ಡಾ.ರಾಜ್ ಕುಮಾರ್ ಅವರ ಒಂದು ಸಂಗೀತ ಸಂಜೆ ಕಾರ್ಯಕ್ರಮಕ್ಕೆ 200 ರೂ. ಟಿಕೆಟ್ ದರ ಇತ್ತಾ..? ಹೌದು ಎನ್ನುತ್ತಿದೆ ಒಂದು ಪೋಸ್ಟರ್. 1986ರ ನವೆಂಬರ್ 29ನೇ ತಾರಿಕು ನಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಸಾವಿರಾರು ಜನ ನೂರಾರು ರೂ. ದರ ಕೊಟ್ಟು ಟಿಕೆಟ್ ಖರೀದಿಸಿ, ಸಂಗೀತ ಸಂಜೆಗೆ ಬಂದಿದ್ದರು. ಕಾರ್ಯಕ್ರಮ ನಡೆದಿದ್ದ ಜಾಗ ಕಬ್ಬನ್ ಪಾರ್ಕ್. ಹೀಗೆ 1986ರಲ್ಲಿ ಡಾ.ರಾಜ್‌ಕುಮಾರ್ ನಡೆಸಿಕೊಟ್ಟ ಸಂಗೀತ ರಸ ಸಂಜೆ ಕಾರ್ಯಕ್ರಮದ ಜಾಹೀರಾತೊಂದು ವೈರಲ್ ಆಗಿದೆ. ಈ ಜಾಹೀರಾತಿನಲ್ಲಿ ಡಾ.ರಾಜ್ ಕುಮಾರ್ ಮ್ಯೂಸಿಕ್ ಕಾನ್ಸರ್ಟ್ ಟಿಕೆಟ್ ದರವೂ ಬಹಿರಂಗವಾಗಿದೆ. ಕಬ್ಬನ್ ಪಾರ್ಕ್ ಟೆನ್ನಿಸ್ ಕ್ರೀಡಾಂಗಣದಲ್ಲಿ ಡಾ.ರಾಜ್‌ಕುಮಾರ್ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ ಸಂಗೀತ ಸಂಜೆ ಕಾರ್ಯಕ್ರಮದ ಟಿಕೆಟ್ 30 ರೂಪಾಯಿಯಿಂದ ಆರಂಭಗೊಂಡು ಗರಿಷ್ಠ 200 ರೂಪಾಯಿವರೆಗೆ ನಿಗಧಿಪಡಿಸಲಾಗಿತ್ತು. 30 ರೂಪಾಯಿ, 50 ರೂಪಾಯಿ, 75 ರೂಪಾಯಿ, 100 ರೂಪಾಯಿ ಹಾಗೂ 200 ರೂಪಾಯಿ ಟಿಕೆಟ್ ಮಾರಾಟ ಮಾಡಲಾಗಿತ್ತು. ಡಾ.ರಾಜ್‌ಕುಮಾರ್ ಪ್ರತಿ ಕಾರ್ಯಕ್ರಮದಂತೆ ಈ ಸಂಗೀತ ಕಾರ್ಯಕ್ರಮದ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಇಷ್ಟೇ ಅಲ್ಲ ಟಿಕೆಟ್‌ಗಾಗಿ ಭಾರಿ ಡಿಮ್ಯಾಂಡ್ ಕೂಡ ವ್ಯಕ್ತವಾಗಿತ್ತು.
