲಿ ಹಿಡಿತ ಕಾಣುತ್ತಿದೆ. ಆರಂಭದಲ್ಲಿ ಇದ್ದ ಆಕ್ರೋಶ ಈಗ ಇಲ್ಲ.
ಅದಕ್ಕೆಲ್ಲ ಕಾರಣವಾಗಿದ್ದು ಒಂದೇ. ತಮ್ಮ ಮಿತಿಮೀರಿದ ವರ್ತನೆಗಳು ʻನಮ್ಮ ಡಿ ಬಾಸ್ʼಗೇ ಕೆಡುಕಾಗುತ್ತಿವೆ ಎಂದು ಅರ್ಥವಾದಂತಿದೆ. ಹೀಗಾಗಿ ದರ್ಶನ್ʻಗೆ ಜಾಮೀನಾಗುತ್ತಿದ್ದಂತೆಯೇ ಅಭಿಮಾನಿಗಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ದೊಡ್ಡ ಪಟ್ಟಿಯನ್ನೇ ಮಾಡಿಕೊಂಡಿದ್ದಾರೆ. ಆ ಪಟ್ಟಿಯಲ್ಲಿರೋದು ಮೂರೇ ಮೂರು ಎಚ್ಚರಿಕೆಗಳು.
ಎಚ್ಚರಿಕೆ ನಂ.1 : ಬೇರೆ ನಟರ ಬಗ್ಗೆ ಮಾತು ಬೇಡ
ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆ ವೇಳೆ ಬೇರೆ ನಟರನ್ನು ನಿಂದಿಸಬಾರದು. ಅದು ನಟರ ಅಭಿಮಾನಿಗಳು ದರ್ಶನ್ ವಿರುದ್ಧ ನಿಲ್ಲುವಂತೆ ಮಾಡುತ್ತವೆ.
ಎಚ್ಚರಿಕೆ ನಂ.2 : ಮಾಧ್ಯಮಗಳನ್ನು ಕೆಣಕುವುದೂ ಬೇಡ
ಮಾಧ್ಯಮಗಳನ್ನೂ ಟೀಕೆ ಮಾಡಬಾರದು. ಯಾರೇನೇ ಟೀಕೆ ಮಾಡಿದರೂ, ಮಾಧ್ಯಮಗಳು ಜನಾಭಿಪ್ರಾಯ ಮೂಡಿಸುತ್ತವೆ. ಮಾಧ್ಯಮಗಳನ್ನು ಟೀಕೆ ಮಾಡುತ್ತಾ ಹೋದರೆ ನಮ್ಮ ದರ್ಶನ್ʻಗೇ ತೊಂದರೆ
ಎಚ್ಚರಿಕೆ ನಂ.3 : ಪೊಲೀಸ್, ನ್ಯಾಯಾಂಗದ ಟೀಕೆ ಬೇಡ
ಈ ಎರಡಕ್ಕಿಂತಲೂ ಹೆಚ್ಚಾಗಿ ಪೊಲೀಸರು ಮತ್ತು ನ್ಯಾಯಾಂಗದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು.
ಈ ಮೂರೂ ಎಚ್ಚರಿಕೆಗಳನ್ನು ಅಭಿಮಾನಿಗಳಿಗೇ ಅಭಿಮಾನಿಗಳೇ ರವಾನಿಸಿಕೊಂಡಿದ್ದಾರೆ. ದರ್ಶನ್ ಅವರಿಗೆ ಜಾಮೀನು ಸಿಗುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ತಾವು ಇದ್ದ ಕಡೆಯೇ ಪಟಾಕಿ ಹಚ್ಚಿ ಸಂಭ್ರಮಿಸಿದವರ ದಂಡೇ ಇದೆ. ಆದರೆ ದರ್ಶನ್ ಪರವಾಗಿ ಘೋಷಣೆಗಳಿದ್ದವೇ ಹೊರತು ಬೇರೆ ನಟರ ವಿರುದ್ಧ, ಅವರ ಅಭಿಮಾನಿಗಳ ವಿರುದ್ಧ, ಪೊಲೀಸ್ ಮತ್ತು ನ್ಯಾಯಾಲಯದ ವಿರುದ್ಧ ಇರಲಿಲ್ಲ. ಮಾಧ್ಯಮಗಳ ಬಗ್ಗೆಯೂ ತುಟಿಗೆ ಹೊಲಿಗೆ ಹಾಕಿಕೊಂಡಿದ್ದ ಫ್ಯಾನ್ಸ್, ದರ್ಶನ್ ಅವರು ಹೊರಬಂದದ್ದನ್ನು ವಿಶೇಷವಾಗಿ ಸ್ವಾಗತಿಸಿದ್ದಾರೆ.