ಅಂದಹಾಗೆ ಎಂದಿನಂತೆ ಡಾ.ರಾಜ್ ಕುಮಾರ್ ಅವರ ಈ ಕಾರ್ಯಕ್ರಮ ನಡೆದಿದ್ದು ಮಹಾಯೋಗ ಕ್ಷೇತ್ರ ಕಟ್ಟಡ ಸಹಾಯಾರ್ಥಕ್ಕಾಗಿ. ಆಗ ಹಲವು ಸಂಘ ಸಂಸ್ಥೆಗಳು, ಡಾ.ರಾಜ್ ಅವರ ಕಾರ್ಯಕ್ರಮ ಆಯೋಜಿಸಿ ಹಣ ಸಂಗ್ರಹಿಸುತ್ತಿದ್ದವು. ಅವುಗಳನ್ನು ತಮ್ಮ ಸಂಘ ಸಂಸ್ಥೆಗಳ ಸಮಾಜಸೇವೆಗೆ ಬಳಸುತ್ತಿದ್ದವು. ಈಗಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಪೊಲೀಸ್ ಕಟ್ಟಡಗಳು, ಜಿಲ್ಲಾ ಮಟ್ಟದ ಸಾಹಿತ್ಯ ಭವನ, ರಂಗಮಂದಿರಗಳು (ರಂಗಭೂಮಿ ಸಹಾಯಾರ್ಥ ಎಂದರೆ ಡಾ.ರಾಜ್ ತುದಿಗಾಲಲ್ಲಿ ಬರುತ್ತಿದ್ದರು), ಕನ್ನಡ ಭವನಗಳು, ಕ್ರೀಡಾಂಗಣಗಳು, ಮುಂಬೈ, ದೆಹಲಿಯಲ್ಲಿರುವ ಕನ್ನಡ ಭವನಗಳು… ಹೀಗೆ ಹಲವು ಕಟ್ಟಡ ಭವನಗಳಿಗೆ ಹಣ ಸಂಗ್ರಹ ಮಾಡಿರುವುದು ಇಂತಹ ಸಂಗೀತ ಸಂಜೆ ಕಾರ್ಯಕ್ರಮಗಳಿಂದಲೇ. ಈ ಕಾರ್ಯಕ್ರಮಗಳಿಗೆ ಡಾ.ರಾಜ್ ಹಣ ಪಡೆಯುತ್ತಿರಲಿಲ್ಲ. ಬದಲಿಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರಷ್ಟೇ ಅಲ್ಲ, ತಮ್ಮ ಕೈಲಾದ ಹಣ ಸಹಾಯವನ್ನೂ ಮಾಡುತ್ತಿದ್ದರು.
ಈ ಹಳೇ ಪಾಂಪ್ಲೆಟ್ ಇದೀಗ ವೈರಲ್ ಆಗುತ್ತಿದೆ. ಹಲವರು ಕಮೆಂಟ್ ಮಾಡಿದ್ದಾರೆ. ಅಂದಿನ ಸಮಯಕ್ಕೆ ಟಿಕೆಟ್ ದರ ದುಬಾರಿಯಾಗಿತ್ತು. ಇದೀಗ ಅಣ್ಣಾವ್ರ ಸಂಗೀತ ರಸೆ ಸಂಜೆ ಕಾರ್ಯಕ್ರಮವಿದ್ದರೆ ಟಿಕೆಟ್ ಬೆಲೆ ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಲೆಕ್ಕ ಹಾಕಿದ್ದಾರೆ. ಇಂದಿನ ಹಣಕ್ಕೆ ಹೋಲಿಸಿದರೆ ಅದೇ ಟಿಕೆಟ್ ದರ ಕನಿಷ್ಠ 15 ಸಾವಿರ ರೂ. ಇರುತ್ತಿತ್ತು ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ವಿಚಿತ್ರವೇನು ಗೊತ್ತೇ.. ಅಣ್ಣಾವ್ರ ಕಾರ್ಯಕ್ರಮ ಈಗ ನಡೆದರೆ 15 ಸಾವಿರ ಏನು.. 50 ಸಾವಿರ ಕೊಟ್ಟೂ ಹೋಗೋಕೆ ರೆಡಿ ಅಂತಿದ್ದಾರೆ ಫ್ಯಾನ್ಸ್.
ಏಕೆಂದರೆ ಡಾ.ರಾಜ್ ಅಂದು ನಡೆಸಿಕೊಡುತ್ತಿದ್ದ ಕಾರ್ಯಕ್ರಮಗಳ ಉದ್ದೇಶ ಯಾವತ್ತೂ ವೈಯಕ್ತಿಕ ಲಾಭಕ್ಕಾಗಿ ನಡೆದದ್ದಲ್ಲ. ಅಂದಹಾಗೆ ಆಗ ಇದ್ದ ಸಿನಿಮಾ ಟಿಕೆಟ್ ದರ ಗರಿಷ್ಠ ಒಂದು ರೂ., ಎರಡು ರೂ. ಇತ್ತಷ್ಟೇ.