ಸದ್ಯ ದರ್ಶನ್ಗೆ ಸಿಕ್ಕಿರುವುದು ಮಧ್ಯಂತರ ಜಾಮೀನು ಅಷ್ಟೇ. ಅನಾರೋಗ್ಯದ ಕಾರಣಕ್ಕೆ ಈ ಜಾಮೀನು ಕೊಡಲಾಗಿದೆ. ಅವರಿಗೆ ಕೋರ್ಟ್ ಕಡೆಯಿಂದ ಆರು ವಾರಗಳ ಸಮಾಯವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ಅವರು ಚಿಕಿತ್ಸೆ ಪಡೆದು ಬರಬೇಕಿದೆ.
ಈ ಮಧ್ಯೆ ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವುದನ್ನು ಚಿತ್ರರಂಗದ ಹಲವು ನಟ ನಟಿಯರು, ತಂತ್ರಜ್ಞರು ಖುಷಿ ಹಂಚಿಕೊಂಡಿದ್ದಾರೆ. ದರ್ಶನ್ ಅವರ ಜಾಮೀನಿಗೆ ಶ್ಯೂರಿಟಿ ಹಾಕಿರುವುದು ತಮ್ಮ ದಿನಕರ್ ತೂಗುದೀಪ ಮತ್ತು ನಟ ಧನ್ವೀರ್. ಅವರಷ್ಟೇ ಅಲ್ಲದೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಹಲವರು ದರ್ಶನ್ ಬಿಡುಗಡೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಸಂಭ್ರಮಿಸಿದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರಿಕೆ ವಹಿಸಿ, ಮಾಧ್ಯಮಗಳ ಎದುರು ಗಂಭೀರತೆಯಿಂದ ಮಾತನಾಡಿದ್ದಾರೆ.
ರಕ್ಷಿತಾ ಪ್ರೇಮ್ : ಇವತ್ತು ನನ್ನ ಅತ್ಯಂತ ಖುಷಿಯ ದಿನ
ರಚಿತಾ ರಾಮ್ : ‘ಕಾಲಾಯ ತಸ್ಮೈ ನಮಃ’
ಸಂಜನಾ ಗಲ್ರಾನಿ : ದರ್ಶನ್ ಅವರಿಗೆ ಪೂರ್ಣ ಪ್ರಮಾಣದ ಜಾಮೀನು ಸಿಗಲಿ
ತರುಣ್ ಸುಧೀರ್ : ದರ್ಶನ್ ಅವರಿಗೆ ಬೆನ್ನುನೋವು ಹಿಂದಿನಿಂದಲೂ ಇತ್ತು. ಜಾಮೀನು ಸಿಕ್ಕಿದ್ದು ರಿಲೀಫ್ ಸಿಕ್ಕಂತಾಗಿದೆ. ಮನಸ್ಸು ನಿರಾಳವಾಗಿದೆ.
ಸೋನಲ್ ಮಂಥೆರೋ : ಥ್ಯಾಂಕ್ ಗಾಡ್
ನಂದಕಿಶೋರ್ : ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವುದು ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವಾತಾವರಣ ತಂದುಕೊಟ್ಟಿದೆ. ಅವರ ಕುಟುಂಬಕ್ಕೂ ದೇವರು ಒಳ್ಳೆದು ಮಾಡಲಿ
ಮಹೇಶ್ ಕುಮಾರ್ : ದರ್ಶನ್ ಅವರು ಈ ಪ್ರಕರಣದಿಂದ ಬೇಗ ಮುಕ್ತರಾಗಲಿ
ಜಮೀರ್ ಅಹ್ಮದ್ : ಅವರು ನನ್ನ ಆಪ್ತರು. ಆತ್ಮೀಯರಾಗಿರುವ ಕಾರಣಕ್ಕೆ ಜಾಮೀನು ಸಿಕ್ಕಿರುವುದು ಸಹಜವಾಗಿಯೇ ಖುಷಿ ತಂದಿದೆ. ಅವರ ಆರೋಗ್ಯ ವಿಚಾರಿಸುತ್ತೇನೆ..
ಇವರೆಲ್ಲ ಬಹಿರಂಗವಾಗಿ ಮಾತನಾಡಿದ್ದಾರೆ. ಇನ್ನೂ ಕೆಲವರು ವೈಯಕ್ತಿಕವಾಗಿ ದರ್ಶನ್ ಅವರ ಜೊತೆ ನೇರ ಸಂಪರ್ಕದಲ್ಲಿದ್ದು ಬಹಿರಂಗವಾಗಿ ತೋರಿಸಿಕೊಂಡಿಲ್ಲ.



